
CJI NV Ramana
ಸುಪ್ರೀಂ ಕೋರ್ಟ್ ಮತ್ತು ದೇಶದ ವಿವಿಧ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆಯನ್ನು ಸಮರ್ಥಿಸಿಕೊಂಡ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನ್ಯಾಯಮೂರ್ತಿಗಳೇ ನ್ಯಾಯಮೂರ್ತಿಗಳನ್ನು ನೇಮಿಸುತ್ತಾರೆ ಎಂಬುದು ವ್ಯಾಪಕವಾಗಿ ಪ್ರಚಾರದಲ್ಲಿರುವ ತಪ್ಪು ಕಲ್ಪನೆ ಎಂದರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಲ್ ನಾಗೇಶ್ವರರಾವ್ ಅವರ ತಂದೆ ದಿವಂಗತ ಶ್ರೀ ಲವು ವೆಂಕಟೇಶ್ವರಲು ಅವರ ಸ್ಮರಣಾರ್ಥ ಭಾನುವಾರ ವಿಜಯವಾಡದಲ್ಲಿ ಏರ್ಪಡಿಸಲಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ 'ಭಾರತೀಯ ನ್ಯಾಯಾಂಗ - ಭವಿಷ್ಯದ ಸವಾಲುಗಳು' ವಿಚಾರವಾಗಿ ಸಿಜೆಐ ಮಾತನಾಡಿದರು.
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಿಗೆ ನ್ಯಾಯಾಧೀಶರ ನೇಮಕಾತಿ ವಿಚಾರ ಬಂದಾಗ ಸುಪ್ರೀಂ ಕೋರ್ಟ್‌ನ ಐವರು ಹಿರಿಯ ನ್ಯಾಯಮೂರ್ತಿಗಳಿರುವ ಕೊಲಿಜಿಯಂ ವ್ಯವಸ್ಥೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂಬ ಮಾತುಗಳಿವೆ. ಆದರೆ ಸಾಂವಿಧಾನಿಕ ನ್ಯಾಯಾಲಯಗಳಿಗೆ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕೇಂದ್ರ ಕಾನೂನು ಸಚಿವಾಲಯ, ರಾಜ್ಯ ಸರ್ಕಾರಗಳು, ರಾಜ್ಯಗಳ ರಾಜ್ಯಪಾಲರು, ಹೈಕೋರ್ಟ್ ಕೊಲಿಜಿಯಂಗಳು, ಇಂಟೆಲಿಜೆನ್ಸ್ ಬ್ಯೂರೋ ಕಡೆಗೆ ಕಾರ್ಯಾಂಗದ ಅತ್ಯುನ್ನತ ಹುದ್ದೆ ಅಲಂಕರಿಸಿರುವವರು ಸೇರಿದಂತೆ ಅನೇಕರು ಭಾಗಿಯಾಗುತ್ತಾರೆ ಎಂದು ಅವರು ತಿಳಿಸಿದರು.
ಅವರೆಲ್ಲರೂ ಅಭ್ಯರ್ಥಿಯ ಅರ್ಹತೆಯನ್ನು ಪರಿಶೀಲಿಸುತ್ತಾರೆ. ಈ ಕೆಲಸವನ್ನು ನ್ಯಾಯಾಂಗವೊಂದೇ ಮಾಡುತ್ತದೆ ಎನ್ನುವುದು ವ್ಯಾಪಕವಾಗಿ ಪ್ರಚಾರಗೊಂಡ ಮಿಥ್ಯೆಯ ಕಲ್ಪನೆಯಾಗಿದೆ. ಇದು ಕೆಲವೆಡೆ ಮಾತ್ರ ಸರಿಹೊಂದುತ್ತದೆ. ಉತ್ತಮ ತಿಳುವಳಿಕೆಯುಳ್ಳವರು ಸಹ ಈ ಕಲ್ಪನೆಯನ್ನು ಪ್ರಚಾರ ಮಾಡುತ್ತಾರೆ ಎಂದು ಅವರು ವಿಷಾದಿಸಿದರು.
ಇದೇ ವೇಳೆ ಹೆಚ್ಚುತ್ತಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ನ್ಯಾಯಾಧೀಶರ ನೇಮಕಾತಿಗೆ ಶಿಫಾರಸು ಮಾಡುವ ಪ್ರಕ್ರಿಯೆಯನ್ನು ಹೈಕೋರ್ಟ್‌ಗಳು ವೇಗಗೊಳಿಸಬೇಕು ಎಂದ ಸಿಜೆಐ ಶಿಫಾರಸು ವಿಚಾರಗಳನ್ನು ಕೈಗೆತ್ತಿಕೊಳ್ಳುವಂತೆ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ನಿರಂತರ ಮನವೊಲಿಸುತ್ತಿರುವುದಾಗಿ ತಿಳಿಸಿದರು.
