ನ್ಯಾಯಾಂಗ ಮತ್ತೊಂದು ಸಾಂಕ್ರಾಮಿಕ ರೋಗಕ್ಕೆ ಎದುರು ನೋಡದೆ ವಿಕಾಸಗೊಳ್ಳುತ್ತಲೇ ಇರಬೇಕು: ಸಿಜೆಐ ಚಂದ್ರಚೂಡ್

ನ್ಯಾಯದಾನಕ್ಕಾಗಿ ಆಧುನಿಕ ವಿಧಾನ ಅಳವಡಿಸಿಕೊಳ್ಳುವಂತೆ ಕೋವಿಡ್ ಸಾಂಕ್ರಾಮಿಕ ನ್ಯಾಯಾಂಗ ವ್ಯವಸ್ಥೆಯನ್ನು ಒತ್ತಾಯಿಸಿತು. ಅದನ್ನು ಇನ್ನಷ್ಟು ವಿಕಸನಗೊಳಿಸುವುದು ಗುರಿಯಾಗಬೇಕು ಎಂದು ಅವರು ಒತ್ತಿ ಹೇಳಿದರು.
CJI DY Chandrachud
CJI DY Chandrachud

ನ್ಯಾಯಾಂಗ ಮತ್ತೊಂದು ಸಾಂಕ್ರಾಮಿಕ ರೋಗಕ್ಕೆ ಎದುರು ನೋಡದೆ ವಿಕಾಸಗೊಳ್ಳುತ್ತಲೇ ಇರಬೇಕು. ವರ್ಚುವಲ್‌ ವಿಚಾರಣೆ ಬಳಕೆಯಂತಹ ಸಕ್ರಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಶುಕ್ರವಾರ ಹೇಳಿದರು.

ನ್ಯಾಯದಾನಕ್ಕಾಗಿ ಆಧುನಿಕ ವಿಧಾನವನ್ನು ಅಳವಡಿಸಿಕೊಳ್ಳುವಂತೆ  ಕೋವಿಡ್‌ ಸಾಂಕ್ರಾಮಿಕವು ನ್ಯಾಯಾಂಗ ವ್ಯವಸ್ಥೆಯನ್ನು ಒತ್ತಾಯಿಸಿತು. ಈಗ ಅದನ್ನು ಇನ್ನಷ್ಟು ವಿಕಸನಗೊಳಿಸುವುದು ಗುರಿಯಾಗಬೇಕು ಎಂದು ಅವರು ಒತ್ತಿ ಹೇಳಿದರು.

ದೆಹಲಿಯಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (SCO) ಸದಸ್ಯ ರಾಷ್ಟ್ರಗಳಲ್ಲಿರುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ 18ನೇ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಕೆ ಎಂ ಜೋಸೆಫ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಿಜೆಐ ಅವರ ಪ್ರಮುಖ ನುಡಿಗಳು

  • ಸರ್ವೋಚ್ಚ ನ್ಯಾಯಾಲಯ ಡಿಜಿಟಲ್‌ ಕ್ಷೇತ್ರಕ್ಕೆ ಉತ್ತೇಜನ ನೀಡುವುದನ್ನು ಮುಂದುವರೆಸಿದೆ. ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಅಳವಡಿಕೆಯು ನ್ಯಾಯಾಂಗ ಸಂಸ್ಥೆಗಳನ್ನು ಎಲ್ಲಾ ನಾಗರಿಕರಿಗೆ ಹೆಚ್ಚು ಸುಲಭಲಭ್ಯವಾಗಿಸಿದೆ ಮಾತ್ರವಲ್ಲದೆ ತಂತ್ರಜ್ಞಾನದಿಂದ ದೂರವಿರುವವರನ್ನು ತಲುಪುವ ಸಾಧನವಾಗಿಯೂ ಕಾರ್ಯ ನಿರ್ವಹಿಸಿದೆ.

