ವಸಾಹತುಶಾಹಿ ವ್ಯವಸ್ಥೆ ಅನುಸರಿಸಿದ್ದು ಪ್ರಕರಣಗಳ ಬಾಕಿಗೆ ಕಾರಣವಾಯಿತೇ ಎಂದು ಭಯವಾಗುತ್ತಿದೆ: ನ್ಯಾ. ಅಬ್ದುಲ್ ನಜೀರ್

ಪ್ರಕರಣಗಳ ದಾಖಲಿಸುವ ಅವಕಾಶದಿಂದ ಜನರನ್ನು ಹೊರಗಿಡುವುದು ತುಂಬಾ ಗಂಭೀರವಾದುದು. ಹಳ್ಳಿಗಳಿಗೆ ಹೋದರೆ ತಮ್ಮ ಹಕ್ಕುಗಳೇನು ಎಂಬುದೇ ಜನರಿಗೆ ತಿಳಿದಿರುವುದಿಲ್ಲ ಎಂದು ನ್ಯಾಯಮೂರ್ತಿಗಳು ಆತಂಕ ವ್ಯಕ್ತಪಡಿಸಿದರು.
ವಸಾಹತುಶಾಹಿ ವ್ಯವಸ್ಥೆ ಅನುಸರಿಸಿದ್ದು ಪ್ರಕರಣಗಳ ಬಾಕಿಗೆ ಕಾರಣವಾಯಿತೇ ಎಂದು ಭಯವಾಗುತ್ತಿದೆ: ನ್ಯಾ. ಅಬ್ದುಲ್ ನಜೀರ್

ದೇಶದಲ್ಲಿ ಮೂರು ಕೋಟಿಯಷ್ಟು ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದು ಮೂಲಭೂತವಾಗಿ ಗಂಭೀರ ದೋಷ ಕಂಡುಬರುತ್ತಿದೆ. ವಸಾಹತುಶಾಹಿ ಕಾನೂನು ವ್ಯವಸ್ಥೆಯನ್ನು ಅನುಸರಿಸಿದ್ದೇ ಇದಕ್ಕೆ ಕಾರಣವೇ ಎಂದು ಭಯವಾಗುತ್ತಿದೆ ಎಂಬುದಾಗಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಎಸ್‌ ಅಬ್ದುಲ್‌ ನಜೀರ್‌ ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ಬೆಳ್ತಂಗಡಿ ವಕೀಲರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಬೆಳ್ತಂಗಡಿ ವಕೀಲರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಜನಸಂಖ್ಯೆ ಹೆಚ್ಚುತ್ತಿದೆ, ಅದಕ್ಕೆ ತಕ್ಕಂತೆ ನ್ಯಾಯಾಂಗ ಅಧಿಕಾರಿಗಳ ನೇಮಕಾತಿ ನಡೆಯುತ್ತಿಲ್ಲ. ಇದರ ನಡುವೆ ನ್ಯಾಯದಾನ ಪ್ರಕ್ರಿಯೆಯಲ್ಲಿ ಮೂಲಭೂತವಾದ ದೋಷವಿದೆ. ಮೊನ್ನೆ ಹೈದರಾಬಾದ್‌ನಲ್ಲಿ ಮಾತನಾಡುವ ಅವಕಾಶವೊಂದು ನನಗೆ ಒದಗಿ ಬಂದಿತು. ವಸಾಹತುಶಾಹಿ ವ್ಯವಸ್ಥೆಯನ್ನು ಅನುಸರಿಸಿದ್ದೇ ಇದಕ್ಕೆ ಕಾರಣವೇ ಎಂದು ನನಗೆ ಭಯವಾಗುತ್ತಿದೆ” ಎಂದರು.

