Mining
Mining

ರಾಜ್ಯಗಳಿಗೆ ಗಣಿಗಾರಿಕೆ ಮೇಲೆ ತೆರಿಗೆ ವಿಧಿಸುವ ಹಕ್ಕಿನ ಕುರಿತಾದ ತೀರ್ಪು 2005ರಿಂದ ಪೂರ್ವಾನ್ವಯ: ಸುಪ್ರೀಂ ಕೋರ್ಟ್

ಏಪ್ರಿಲ್ 1, 2026 ರಿಂದ ಪ್ರಾರಂಭವಾಗುವ 12 ವರ್ಷಗಳ ಅವಧಿಯ ತೆರಿಗೆ ಪಾವತಿಯನ್ನು ಕಂತುಗಳಲ್ಲಿ ಪಾವತಿಸಲು ನ್ಯಾಯಾಲಯ ಸೂಚಿಸಿದೆ.
Published on

ಗಣಿಗಾರಿಕೆ ಮತ್ತು ಅದಿರು-ಬಳಕೆ ಚಟುವಟಿಕೆಗಳ ಮೇಲೆ ಸೆಸ್ ವಿಧಿಸುವ ಅಧಿಕಾರ ರಾಜ್ಯಗಳಿಗೆ ಇದೆ ಎಂದು ತಾನು ಜುಲೈ  25ರಂದು ನೀಡಿದ್ದ ತೀರ್ಪು ಏಪ್ರಿಲ್ 1, 2005ರ ನಂತರದ ವಹಿವಾಟುಗಳಿಗೆ ಸಂಬಂಧಿಸಿದಂತೆ ಪೂರ್ವಾನ್ವಯವಾಗಲಿದೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ತೀರ್ಪು ನೀಡಿದೆ [ಖನಿಜ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಇತ್ಯಾ ಮತ್ತು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಇನ್ನಿತರರ ನಡುವಣ ಪ್ರಕರಣ ].

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಅಭಯ್ ಎಸ್ ಓಕಾ, ಬಿ ವಿ ನಾಗರತ್ನ, ಜೆ ಬಿ ಪರ್ದಿವಾಲಾ, ಮನೋಜ್ ಮಿಶ್ರಾ, ಉಜ್ಜಲ್ ಭುಯಾನ್, ಸತೀಶ್ ಚಂದ್ರ ಶರ್ಮಾ ಹಾಗೂ ಆಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠ ಈ ತೀರ್ಪಿತ್ತಿದೆ. ಈ ತೆರಿಗೆ ಏಪ್ರಿಲ್ 1, 2005ರ ಮೊದಲಿನ ವಹಿವಾಟುಗಳಿಗೆ ಅನ್ವಯವಾಗದು ಎಂದು ಅದು ಇದೇ ವೇಳೆ ಸ್ಪಷ್ಟಪಡಿಸಿದೆ.

Also Read
ಗಣಿ ಚಟುವಟಿಕೆಗೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಅಧಿಕಾರ ಇದೆ ಎಂದ ಸುಪ್ರೀಂ ಕೋರ್ಟ್; ನ್ಯಾ. ನಾಗರತ್ನ ಭಿನ್ನ ತೀರ್ಪು

ರಾಜ್ಯಗಳು ತೆರಿಗೆ ವಿಧಿಸಬಹುದು ಮತ್ತು ನವೀಕರಿಸಬಹುದಾಗಿದ್ದರೂ ತೆರಿಗೆ ವಿಧಿಸುವಿಕೆ ಏಪ್ರಿಲ್ 1, 2005ರ ಮೊದಲು ಮಾಡಿದ ವಹಿವಾಟುಗಳಿಗೆ ಅನ್ವಯಿಸುವುದಿಲ್ಲ.