  • ವರ್ಚುವಲ್/ಹೈಬ್ರಿಡ್ ವಿಚಾರಣೆಗಳಿಂದಾಗಿ ವಕೀಲರು ಅಥವಾ ದಾವೆದಾರರು ತಮ್ಮ ವಾದ ಮಂಡಿಸಲು ದೇಶದ ಯಾವುದೇ ಭಾಗದಲ್ಲಿ ಕುಳಿತು ನ್ಯಾಯಾಲಯಗಳಿಗೆ ಹಾಜರಾಗಬಹುದಾಗಿದೆ. ಸುಪ್ರೀಂ ಕೋರ್ಟ್ ಕೂಡ ಸಾಂವಿಧಾನಿಕ ಪ್ರಕರಣಗಳ ನೇರ ಪ್ರಸಾರ ಪ್ರಾರಂಭಿಸಿದೆ. ವಿಚಾರಣೆಯ ನೇರ ಪ್ರಸಾರದ ವಿವರಗಳ ಲಿಪ್ಯಂತರ ಮತ್ತು ತೀರ್ಪುಗಳನ್ನು ದೇಶದ ವಿವಿಧ ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸಲು ಕೃತಕ ಬುದ್ಧಿಮತ್ತೆಯನ್ನು ಅದು ಬಳಸಿಕೊಳ್ಳುತ್ತಿದೆ.  ಇದು ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆಯನ್ನು ಒದಗಿಸಲಿದೆ.

  • ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ತ್ವರಿತ ಸ್ಪಂದನೆ, ಇ ನ್ಯಾಯಾಲಯಗಳ ಬಳಕೆ, ವರ್ಚುವಲ್‌ ವಿಧಾನದಲ್ಲಿ ಆನ್‌ಲೈನ್‌ ವಿಚಾರಣೆ, ತುರ್ತು ವಿಚಾರಣೆಗಾಗಿ ಪ್ರಮಾಣಿತ ಕಾರ್ಯಾಚರಣಾ ವಿಧಾನ, ಕಲಾಪಗಳ ನೇರ ಪ್ರಸಾರ, ಇ ಫೈಲಿಂಗ್‌ನಿಂದಾಗಿ ಸುಪ್ರೀಂ ಕೋರ್ಟ್‌ಗೆ ಕೋವಿಡ್‌ ಅಡ್ಡಿಯುಂಟು ಮಾಡಿದ್ದು ಕಡಿಮೆ.

  • ಕೋವಿಡ್‌ ವೇಳೆ ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಬಿಕ್ಕಟ್ಟು, ಜೈಲುಗಳಿಂದ ಕೈದಿಗಳ ತಾತ್ಕಾಲಿಕ ಬಿಡುಗಡೆ, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಉಚಿತ ಕೋವಿಡ್‌ ಚಿಕಿತ್ಸೆ, ವಿಚಾರಣಾಧೀನ ಕೈದಿಗಳ ಬಗ್ಗೆ ಕ್ವಾರಂಟೈನ್‌ ರೀತಿಯ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು ಮತ್ತು ವರ್ಚುವಲ್‌ ವಿಧಾನದ ಮೂಲಕ ನ್ಯಾಯಾಲಯಕ್ಕೆ ಹಾಜರಾಗುವಿಕೆಗೆ ಸಂಬಂಧಿಸಿದ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ಸ್ವಯಂ-ಪ್ರೇರಿತ ಪ್ರಕರಣ ದಾಖಲಿಸಿಕೊಂಡವು. ಹಲವು ಪತ್ರ ಅರ್ಜಿಗಳನ್ನು ಸ್ವೀಕರಿಸಿದವು.

  • ಇಮೇಲ್, ಫ್ಯಾಕ್ಸ್ ಅಥವಾ  ಮೆಸೆಂಜರ್ ಸೇವೆಯ ಮೂಲಕ ನೋಟಿಸ್‌ ಮತ್ತು ಸಮನ್ಸ್‌  ನೀಡಲು ಸುಪ್ರೀಂ ಕೋರ್ಟ್ ಅನುಮತಿಸಿದ್ದು ಮಿತಿಯ ಅವಧಿಯನ್ನು ಕೂಡ ತೆಗೆದುಹಾಕಿದೆ.

Related Stories

No stories found.
Kannada Bar & Bench
kannada.barandbench.com