ನ್ಯಾಯಾಧೀಶರು ದಿನಕ್ಕೆ 14-15 ಗಂಟೆ ಕಾಲ ಕೆಲಸ ಮಾಡುತ್ತಾರೆ, ವೃತ್ತಿ-ಬದುಕಿನ ನಡುವೆ ಸಮತೋಲನವಿಲ್ಲ: ನ್ಯಾ. ಪ್ರತಿಭಾ

ನ್ಯಾಯಾಧೀಶರು ಬಹಳಷ್ಟು ತ್ಯಾಗ ಮಾಡುತ್ತಾರೆ, ಆದರೆ ಅವರ ಕುಟುಂಬಗಳು ಅದಕ್ಕೂ ಹೆಚ್ಚು ತ್ಯಾಗ ಮಾಡುತ್ತವೆ ಎಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಲಾಏಷಿಯಾ ಸಮ್ಮೇಳನದ ಸಮಾರೋಪ ದಿನವಾದ ಸೋಮವಾರ ನ್ಯಾ. ಸಿಂಗ್ ಹೇಳಿದರು.
 ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್
ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್

ಭಾರತದಲ್ಲಿ ನ್ಯಾಯಾಧೀಶರು ಸಾಕಷ್ಟು ಕೆಲಸ ಮಾಡುವುದಿಲ್ಲ ಎಂಬ ತಪ್ಪು ಕಲ್ಪನೆಯನ್ನು ತೊಡೆದುಹಾಕುವ ರೀತಿಯಲ್ಲಿ ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು ಮಾತನಾಡಿದ್ದಾರೆ. ನ್ಯಾಯಾಧೀಶರು ವಾಸ್ತವದಲ್ಲಿ ದಿನಕ್ಕೆ 14ರಿಂದ 15 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಏಷಿಯಾ ಮತ್ತು ಪೆಸಿಫಿಕ್‌ ಕಾನೂನು ಸಂಘದ ವತಿಯಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ 36ನೇ ಲಾಏಷಿಯಾ ಸಮಾವೇಶದ ಸಮಾರೋಪದ ದಿನವಾದ ಸೋಮವಾರ ʼತೀರ್ಪು ನೀಡುವಿಕೆಯ ಅತ್ಯಂತ ಆನಂದದಾಯಕ ಮತ್ತು ಸವಾಲಿನ ಅಂಶ ʼ ಎಂಬ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ಬಾಕಿ ಇರುವ ಬೃಹತ್ ಪ್ರಕರಣಗಳನ್ನು ನಿಭಾಯಿಸಲು ನ್ಯಾಯಾಲಯದ ರಜೆಗಳನ್ನು ತೆಗೆದುಹಾಕಬೇಕೇ ಎಂಬ ಚರ್ಚೆ ವೇಳೆ ಈ ವಿಚಾರ ಪ್ರಸ್ತಾಪಿಸಿದ ನ್ಯಾ. ಪ್ರತಿಭಾ ʼಇಂತಹ ಅವಿರತ ದುಡಿಮೆಯಿಂದಾಗಿ ವೃತ್ತಿ ಮತ್ತು ಬದುಕಿನ ನಡುವೆ ಸಮತೋಲನ ಕಾಪಾಡಿಕೊಳ್ಳುವುದು ಅವರಿಗೆ ತುಂಬಾ ಕಷ್ಟಕರವಾಗಿದೆʼ ಎಂದರು.

