[ನ್ಯಾ. ಆನಂದ್ ಹತ್ಯೆ] ಸಿಬಿಐನ ಮುಚ್ಚಿದ ಲಕೋಟೆಯಲ್ಲಿ ಏನೂ ಇಲ್ಲ, ದೃಢವಾದದ್ದು ಏನಾದರೂ ಬೇಕು ಎಂದ ಸುಪ್ರೀಂಕೋರ್ಟ್

ಜಾರ್ಖಂಡ್ ಹೈಕೋರ್ಟ್‌ಗೆ ಪ್ರತಿವಾರ ವಸ್ತುಸ್ಥಿತಿ ವರದಿಯ ವಿವರಗಳನ್ನು ತಿಳಿಸುತ್ತಿರಬೇಕು ಎಂದು ಸುಪ್ರೀಂಕೋರ್ಟ್ ಸೋಮವಾರ ಸಿಬಿಐಗೆ ಸೂಚಿಸಿದೆ.
CJI NV Ramana and Supreme Court
CJI NV Ramana and Supreme Court
Published on

ಜಾರ್ಖಂಡ್ ನ್ಯಾಯಾಧೀಶ ಉತ್ತಮ್ ಆನಂದ್ ಹತ್ಯೆಯ ತನಿಖೆಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ವಸ್ತುಸ್ಥಿತಿ ವರದಿಯಲ್ಲಿ ಏನನ್ನೂ ನಿರ್ದಿಷ್ಟವಾಗಿ ತಿಳಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಕೃತ್ಯಕ್ಕೆ ಬಳಸಿದ ವಾಹನಗಳನ್ನು ಸರ್ಕಾರ ವಶಪಡಿಸಿಕೊಂಡಿದ್ದರೂ ಅಪರಾಧದ ಉದ್ದೇಶ ಅಥವಾ ಅದಕ್ಕೆ ಸಂಬಂಧಿಸಿದಂತೆ ವರದಿಯಲ್ಲಿ ಏನನ್ನೂ ಹೇಳಿಲ್ಲ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಹೇಳಿದ್ದಾರೆ. ಮುಚ್ಚಿದ ಲಕೋಟೆಯಲ್ಲಿ ಏನೂ ಇಲ್ಲ, ದೃಢವಾದದ್ದು ಏನಾದರೂ ನಮಗೆ ಬೇಕು. ವಾಹನಗಳನ್ನು ಸರ್ಕಾರ ವಶಪಡಿಸಿಕೊಂಡಿದೆ. ನೀವು (ಸಿಬಿಐ) ಕೃತ್ಯದ ಉದ್ದೇಶದ ಬಗ್ಗೆ ಏನನ್ನೂ ತಿಳಿಸಿಲ್ಲಎಂದು ನ್ಯಾಯಾಲಯ ಹೇಳಿದೆ.

Also Read
ನ್ಯಾ. ಉತ್ತಮ್ ಆನಂದ್ ಸಾವಿನ ತನಿಖೆ ಸಿಬಿಐಗೆ: ಸರ್ಕಾರದ ನಿರ್ಧಾರಕ್ಕೆ ಜಾರ್ಖಂಡ್ ಹೈಕೋರ್ಟ್ ಸಮ್ಮತಿ

ಧನ್‌ಬಾದ್‌ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಉತ್ತಮ್ ಆನಂದ್ ಅವರು ವಾಯುವಿಹಾರದಲ್ಲಿ ತೊಡಗಿದ್ದ ವೇಳೆ ಆಟೊವೊಂದು ಶಂಕಾಸ್ಪದವಾಗಿ ಡಿಕ್ಕಿ ಹೊಡೆದು ಅವರು ಸಾವನ್ನಪ್ಪಿದ್ದರು. ಆರಂಭದಲ್ಲಿ ಇದನ್ನು ಅಪಘಾತ ಎಂದೇ ನಂಬಲಾಗಿತ್ತಾದರೂ ಅವರನ್ನು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಬೀಳಿಸಿರುವುದು ಸಿಸಿಟಿವಿ ದೃಶ್ಯದಿಂದ ಕಂಡುಬಂದಿತ್ತು. ಈ ಸಂಬಂಧ ದಾಖಲಿಸಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಜಾರ್ಖಂಡ್‌ ಹೈಕೋರ್ಟ್‌ಗೆ ಪ್ರತಿವಾರ ವಸ್ತುಸ್ಥಿತಿ ವರದಿಯ ವಿವರಗಳನ್ನು ತಿಳಿಸುತ್ತಿರಬೇಕು ಎಂದು ಸುಪ್ರೀಂಕೋರ್ಟ್‌ ಸೋಮವಾರ ಸಿಬಿಐಗೆ ಸೂಚಿಸಿದೆ. ನ್ಯಾಯಾಧೀಶರ ಹತ್ಯೆಯ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿರುವ ಪ್ರಕರಣವು ಈ ಅವಧಿಯಲ್ಲಿ ಬಾಕಿ ಉಳಿದಿರಲಿದೆ ಎಂದು ಪ್ರಕರಣವನ್ನು ಮುಂದೂಡುವ ಸಂದರ್ಭದಲ್ಲಿ ಪೀಠ ತಿಳಿಸಿತು.

ನ್ಯಾಯಾಧೀಶರ ಸುರಕ್ಷತೆಗೆ ಸಂಬಂಧಿಸಿದ ವಿಸ್ತೃತ ಪ್ರಕರಣವನ್ನು ಸಹ ನಂತರ ಪರಿಗಣಿಸಲಾಗುವುದು ಎಂದ ನ್ಯಾಯಾಲಯ ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳು ತಮ್ಮ ಕೌಂಟರ್ ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ನಿರ್ದೇಶಿಸಿದೆ. ಪ್ರಕರಣವನ್ನು ನಿಯಮಿತವಾಗಿ ಮೇಲ್ವಿಚಾರಣೆ ನಡೆಸುತ್ತಿರುವಂತೆ ಜಾರ್ಖಂಡ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ನ್ಯಾಯಾಲಯ ಸೂಚಿಸಿದೆ.

Also Read
[ನ್ಯಾ. ಉತ್ತಮ್‌ ಆನಂದ್‌ ಕೊಲೆ ಪ್ರಕರಣ] ಪಾಥರ್ಡಿ ಪೊಲೀಸ್‌ ಠಾಣಾಧಿಕಾರಿ ಅಮಾನತು

ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯ ಸಿಬಿಐ ಮತ್ತು ಗುಪ್ತಚರ ದಳವನ್ನು ಕಟು ಮಾತುಗಳಲ್ಲಿ ತರಾಟೆಗೆ ತೆಗೆದುಕೊಂಡಿತ್ತು. ನ್ಯಾಯಾಧೀಶರು ತಮಗೆ ಎದುರಾಗುವ ಬೆದರಿಕೆಗಳ ಬಗ್ಗೆ ದೂರು ನೀಡಿದಾಗಲೂ ಅವರು ನ್ಯಾಯಾಂಗಕ್ಕೆ ಸಹಾಯ ಮಾಡುವುದಿಲ್ಲ ಎಂದು ಹೇಳಿತ್ತು.

ನ್ಯಾಯಾಧೀಶರ ಹತ್ಯೆಗೆ ಸಂಬಂಧಿಸಿದಂತೆ ಜಾರ್ಖಂಡ್ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ಆಗಸ್ಟ್ 12 ರಂದು ನಡೆಯಲಿದೆ.

Kannada Bar & Bench
kannada.barandbench.com