ಮುಂದುವರೆದು ಅವರು “ಸುಮ್ಮನೆ ಸನ್ನಿವೇಶವೊಂದನ್ನು ಊಹಿಸಿಕೊಳ್ಳಿ ಸರಳವಾದ ಹಣದ ದಾವೆಯಂತಹ ಪ್ರಕರಣಗಳಿಗೆ ಕೂಡ ಎಲ್ಲಾ ಸೆಕ್ಷನ್‌ನಲ್ಲೂ ಒಂದೊಂದು ಅರ್ಜಿ ಹಾಕುವ ಪ್ರವೃತ್ತಿ ವಕೀಲರಲ್ಲಿದೆ” ಎಂದರು. ಭೂಮಾಲೀಕ ಮತ್ತು ಹಿಡುವಳಿದಾರರ ಪ್ರಕರಣಗಳಲ್ಲೂ ಹೀಗೆ ಹಲವು ಅರ್ಜಿಗಳನ್ನು ಸಲ್ಲಿಸುವ ಪ್ರವೃತ್ತಿ ಇರುವುದನ್ನು ಅವರು ಪ್ರಸ್ತಾಪಿಸಿದರು.

“ಮೂಲಭೂತವಾಗಿ ಎಂಥದ್ದೋ ದೋಷ ಕಂಡು ಬರುತ್ತಿದೆ. ತೀವ್ರವಾಗಿ ನಾವೇನಾದರೂ ಮಾಡಬೇಕಾಗಿದೆ. ಇಲ್ಲದೇ ಹೋದರೆ ಪ್ರಕರಣಗಳ ಬಾಕಿ ಉಳಿಯುವಿಕೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ” ಎಂದು ಹೇಳಿದರು.

“ನಮ್ಮ ನಿಮ್ಮೆಲ್ಲರ ಉದ್ದೇಶ ಜನರಿಗೆ ನ್ಯಾಯ ದೊರಕಿಸುವುದು. ಬರೀ ನ್ಯಾಯ ದೊರಕಿಸಿದರಷ್ಟೇ ಸಾಲದು. ಶೀಘ್ರ ನ್ಯಾಯವನ್ನು ಕಡಿಮೆ ವೆಚ್ಚದಲ್ಲಿ ಕೊಡಬೇಕಿದೆ. ಅದು ನ್ಯಾಯಾಂಗ ವ್ಯವಸ್ಥೆಯ ಗುರಿಯಾಗಿರಬೇಕು. ಕಾನೂನು ಸೇವಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ಮೇಲೆ ಈ ವಿಚಾರದಲ್ಲಿ ರಾಜಿಯಾಗಿರುವುದು ನಿಜ. ಅದಕ್ಕೆ (ಅಂತಹ ಪ್ರಕರಣಗಳಿಗೆ) ಮೇಲ್ಮನವಿ ಇಲ್ಲ, ಮರುಪರಿಶೀಲನೆ ಇಲ್ಲ. ಅದು ಹೇಗೋ ನಡೆಯುತ್ತಾ ಇದೆ. ಅದರ ಮೇಲೂ ರಿಟ್‌ (ಅರ್ಜಿ) ಹಾಕುತ್ತಾರೆ. ಪ್ರಾಧಿಕಾರದ ಮೂಲಕ ರಾಜಿಯಾದರೂ ಕೂಡ ಸಂವಿಧಾನದ 227ನೇ ವಿಧಿಯಡಿ ಮೇಲ್ಮನವಿ ಸಲ್ಲಿಸುತ್ತಾರೆ. 227ನೇ ವಿಧಿ ಸಂವಿಧಾನದ ಮೂಲಭೂತ ರಚನೆಯಾಗಿರುವುದರಿಂದ ಅಂತಹ ಪ್ರಕರಣವನ್ನು ಹೈಕೋರ್ಟ್‌ ನಿರಾಕರಿಸಲು ಸಾಧ್ಯವಿಲ್ಲ. ಅಂದರೆ ನಮ್ಮ ವ್ಯವಸ್ಥೆಯಲ್ಲಿ ಮೂಲಭೂತವಾಗಿ ಏನೋ ದೋಷವಿದೆ. ಇಲ್ಲದೆ ಹೋದರೆ ಇದು (ಪ್ರಕರಣಗಳ ಬಾಕಿ ಉಳಿಯುವಿಕೆ) ಯಾಕೆ ಕಡಿಮೆ ಆಗುತ್ತಿಲ್ಲ? ಯಾವಾಗ ನಾವು ನ್ಯಾಯ ಕೊಡುವುದು?" ಎಂದು ಪ್ರಶ್ನಿಸಿದರು.

