Malad building collapse
Malad building collapseHindustan Times

ಮಲಾಡ್‌ ಕಟ್ಟಡ ನೆಲಸಮ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಬಾಂಬೆ ಹೈಕೋರ್ಟ್‌

ದೇಶದಲ್ಲಿ ಮುಂಬೈ ಮತ್ತು ಸುತ್ತಲಿನ ಪಾಲಿಕೆಗಳ ಬಗ್ಗೆ ಈ ಘಟನೆಯಿಂದಾಗಿ ಯಾವ ಅಭಿಪ್ರಾಯ ಮೂಡಲಿದೆ? ಕಟ್ಟಡ ಕುಸಿತ ಘಟನೆಗಳು ಮುಂಬೈ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಮಾತ್ರವೇ ಏಕೆ ಘಟಿಸುತ್ತವೆ ಎನಿಸದೆ ಎಂದು ನ್ಯಾ. ಕುಲಕರ್ಣಿ ಪ್ರಶ್ನಿಸಿದರು.

ಕಟ್ಟಡ ನೆಲಸಮ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡರೂ ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಗಳು ಎಚ್ಚತ್ತುಕೊಳ್ಳದಿರುವುದನ್ನು ಅರಿತ ಬಾಂಬೆ ಹೈಕೋರ್ಟ್‌ ಶುಕ್ರವಾರ ಮಲಾಡ್‌ ಕಟ್ಟಡ ನೆಲಸಮ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆದೇಶಿಸುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದೆ.

ಮೇ 15 ರಿಂದ ಜೂನ್‌ 10ರ ಒಳಗೆ ನಾಲ್ಕು ಕಟ್ಟಡ ನೆಲಸಮ ಪ್ರಕರಣಗಳು ವರದಿಯಾಗಿವೆ. ಈ ದುರಂತದಿಂದಾಗಿ 24 ಮಂದಿ ಸಾವನ್ನಪ್ಪಿದ್ದು, 23 ಮಂದಿ ಗಾಯಗೊಂಡಿರುವುದನ್ನು ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್‌ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು ಗಂಭೀರವಾಗಿ ಪರಿಗಣಿಸಿದೆ.

ಕಟ್ಟಡ ನೆಲಸಮ ಪ್ರಕರಣಗಳು ವರದಿಯಾಗಿರುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡರೂ ಪಾಲಿಕೆ ಅಧಿಕಾರಿಗಳು ಭವಿಷ್ಯದಲ್ಲಿ ಇಂಥ ಕಟ್ಟಡ ನೆಲಸಮವಾಗದಂತೆ ಎಚ್ಚರವಹಿಸುವ ಸಂಬಂಧ ಇನ್ನಷ್ಟೇ ಸಕಾರಾತ್ಮಕ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಪೀಠ ಹೇಳಿತು. ಅಲ್ಲದೇ, ಮಲಾಡ್‌ ಕಟ್ಟಡ ನೆಲಸಮ ಪ್ರಕರಣದ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು, ಇದರ ನೇತೃತ್ವವನ್ನು ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜೆ ಪಿ ದಿಯೋಧರ್‌ ಅವರಿಗೆ ವಹಿಸಿದೆ. ಈ ಸಂಬಂಧದ ಪ್ರಾಥಮಿಕ ವರದಿಯನ್ನು ಜೂನ್‌ 24ರ ಒಳಗೆ ಸಲ್ಲಿಸುವಂತೆ ಪೀಠ ಆದೇಶಿಸಿದೆ.

ನಾಲ್ಕರ ಪೈಕಿ ಬಿಎಂಸಿ ವ್ಯಾಪ್ತಿಯಲ್ಲಿ ಎರಡು ಕಟ್ಟಡ ನೆಲಸಮ ಪ್ರಕರಣ ವರದಿಯಾಗಿದ್ದು, ಈ ಸಂಬಂಧ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆಯೇ ಎಂದು ಬಿಎಂಸಿಯನ್ನು ಪೀಠ ಪ್ರಶ್ನಿಸಿತು.

ದೇಶದಲ್ಲಿ ಮುಂಬೈ ಮತ್ತು ಸುತ್ತಲಿನ ಪಾಲಿಕೆಗಳ ಬಗ್ಗೆ (ಕಟ್ಟಡ ಕುಸಿತದ ಪ್ರಕರಣಗಳಿಂದ) ಕೆಟ್ಟ ಅಭಿಪ್ರಾಯ ಮೂಡದೆ? ಇಂತಹ ಘಟನೆಗಳು ಮುಂಬೈ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಮಾತ್ರವೇ ಏಕೆ ಘಟಿಸುತ್ತವೆ ಎಂದೆನಿಸದೆ ಎಂದು ನ್ಯಾ ಕುಲಕರ್ಣಿ ಪ್ರಶ್ನಿಸಿದರು. ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ಇದೆ. ಆದರೆ, ಬಿಎಂಸಿ ಆಯುಕ್ತರು ಏಕೆ ಇಂಥ ಪ್ರಕರಣಗಳ ಕುರಿತು ಕ್ರಮಕೈಗೊಂಡಿಲ್ಲ ಎಂದು ನ್ಯಾ. ಕುಲಕರ್ಣಿ ಕೇಳಿದರು.

