ಭಾರತ ಮತ್ತು ಬಾಂಗ್ಲ ನಡುವಿನ ನ್ಯಾಯಾಂಗ ಕ್ಷೇತ್ರದ ಅನ್ಯೋನ್ಯತೆ ಮಧುರವಾಗಿದೆ: ನ್ಯಾ. ದೀಕ್ಷಿತ್‌

ಬಾಂಗ್ಲಾದ ರಾಷ್ಟ್ರಗೀತೆ ಅಮರ್‌ ಶೋನಾರ್ ಮತ್ತು ಭಾರತದ ರಾಷ್ಟ್ರಗೀತೆ ಜನಗಣ ಮನ ಬರೆದವರು ರವೀಂದ್ರನಾಥ್ ಟ್ಯಾಗೋರ್. ನಮ್ಮಿಬ್ಬರ ನಡುವೆ ದಟ್ಟವಾದ ಸಾಂಸ್ಕೃತಿಕ ಸಾಮ್ಯತೆ ಇದೆ ಎಂದ ನ್ಯಾಯಮೂರ್ತಿ.
ನ್ಯಾ. ಮುಸ್ತಾಕ್‌ ಅಹಮದ್‌ ಅವರು ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಅವರಿಗೆ ಸ್ಮರಣಿಕೆ ನೀಡಿದರು.
ನ್ಯಾ. ಮುಸ್ತಾಕ್‌ ಅಹಮದ್‌ ಅವರು ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಅವರಿಗೆ ಸ್ಮರಣಿಕೆ ನೀಡಿದರು.
Published on

“ಬಾಂಗ್ಲಾ ಮತ್ತು ಭಾರತದ ನಡುವಿನ ನ್ಯಾಯಾಂಗ ಕ್ಷೇತ್ರದ ಅನ್ಯೋನ್ಯತೆ ಮಧುರವಾಗಿದೆ” ಎಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಬಣ್ಣಿಸಿದರು.

ನ್ಯಾಯಾಂಗ ಕ್ಷೇತ್ರದ ಕೊಡುಕೊಳ್ಳುವಿಕೆಯ ಭಾಗವಾಗಿ ಬೆಂಗಳೂರಿನ ನ್ಯಾಯಾಂಗ ಅಕಾಡೆಮಿಯಲ್ಲಿ ಬಾಂಗ್ಲಾ ದೇಶದ 50 ಜಿಲ್ಲಾ ನ್ಯಾಯಾಧೀಶರಿಗೆ ನಡೆಸಲಾದ ಏಳು ದಿನಗಳ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.

“ಬಾಂಗ್ಲಾದೇಶವು, ಭಾರತದ ಮಗಳಿದ್ದಂತೆ. ಬಾಂಗ್ಲಾ ಮೊದಲಿಗೆ ಪಾಕಿಸ್ತಾನದ ಭಾಗವಾಗಿತ್ತು. ಆದರೆ, 1971ರಲ್ಲಿ ಅದನ್ನು ಭಾರತ ಸ್ವತಂತ್ರಗೊಳಿಸಿತು. ಮಾತ್ರವಲ್ಲ ಬಾಂಗ್ಲಾದ ಅಭಿವೃದ್ಧಿಗೆ ಹಣಕಾಸಿನ ನೆರವು ನೀಡುವ ನಿಟ್ಟಿನಲ್ಲಿ ಅಂಚೆಚೀಟಿ ಬಿಡುಗಡೆ ಮಾಡಿ ಅದನ್ನು ಕಡ್ಡಾಯವಾಗಿ ಬಳಸುವಂತೆ ಕಾನೂನು ಮಾಡಿತ್ತು. ಇದು ಭಾರತ ಬಾಂಗ್ಲಾದ ಬಗ್ಗೆ ಹೊಂದಿದ್ದ ಕಾಳಜಿ” ಎಂದು ವಿವರಿಸಿದರು.

“ಬಾಂಗ್ಲಾದ ರಾಷ್ಟ್ರಗೀತೆ ಅಮರ್‌ ಶೋನಾರ್ ಮತ್ತು ಭಾರತದ ರಾಷ್ಟ್ರಗೀತೆ ಜನಗಣ ಮನ ಬರೆದವರು ರವೀಂದ್ರನಾಥ್ ಟ್ಯಾಗೋರ್. ನಮ್ಮಿಬ್ಬರ ನಡುವೆ ದಟ್ಟವಾದ ಸಾಂಸ್ಕೃತಿಕ ಸಾಮ್ಯತೆ ಇದೆ. ಕೆಲವೊಮ್ಮೆ ರಾಜಕೀಯ ಕಣ್ಣಾಮುಚ್ಚಾಲೆ ನಡೆಯುತ್ತಿರುತ್ತದೆಯಾದರೂ, ನ್ಯಾಯಾಂಗ ಕ್ಷೇತ್ರಗಳು ಮಾತ್ರ ಪರಸ್ಪರ ಪ್ರೀತಿಯ ಬಾಂಧವ್ಯ ಹೊಂದಿವೆ” ಎಂದರು.

“ಪ್ರೀತಿಯಿಲ್ಲದ ಮೇಲೆ ಹೂವು ಅರಳೀತು ಹೇಗೆ" ಎಂಬ ಜಿ ಎಸ್ ಶಿವರುದ್ರಪ್ಪ ಅವರ ಕವಿತೆ, ಸಿದ್ದೇಶ್ವರ ಸ್ವಾಮೀಜಿಗಳ ಅನುಭಾವದ ನುಡಿ ಮತ್ತು ಗೋಪಾಲಕೃಷ್ಣ ಅಡಿಗರ ಕವಿತೆಗಳನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ದೀಕ್ಷಿತ್‌ ಅವರು, ಭಾರತದ ಸಿವಿಲ್‌ ಮತ್ತು ಕ್ರಿಮಿನಲ್‌ ನ್ಯಾಯ ಸಂಹಿತೆ ಹಾಗೂ ನ್ಯಾಯಾಂಗ ಆಡಳಿತದ ಜ್ಞಾನವನ್ನು ಹಂಚಿಕೊಳ್ಳುವ ಇಂತಹ ಕಾರ್ಯಕ್ರಮಗಳು ಉಭಯ ದೇಶಗಳ ಪ್ರಬಲ ಸಾಂವಿಧಾನಿಕ ತತ್ವಗಳ ವಿನಿಮಯಕ್ಕೆ ಸಾಕ್ಷಿ” ಎಂದರು.

ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರೂ ಆದ ಹೈಕೋರ್ಟ್‌ ನ್ಯಾಯಮೂರ್ತಿ ಕೆ ಸೋಮಶೇಖರ್ ಮತ್ತು ನಿರ್ದೇಶಕರಾದ ನ್ಯಾಯಾಧೀಶ ನರಹರಿ ಪ್ರಭಾಕರ ಮರಾಠೆ ಏಳು ದಿನಗಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

Kannada Bar & Bench
kannada.barandbench.com