ʼನ್ಯಾಯಾಲಯಗಳಿಗೆ ಇರುವ ಬೇಸಿಗೆ, ಚಲಿಗಾಲದ ರಜೆ ತೆಗೆದುಹಾಕಬೇಕು ಎಂದು ಆಗಾಗ್ಗೆ ಮಾಧ್ಯಮಗಳಲ್ಲಿ ಓದುತ್ತಿರುತ್ತೇನೆ. ನ್ಯಾಯಾಧೀಶರು 10:30 ರಿಂದ 4:30 ರವರೆಗೆ ಕೆಲಸ ಮಾಡಿ ನಂತರ ಗಾಲ್ಫ್‌ ಆಡಲು ಹೊರಟುಬಿಡುತ್ತಾರೆ ಎಂಬ ಕಲ್ಪನೆ ಇದೆ. ನ್ಯಾಯಾಲಯಕ್ಕೆ ಬರುವ ಮೊದಲು ನಾವು ಎರಡು ಗಂಟೆಗಳ ಕಾಲ ಕೆಲಸ ಮಾಡುತ್ತೇವೆ. ನಂತರ 4:30 ರವರೆಗೆ ನ್ಯಾಯಾಲಯದಲ್ಲಿರುತ್ತೇವೆ. ನಂತರ ಆದೇಶಗಳನ್ನು ಅಂತಿಮಗೊಳಿಸಬೇಕಿದ್ದು ಅದಕ್ಕೂ ಮೊದಲು ಒಂದು ಗಂಟೆ ಆಡಳಿತಕ್ಕೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸುತ್ತೇವೆ. ಬಳಿಕ ಮರುದಿನದ ಪ್ರಕರಣಗಳ ಸಾರಾಂಶಗಳನ್ನು ಓದಿಕೊಳ್ಳುತ್ತೇವೆ. ಭಾರತದಲ್ಲಿ ನ್ಯಾಯಾಧೀಶರು ದಿನಕ್ಕೆ 14 ರಿಂದ 15 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಕೆಲಸ-ಜೀವನ ಸಮತೋಲನವನ್ನು ಕಾಪಾಡಿಕೊಳ್ಳುವುದು ನಮಗೆ ತುಂಬಾ ಕಷ್ಟಕರವಾಗಿದೆʼ ಎಂದು ಅವರು ಹೇಳಿದರು.

"ಅಂತಹ ಹುದ್ದೆ ಬಯಸುವಂತಹ ಕಾರ್ಯಭಾರವನ್ನು ಕೇವಲ ನ್ಯಾಯಾಧೀಶರಷ್ಟೇ ಹೊರುವುದಿಲ್ಲ. ನ್ಯಾಯಾಧೀಶರು ಬಹಳಷ್ಟು ತ್ಯಾಗ ಮಾಡುತ್ತಾರೆ, ಆದರೆ ಅವರ ಕುಟುಂಬಗಳು ಅವರಿಗಿಂತಲೂ ಹೆಚ್ಚು ತ್ಯಾಗ ಮಾಡುತ್ತವೆ" ಎಂದು ನ್ಯಾ. ಸಿಂಗ್ ಹೇಳಿದರು.

ಶ್ರೀಲಂಕಾದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅರ್ಜುನ ಒಬೆಸೆಕೆರೆ , ನೇಪಾಳದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸಪ್ನಾ ಪ್ರಧಾನ್ ಮಲ್ಲಾ , ಆಸ್ಟ್ರೇಲಿಯಾದ ಸಿಎಸ್ಸಿ ಒಎಎಂ ಫೆಡರಲ್ ಸರ್ಕ್ಯೂಟ್ ಮತ್ತು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಡಗ್ಲಾಸ್ ಜಾನ್ ಹಂಫ್ರೇಸ್‌ ಮತ್ತು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ಭೂ ಮತ್ತು ಪರಿಸರ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ  ಬ್ರಯಾನ್ ಪ್ರೆಸ್ಟನ್ ಅವರು ಅಧಿವೇಶನದಲ್ಲಿ ಭಾಷಣಕಾರರಾಗಿದ್ದರು.

ಲಾ ಏಷ್ಯಾ ಸಮ್ಮೇಳನ, ದಿನ 4
ಲಾ ಏಷ್ಯಾ ಸಮ್ಮೇಳನ, ದಿನ 4

ನ್ಯಾ. ಪ್ರತಿಭಾ ಅವರ ಮಾತಿಗೆ ಇತರ ಭಾಷಣಕಾರರು ತಲೆದೂಗಿದರು. ನ್ಯಾಯಾಧೀಶರು ತಮ್ಮ ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟ ಎನ್ನುವ ಅಭಿಪ್ರಾಯಕ್ಕೆ ತಮ್ಮ ಸಹಮತ ವ್ಯಕ್ತಪಡಿಸಿದರು.

ನವೆಂಬರ್ 24ರ ಶುಕ್ರವಾರ ಪ್ರಾರಂಭವಾದ 36 ನೇ ಲಾಏಷಿಯಾ ಸಮ್ಮೇಳನ ಇಂದು ಸಮಾರೋಪಗೊಳ್ಳಲಿದೆ.

Kannada Bar & Bench
kannada.barandbench.com