“ಜವಾಬ್ದಾರಿ ನಿಭಾಯಿಸಲು ವಿಫಲರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ. ನಾವು ಜನರ ಜೀವನಗಳ ಜೊತೆ ಆಟವಾಡುತ್ತಿದ್ದೇವೆ. ಕಾರ್ಪೊರೇಟರ್‌ಗಳು ಏನು ಮಾಡುತ್ತಿದ್ದಾರೆ? ಸಮಸ್ಯೆ ಪರಿಹರಿಸಲು ಅವರು ಮುಂದಾಗಬೇಕು. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಮತದಾರರ ಬಳಿಗೆ ಹೋಗುವುದಲ್ಲ. ಈ ಸಮಸ್ಯೆಯತ್ತ ಅವರೇಕೆ ಬೆರಳು ಮಾಡುತ್ತಿಲ್ಲ?” ಎಂದು ಪೀಠ ಕಠಿಣವಾಗಿ ಪ್ರಶ್ನಿಸಿತು.

Also Read
ಕಂಗನಾ V. ಬಿಎಂಸಿ: ಕಟ್ಟಡ ಧ್ವಂಸ ಕಾರ್ಯಾಚರಣೆ ಹಿಂದೆ ದುರುದ್ದೇಶ ಗೋಚರಿಸುತ್ತದೆ ಎಂದ ಬಾಂಬೆ ಹೈಕೋರ್ಟ್‌

ಶಿಥಿಲವಾದ ಕಟ್ಟಡಗಳ ನೆಲಸಮಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಲಾಗಿದೆಯೇ ಎಂದು ಹಿರಿಯ ವಕೀಲ ಅನಿಲ್‌ ಸಖಾರೆ ಅವರನ್ನು ಪೀಠ ಪ್ರಶ್ನಿಸಿತು. ಕಲೆಕ್ಟರ್‌ಗೆ ಸೇರಿದ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದ್ದು, ಸರ್ಕಾರದ ಸುತ್ತೋಲೆಯ ಅನ್ವಯ ಅಂಥ ಆಸ್ತಿಗಳಿಗೆ ಸಂಬಂಧಿಸಿದಂತೆ ಬಿಎಂಸಿ ಕ್ರಮಕೈಗೊಳ್ಳಲಾಗದು ಎಂದು ಸಖಾರೆ ವಿವರಿಸಿದರು. ಇದನ್ನು ಆಲಿಸಿದ ನ್ಯಾ. ಕುಲಕರ್ಣಿ ಅವರು ಕ್ಷಣಕಾಲ ಚಿಂತಿಸಿ, ಅಂಥ ಕಟ್ಟಡಗಳ ವಿರುದ್ಧ ಕ್ರಮಕೈಗೊಳ್ಳದಂತೆ ಬಿಎಂಸಿಯನ್ನು ಹೊರಗಿಡಲಾಗಿದೆಯೇ ಎಂದು ಪ್ರಶ್ನಿಸಿದರು.

ಆಗ ಮುಖ್ಯ ನ್ಯಾಯಮೂರ್ತಿ ದತ್ತ ಅವರು ಇದಕ್ಕೆ ದನಿಗೂಡಸಿ, ಶಾಸನಬದ್ಧ ಆದೇಶವನ್ನು ಮೀರುವ ಅಧಿಕಾರ ಸುತ್ತೋಲೆಗೆ ಇದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಸಖಾರೆ ಅವರಿಗೆ ಸೂಚಿಸಿದರು. ಕಾನೂನುಬಾಹಿರವಾಗಿ ನಿರ್ಮಿಸಿದ ಕಟ್ಟಡಗಳ ರಕ್ಷಣೆಗೆ ಸಂಬಂಧಿಸಿದಂತೆ ಉಲ್ಲಾಸ್‌ನಗರದಲ್ಲಿರುವ ಪಾಲಿಕೆಯು ಕಾನೂನು ಜಾರಿಗೊಳಿಸಿದೆ ಎಂಬುದನ್ನು ಪೀಠವು ಇದೇ ವೇಳೆ ಗಮನಿಸಿತು.

“ನ್ಯಾಯಾಂಗ ಆದೇಶವನ್ನು ಮೀರುವುದಕ್ಕಾಗಿ ಕಾನೂನು ಜಾರಿಗೆ ಮುಂದಡಿ ಇಡಲಾಗಿದೆ. ಇದು ನಾಗರಿಕ ಸಮಾಜವೇ? ಇದನ್ನು ಯಾರ ಲಾಭಕ್ಕಾಗಿ ಮಾಡಲಾಗುತ್ತಿದೆ? ಜನರ ಹಿತಾಸಕ್ತಿಗಾಗಿ ಕಾನೂನುಗಳನ್ನು ರೂಪಿಸಲಾಗುತ್ತದೆ ಎಂಬುದು ನಮಗೆ ತಿಳಿದಿರುವ ವಿಷಯ. ಇದು ಜನರ ಇಚ್ಛೆಯೇ? ಎಂದು ಪೀಠ ಖಾರವಾಗಿ ಪ್ರಶ್ನಿಸಿತು.

Related Stories

No stories found.
Kannada Bar & Bench
kannada.barandbench.com