Also Read
ನ್ಯಾಯಾಂಗದ ಭಾರತೀಕರಣದ ಬಗ್ಗೆ ಪ್ರತಿಪಾದಿಸುವ ಸುಪ್ರೀಂ ಕೋರ್ಟ್‌ ನ್ಯಾ. ಅಬ್ದುಲ್ ನಜೀರ್‌ ಅವರ ದಕ್ಷಿಣ ಕನ್ನಡ ಪ್ರವಾಸ

“ಜನಪ್ರತಿನಿಧಿಗಳು ಮೂಲ ಸೌಕರ್ಯವನ್ನೇನೋ ಒದಗಿಸುತ್ತಾರೆ. ಆದರೆ ಮನೆಯಲ್ಲಿ ಶಾಂತಿ ಇಲ್ಲದೇ ಹೋದರೆ ಇರಲು ಸಾಧ್ಯವಾಗದು. ಶಾಂತಿ ನೆಲೆಸಬೇಕಾದರೆ ವ್ಯಾಜ್ಯ ಮುಕ್ತ ಸಮಾಜ ಇರಬೇಕಾಗುತ್ತದೆ. ಗಂಭೀರವಾದ ಯಾವುದೋ ದೋಷ ಕಂಡು ಬರುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಒಂದೆಡೆ ಪ್ರಕರಣಗಳ ದಾಖಲೆಗಳ ಸ್ಫೋಟ (Docket Explosion) ಕಂಡುಬರುತ್ತಿದ್ದರೆ ಮತ್ತೊಂದೆಡೆ ಪ್ರಕರಣಗಳ ದಾಖಲೆಗಳಿಂದ ಜನರನ್ನು ಹೊರಗಿಡುವ (Docket Exclusion) ಕಂಡುಬರುತ್ತಿದೆ. ಪ್ರಕರಣಗಳ ದಾಖಲೆಗಳ ಸ್ಫೋಟ ಎಂದರೆ ಮೂಲಭೂತ ಸೌಕರ್ಯ ಕೊರತೆ ಇತ್ಯಾದಿ ಕಾರಣಗಳಿಂದ ಪ್ರಕರಣಗಳ ಸಂಖ್ಯೆ ಹೆಚ್ಚುವುದು… ಆದರೆ ಪ್ರಕರಣಗಳ ದಾಖಲಿಸುವ ಅವಕಾಶದಿಂದ ಜನರನ್ನು ಹೊರಗಿಡುವುದು ತುಂಬಾ ಗಂಭೀರವಾದುದು. ಹಳ್ಳಿಗಳಿಗೆ ಹೋದರೆ ತಮ್ಮ ಹಕ್ಕುಗಳೇನು ಎಂಬುದೇ ಜನರಿಗೆ ತಿಳಿದಿರುವುದಿಲ್ಲ… ಉತ್ತರ ಕರ್ನಾಟಕ ಅಥವಾ ಉತ್ತರ ಭಾರತದಲ್ಲಿ ಇಂತಹ ಸಮಸ್ಯೆಯನ್ನು ನಾನು ಸುಪ್ರೀಂಕೋರ್ಟ್‌ಗೆ ತೆರಳಿದ ಮೇಲೆ ಕಣ್ಣಾರೆ ಕಾಣುತ್ತಿದ್ದೇನೆ. ಅವರು (ಜನರು) ಮೌನದಲ್ಲಿ ನರಳುತ್ತಿದ್ದಾರೆ. ಇದಕ್ಕೆ ಮೂಲಭೂತವಾಗಿ ಏನನ್ನಾದರೂ ಮಾಡಬೇಕಿದೆ” ಎಂದು ಆಶಿಸಿದರು.

“ಬುದ್ಧಿಜೀವಿಗಳು ಅಥವಾ ಕಾನೂನು ಪಂಡಿತರು, ಶಾಸನ ರೂಪಿಸುವವರು ಒಟ್ಟಾರೆ ಚಿಂತಿಸಿ ಪರಿಹಾರ ಕಂಡುಕೊಳ್ಳಬೇಕಿದೆ. ಯಾವಾಗಲೂ ನ್ಯಾಯಾಲಯವೇ ಸ್ವಯಂಪ್ರೇರಿತ ಅಧಿಕಾರ ಪ್ರಯೋಗಿಸಲಾಗದು. ಹಾಗೆ ಮಾಡಿದರೆ ನೀವು (ರಾಜಕಾರಣಿಗಳು) ನ್ಯಾಯಾಂಗ ಹಸ್ತಕ್ಷೇಪ ಎನ್ನುತ್ತೀರಿ…. ನೀವು ಕೂಡ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. ಇಂದಿನಿಂದ ಹೊಸದಾಗಿ ಏನಾದರೂ ಮಾಡಿ ಸಮಸ್ಯೆಗಳನ್ನು ಪರಿಹರಿಸೋಣ” ಎಂದು ಕರೆ ನೀಡಿದರು.

