2020 ಹಿನ್ನೋಟ: ಹನ್ನೊಂದು ಸಾಂವಿಧಾನಿಕ ಪೀಠದ ತೀರ್ಪಿನ ಪೈಕಿ ನ್ಯಾ.ಅರುಣ್‌ ಮಿಶ್ರಾ ನೇತೃತ್ವದ ಪೀಠದಿಂದ ಎಂಟು ತೀರ್ಪು

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠ ನೀಡಿದ ಎಂಟು ತೀರ್ಪುಗಳ ಪೈಕಿ ನಾಲ್ಕು ತೀರ್ಪನ್ನು ಸ್ವತಃ ಮಿಶ್ರಾ ಅವರೇ ಬರೆದಿದ್ದಾರೆ.
Arun Mishra
Arun Mishra

ಪ್ರಸಕ್ತ ವರ್ಷದಲ್ಲಿ ಸುಪ್ರೀಂ ಕೋರ್ಟ್‌ನ ಹನ್ನೊಂದು ಸಾಂವಿಧಾನಿಕ ಪೀಠಗಳು ಮಹತ್ವದ ತೀರ್ಪು ಹೊರಡಿಸಿದ್ದು, ಈ ಪೈಕಿ ಎಂಟು ಸಾಂವಿಧಾನಿಕ ಪೀಠಗಳ ನೇತೃತ್ವವನ್ನು ಸೆಪ್ಟೆಂಬರ್‌ ೨ರಂದು ನಿವೃತ್ತರಾದ ನ್ಯಾಯಮೂರ್ತಿ ಅರುಣ್‌ ಮಿಶ್ರಾ ಅವರಿದ್ದ ಪೀಠವು ನೀಡಿದೆ ಎಂಬುದು ಗಮನಾರ್ಹ.

ಮಿಶ್ರಾ ಅವರ ಜೊತೆಗೆ ಈ ಎಂಟು ಸಾಂವಿಧಾನಿಕ ಪೀಠಗಳಲ್ಲಿ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ವಿನೀತ್‌ ಶರಣ್‌ ಮತ್ತು ಎಂ ಆರ್‌ ಶಾ ಇದ್ದರು. ಮಿಶ್ರಾ ನೇತೃತ್ವದ ಪೀಠ ನೀಡಿದ ಎಂಟು ತೀರ್ಪುಗಳ ಪೈಕಿ ನಾಲ್ಕು ತೀರ್ಪುಗಳನ್ನು ಸ್ವತಃ ಮಿಶ್ರಾ ಅವರೇ ಬರೆದಿದ್ದಾರೆ ಎಂಬುದು ಮಹತ್ವದ ಅಂಶವಾಗಿದೆ.

ಈ ಎಲ್ಲಾ ತೀರ್ಪುಗಳಲ್ಲಿ ಒಬ್ಬೇ ಒಬ್ಬರು ನ್ಯಾಯಮೂರ್ತಿ ಮಾತ್ರ ಬದಲಾಗಿದ್ದರು. ಎಂಟು ತೀರ್ಪುಗಳ ಪೈಕಿ ನಾಲ್ಕರಲ್ಲಿ ನ್ಯಾಯಮೂರ್ತಿ ಎಸ್‌ ರವೀಂದ್ರ ಭಟ್‌ ಅವರು ಐದನೇ ನ್ಯಾಯಮೂರ್ತಿಯಾಗಿದ್ದರೆ, ಉಳಿದ ನಾಲ್ಕು ತೀರ್ಪುಗಳಲ್ಲಿ ಅನಿರುದ್ಧ ಬೋಸ್‌ ಅವರು ಐದನೇ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಎಂಟು ಸಾಂವಿಧಾನಿಕ ಪೀಠಗಳ ನೇತೃತ್ವ ವಹಿಸಿದ್ದ ನ್ಯಾ. ಅರುಣ್‌ ಮಿಶ್ರಾ ಅವರು 2012ರಲ್ಲಿ ದೆಹಲಿಯಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮರದಂಡನೆಗೆ ಗುರಿಯಾಗಿದ್ದ ನಾಲ್ವರು ಅಪರಾಧಿಗಳ ಪೈಕಿ ಒಬ್ಬಾತ ಸಲ್ಲಿಸಿದ್ದ ಪರಿಹಾರ ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ಪೀಠದಲ್ಲಿ ಕಿರಿಯ ನ್ಯಾಯಮೂರ್ತಿಯಾಗಿ (ಪ್ಯೂನಿ ಜಡ್ಜ್) ಭಾಗವಹಿಸಿದ್ದರು.