ವಿವಿಧ ನ್ಯಾಯಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಆತಂಕಕಾರಿಯಾಗಿದೆ ಎಂದ ಅವರು ಅತ್ಯುತ್ತಮ ಪ್ರತಿಭೆಗಳನ್ನು ಸೆಳೆಯಲು ಮತ್ತು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ನ್ಯಾಯಾಧೀಶರ ಸೇವಾ ಪರಿಸ್ಥಿತಿಗಳನ್ನು ಸುಧಾರಿಸಲು ಕರೆ ನೀಡಿದರು.
ಎರಡು ಮೂರು ದಶಕಗಳ ಕಾಲ ನ್ಯಾಯಾಂಗದಲ್ಲಿ ಸೇವೆ ಸಲ್ಲಿಸಿದ್ದರೂ, ನಿವೃತ್ತಿಯ ನಂತರವೂ ನ್ಯಾಯಾಧೀಶರಿಗೆ ಮೂಲಭೂತ ಭದ್ರತೆ, ವಸತಿ ಅಥವಾ ಆರೋಗ್ಯ ರಕ್ಷಣೆ ದೊರೆಯುತ್ತಿಲ್ಲ. ಸದೃಢ ಸ್ಪಂದನಾಶೀಲ ಮತ್ತು ಸ್ವತಂತ್ರ ನ್ಯಾಯಾಂಗದ ಬಗ್ಗೆ ನಾವು ಚರ್ಚಿಸುತ್ತೇವಾದರೆ ಇಂತಹವುಗಳ ಬಗ್ಗೆಯೂ ಚರ್ಚಿಸಬೇಕು ಎಂದು ಅವರು ಗಮನ ಸೆಳೆದರು.
ಇತ್ತೀಚಿನ ದಿನಗಳಲ್ಲಿ ವಿವಿಧ ನ್ಯಾಯಾಧೀಶರನ್ನು ನೇಮಿಸುವ ವಿಚಾರದಲ್ಲಿ ಸರ್ಕಾರ ನಡೆಸಿದ ಯತ್ನಕ್ಕೆ ಸಿಜೆಐ ಮೆಚ್ಚುಗೆ ಸೂಚಿಸಿದರು. ಇದೇ ವೇಳೆ ಹೈಕೋರ್ಟ್ ಶಿಫಾರಸುಗಳನ್ನು ಕೇಂದ್ರ ಕಾನೂನು ಸಚಿವಾಲಯ ಸುಪ್ರೀಂಕೋರ್ಟ್‌ಗೆ ಇನ್ನಷ್ಟೇ ರವನಾನಿಸಬೇಕಿದೆ ಎಂದ ಅವರು ಮಲಿಕ್ ಮಝರ್ ಪ್ರಕರಣದಲ್ಲಿ ಸರ್ಕಾರವು ನಿಗದಿಪಡಿಸಿದ ಗಡುವನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ ಎಂಬುದಾಗಿ ಸರ್ಕಾರಕ್ಕೆ ನೆನಪಿಸಿದರು.
ದೇಶದ 25 ಹೈಕೋರ್ಟ್‌ಗಳಿಗೆ ಮಂಜೂರಾದ ನ್ಯಾಯಮೂರ್ತಿಗಳ ಸಂಖ್ಯೆ 1,098. ಈ ಪೈಕಿ ಡಿಸೆಂಬರ್ 1ಕ್ಕೆ 402 ಹುದ್ದೆಗಳು ಖಾಲಿ ಇವೆ. ಸಿಜೆಐ ಮತ್ತು ನ್ಯಾಯಮೂರ್ತಿಗಳಾದ ಯುಯು ಲಲಿತ್, ಎ ಎಂ ಖಾನ್ವಿಲ್ಕರ್, ಡಿ ವೈ ಚಂದ್ರಚೂಡ್ ಮತ್ತು ಎಲ್ ನಾಗೇಶ್ವರ ರಾವ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಕೊಲಿಜಿಯಂ ಇತ್ತೀಚೆಗೆ ಎಂಟು ಹೈಕೋರ್ಟ್‌ಗಳಿಗೆ ಖಾಯಂ ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿ ಪೂರ್ಣಗೊಳಿಸಿತ್ತು. ಪ್ರಸ್ತುತ, 25ರಲ್ಲಿ ಎಂಟು ಹೈಕೋರ್ಟ್‌ಗಳು ಖಾಯಂ ಮುಖ್ಯ ನ್ಯಾಯಮೂರ್ತಿಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಮೂವರು ಮಹಿಳಾ ನ್ಯಾಯಮೂರ್ತಿಗಳು ಸೇರಿದಂತೆ ಸುಪ್ರೀಂಕೋರ್ಟ್‌ಗೆ ಒಂಬತ್ತು ಹೊಸ ನ್ಯಾಯಮೂರ್ತಿಗಳ ನೇಮಕಾತಿಯನ್ನು ಕೊಲಿಜಿಯಂ ಇತ್ತೀಚೆಗೆ ಅಂಗೀಕರಿಸಿದೆ.