ಸುಪ್ರೀಂ ಕೋರ್ಟ್ ಶನಿವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, “ನ್ಯಾಯಾಲಯದ ಕೊಠಡಿಗಳಲ್ಲಿ ಹೇಳಿಕೆಗಳನ್ನು ನೀಡುವಾಗ ನ್ಯಾಯಾಂಗ ಸಂಯಮದಿಂದ ವರ್ತಿಸಬೇಕು” ಎಂದು ಒತ್ತಾಯಿಸಿದರು.
"ನ್ಯಾಯಾಧೀಶರು ನ್ಯಾಯಾಲಯದ ಕೊಠಡಿಗಳಲ್ಲಿ ಹೇಳಿಕೆ ನೀಡುವಾಗ ಸಂಪೂರ್ಣ ವಿವೇಚನೆ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಒಳ್ಳೆಯ ಉದ್ದೇಶದಿಂದ ವಿವೇಚನಾರಹಿತ ಹೇಳಿಕೆಗಳನ್ನು ನೀಡಿದ್ದರೂ ಕೂಡ, ನ್ಯಾಯಾಂಗವನ್ನು ಕೆಳಗಿಳಿಸುವ ಸಂಶಯಾಸ್ಪದ ವ್ಯಾಖ್ಯಾನಗಳಿಗೆ ಅವಕಾಶ ನೀಡುತ್ತದೆ." ಎಂದು ಅಭಿಪ್ರಾಯಪಟ್ಟರು.
"ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಂಗದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ನನಗೆ ನೋವುಂಟುಮಾಡುತ್ತದೆ. ಮಾಧ್ಯಮಗಳು ಮಾಹಿತಿಯನ್ನು ಪ್ರಜಾಸತ್ತಾತ್ಮಕವಾಗಿಸಲು ಕೆಲಸ ಮಾಡಿದ್ದರೂ ಅದರಲ್ಲಿ ಒಂದು ಕರಾಳ ಮುಖವಿದೆ. ಬಳಕೆದಾರರಿಗೆ ನೀಡಲಾದ ಅನಾಮಧೇಯತೆಯನ್ನು ಕೆಲವು ಕಿಡಿಗೇಡಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ" ಎಂದರು.
ಸಾಮಾಜಿಕ ಮಾಧ್ಯಮದಲ್ಲಿ ನ್ಯಾಯಾಂಗದ ಮೇಲೆ ನಡೆಯುತ್ತಿರುವ ದಾಳಿಗಳನ್ನು ಸಾಮೂಹಿಕವಾಗಿ ಪರಿಶೀಲನೆಗೆ ಒಳಪಡಿಸುವಂತೆ ಅವರು ಕರೆ ನೀಡಿದರು. ನ್ಯಾಯಾಂಗ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಕೂಡ ಇಂತಹುದೇ ಪರಿಶೀಲನೆ ಅಗತ್ಯ ಎಂದು ಅವರು ತಿಳಿಸಿದರು. ಇದಲ್ಲದೆ, ನಾಗರಿಕ ಸೇವೆಗಳ ರೀತಿಯಲ್ಲಿ ನ್ಯಾಯಾಧೀಶರನ್ನು ಕೇಂದ್ರೀಯವಾಗಿ ನೇಮಕ ಮಾಡಲು ಅಖಿಲ ಭಾರತ ನ್ಯಾಯಾಂಗ ಸೇವೆಯಂತಹ ಸುಧಾರಣಾ ಕ್ರಮ ಜಾರಿಗಾಗಿ ಸುದೀರ್ಘ ಹೆಜ್ಜೆ ಇರಿಸಬೇಕಿದೆ ಎಂದು ಕರೆ ನೀಡಿದರು.