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಮಹಮ್ಮದ್ ನವಾಜ್‌, ವಿಶ್ವಜಿತ್ ಶೆಟ್ಟಿ, ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪ ಸಿಂಹ ನಾಯಕ್, ಎಸ್‌ ಎಲ್‌ ಭೋಜೆಗೌಡ ಮತ್ತಿತರರು ಮಾತನಾಡಿದರು. ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಮತ್ತು ದ.ಕ. ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಕೆ.ಸೋಮಶೇಖರ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಲ್. ಶ್ರೀನಿವಾಸ ಬಾಬು, ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಪ್ರಸಾದ್‌ ಕೆ ಎಸ್‌, ಕೆಎಸ್‌ಬಿಸಿ ಸದಸ್ಯ ಪಿ ಪಿ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.

ಪುತ್ತೂರು, ಸುಳ್ಯ ಕಾರ್ಯಕ್ರಮಗಳಲ್ಲಿ ನ್ಯಾ. ನಜೀರ್ ಮಾತು

ಇಂದು ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ವಕೀಲರ ಸಂಘದ ಕಟ್ಟಡ ಉದ್ಘಾಟಿಸಿದ ನ್ಯಾಯಮೂರ್ತಿ ಅಬ್ದುಲ್‌ ನಜೀರ್‌ ಅವರು ವ್ಯಾಜ್ಯ ಇರುವ ಕಡೆ ಶಾಂತಿ ಇರುವುದಿಲ್ಲ. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ನ್ಯಾಯಾಲಯಗಳ ವ್ಯವಸ್ಥೆ ಅನಿವಾರ್ಯವಾಗಿದೆ ಎಂದರು.

“ಮಹಿಳಾ ವಕೀಲರ ಸಂಖ್ಯೆ ಹೆಚ್ಚುತ್ತಿದೆ, ಇದು ಆಶದಾಯಕ ಬೆಳವಣಿಗೆಯಾಗಿದ್ದು, ನ್ಯಾಯಾಲಯಗಳು ಹಾಗೂ ವಕೀಲರ ಸಂಘಗಳಲ್ಲಿ ಅವರಿಗೆ ಅಗತ್ಯವಿರುವ ಸೌಕರ್ಯ ಒದಗಿಸಲಾಗುವುದು. ಹೊಸದಾಗಿ ನಿರ್ಮಾಣವಾಗಲಿರುವ ನ್ಯಾಯಾಲಯದ ಸಂಕೀರ್ಣದ ಮುಂದಿನ ಆವರಣದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಉದ್ಯಾನವನ ನಿರ್ಮಿಸಿದಲ್ಲಿ ಉತ್ತಮ ಪರಿಸರದಲ್ಲಿ ನ್ಯಾಯಾಂಗದ ಕಲಾಪಗಳು ನಡೆಯಲು ಸಹಕಾರಿಯಾಗಲಿದೆ” ಎಂದು ಅಭಿಪ್ರಾಯಪಟ್ಟರು.

ನಂತರ ಸುಳ್ಯದಲ್ಲಿ‍ ನ್ಯಾಯಾಂಗ ಇಲಾಖೆ ಅಧಿಕಾರಿಗಳ ವಸತಿ ಗೃಹ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು “ ಮುಂಬರುವ ದಿನಗಳಲ್ಲಿ ಸುಳ್ಯದಲ್ಲಿ ಎಲ್ಲಾ ರೀತಿಯ ಅನುಕೂಲತೆಗಳುಳ್ಳ ನ್ಯಾಯಾಲಯ ಸಂಕೀರ್ಣ ನಿರ್ಮಾಣವಾಗಲಿದೆ” ಎಂದರು.

Related Stories

No stories found.
Kannada Bar & Bench
kannada.barandbench.com