ಸುಪ್ರೀಂ ಕೋರ್ಟ್

ಪೂರ್ವಾನ್ವಯವಾಗಲಿರುವ ತೆರಿಗೆ ಒತ್ತಾಯದ ಪಾವತಿಗಳನ್ನು ಮಾಡಲು ಏಪ್ರಿಲ್ 1, 2026ರಿಂದ ಆರಂಭವಾಗುವಂತೆ 12 ವರ್ಷಗಳ ಅವಧಿಗೆ ಕಂತುಗಳಲ್ಲಿ ವಿಂಗಡಿಸಲು ನ್ಯಾಯಾಲಯ ಸೂಚಿಸಿದೆ. ಜುಲೈ 25, 2024ರಂದು ಅಥವಾ ಅದಕ್ಕೂ ಮೊದಲು ವಿಧಿಸಿದ್ದ ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.

ಆದರೆ ಈ ಹಿಂದೆ ಅಂದರೆ ಜುಲೈ 25, 2024ರಂದು ಪ್ರಕಣಕ್ಕೆ ಸಂಬಂಧಿಸಿದಂತೆ  ಭಿನ್ನ ತೀರ್ಪು ನೀಡಿದ್ದ ನ್ಯಾ. ನಾಗರತ್ನ ಅವರು ಇಂದು ತೀರ್ಪಿಗೆ ಸಹಿ ಹಾಕಲಿಲ್ಲ.

ಗಣಿ ನಿರ್ವಾಹಕರು ಕೇಂದ್ರ ಸರ್ಕಾರಕ್ಕೆ ಪಾವತಿಸುವ ರಾಯಧನ ತೆರಿಗೆಯಲ್ಲ. ಗಣಿಗಾರಿಕೆ ಮತ್ತು ಅದಿರು-ಬಳಕೆ ಚಟುವಟಿಕೆಗಳ ಮೇಲೆ ಸೆಸ್ ವಿಧಿಸುವ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಜುಲೈ 25ರಂದು ಹೇಳಿತ್ತು.

ಆದರೆ ತನ್ನ ತೀರ್ಪು ಪೂರ್ವಾನ್ವಯವಾಗಲಿದೆಯೇ ಎಂದು ನಿರ್ಧರಿಸುವುದಕ್ಕಾಗಿ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಮತ್ತೆ ಆಲಿಸಿತು.

Also Read
ಗಣಿ ಉದ್ಯಮಿ ವಿರುದ್ಧ ಮಾಜಿ ಶಾಸಕ ಅನಿಲ್ ಲಾಡ್ ದಾಖಲಿಸಿದ್ದ ದೂರು ರದ್ದುಪಡಿಸಿದ ಹೈಕೋರ್ಟ್

ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ (ಗಣಿ ಕಾಯಿದೆ) ಜಾರಿಗೊಳಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರಗಳಿಗೆ ಗಣಿ ಮತ್ತು ಖನಿಜಗಳ ಮೇಲೆ ತೆರಿಗೆ ವಿಧಿಸುವ ಮತ್ತು ನಿಯಂತ್ರಿಸುವ ಅಧಿಕಾರ ನಿರಾಕರಿಸಲಾಗಿದೆಯೇ ಎಂಬ ಕಾರಣಕ್ಕೆ ಈ ಮೊದಲು ದಾವೆ ಹೂಡಲಾಗಿತ್ತು.

ಸಾರ್ವಜನಿಕ ವಲಯದ ಕಂಪನಿಗಳಿಗೆ ವಾಣಿಜ್ಯ ನಷ್ಟ ತಪ್ಪಿಸಲು ಕಟ್ಟುನಿಟ್ಟಾಗಿ ಪೂರ್ವಾನ್ವಯವಾಗದಂತೆ ತೀರ್ಪನ್ನು ಜಾರಿಗೆ ತರಬೇಕು ಎಂದು ವಿವಿಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ವಾದಿಸಿದ್ದವು. ಆದರೆ ತೆರಿಗೆ ಪೂರ್ವಾನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಇದೀಗ ತೀರ್ಪು ನೀಡಿದೆ.

Kannada Bar & Bench
kannada.barandbench.com