ನಿವೃತ್ತ ನ್ಯಾ. ಮಿಶ್ರಾ ಅವರು 2020ರಲ್ಲಿ ಮಹತ್ವದ ತೀರ್ಪುಗಳನ್ನು ಹೊರಡಿಸಿದ ಐದು ತ್ರಿಸದಸ್ಯ ಪೀಠದಲ್ಲಿದ್ದರು. ನ್ಯಾ. ಮಿಶ್ರಾ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠ ಮತ್ತು ತ್ರಿಸದಸ್ಯ ಪೀಠ ಹೊರಡಿಸಿದ ತೀರ್ಪುಗಳ ವಿವರ ಇಂತಿದೆ.

ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ಇಂದಿರಾ ಬ್ಯಾನರ್ಜಿ, ಎಂ ಆರ್‌ ಶಾ ಮತ್ತು ಎಸ್‌ ರವೀಂದ್ರ ಭಟ್‌ ಅವರಿದ್ದ ಐವರು ನ್ಯಾಯಮೂರ್ತಿಗಳ ಪೀಠದ ತೀರ್ಪುಗಳು:

  1. ನಿರೀಕ್ಷಣಾ ಜಾಮೀನಿನ ಅಡಿಯಲ್ಲಿ ರಕ್ಷಣೆಯನ್ನು ಸೀಮಿತ ಅವಧಿಗೆ ನಿಗದಿಪಡಿಸಬಾರದು (ಸುಶೀಲ್‌ ಅಗರ್ವಾಲ್‌ ವರ್ಸಸ್‌ ದೆಹಲಿ ರಾಜ್ಯಕ್ಕೆ ಸೇರಿದ ಎನ್‌ಸಿಟಿ).

  2. ಎದುರಾಳಿ ಪಕ್ಷಕಾರರ ವಾದಕ್ಕೆ 45 ದಿನಗಳನ್ನು ಮೀರಿದ ಸಮಯ ವಿಸ್ತರಣೆಯನ್ನು ಮಾಡುವ ನ್ಯಾಯಿಕ ವ್ಯಾಪ್ತಿಯು ಗ್ರಾಹಕ ಒಕ್ಕೂಟಕ್ಕೆ ಇಲ್ಲ (ನ್ಯೂ ಇಂಡಿಯಾ ಅಶೂರೆನ್ಸ್‌ ವರ್ಸಸ್‌ ಹಿಲ್ಲಿ ಮಲ್ಟಿಪರ್ಪಸ್‌ ಕೋಲ್ಡ್‌ ಸ್ಟೋರೇಜ್‌ ಪ್ರೈ. ಲಿ).

  3. ರಾಜ್ಯದ ಖಜಾನೆಯಿಂದ ಹಣ ಪಾವತಿಸಿ ಭೂ ಸ್ವಾಧೀನ ಕಾಯಿದೆ -1894 ರ ಅಡಿ ಭೂಮಿ ಸ್ವಾಧೀನ ಪಡಿಸಿಕೊಂಡರೆ ಅದು ರದ್ದಾಗದು (ಇಂದೋರ್‌ ಅಭಿವೃದ್ಧಿ ಪ್ರಾಧಿಕಾರ ವರ್ಸಸ್‌ ಮನೋಹರ್‌ ಲಾಲ್‌ ಮತ್ತು ಇತರರು).

  4. ಮಾಹಿತದಾರರೇ ತನಿಖಾಧಿಕಾರಿಯಾದ ಮಾತ್ರಕ್ಕೆ ಎನ್‌ಡಿಪಿಎಸ್‌ ಕಾಯಿದೆಯ ಅಡಿ ಆರೋಪಿಯು ನಿರ್ದೋಷಿ ಎಂದು ಬಿಡುಗಡೆಯಾಗಲು ಅರ್ಹನಲ್ಲ (ಮುಕೇಶ್‌ ಸಿಂಗ್‌ ವರ್ಸಸ್‌ ರಾಜ್ಯ-ದೆಹಲಿಯ ಮಾದಕ ದ್ರವ್ಯ ನಿಯಂತ್ರಣ ಘಟಕ).

ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ಇಂದಿರಾ ಬ್ಯಾನರ್ಜಿ, ವಿನೀತ್‌ ಶರಣ್‌, ಎಂ ಆರ್‌ ಶಾ ಮತ್ತು ಅನಿರುದ್ಧ ಬೋಸ್‌ ಅವರಿದ್ದ ಪೀಠದ ತೀರ್ಪುಗಳು: 

  1. ನೀಟ್ ಕೋರ್ಸ್‌ಗಳ ಮೂಲಕ ಸೇವೆಯಲ್ಲಿರುವ ಪಿಜಿ ಅಭ್ಯರ್ಥಿಗಳಿಗೆ ಮೀಸಲಾತಿ ಕಲ್ಪಿಸುವ ಅಧಿಕಾರ ರಾಜ್ಯಗಳಿಗೆ ಇದೆಯೇ ವಿನಾ ಎಂಸಿಐಗೆ ಇಲ್ಲ (ತಮಿಳುನಾಡು ವೈದ್ಯಾಧಿಕಾರಿಗಳ ಸಂಘ ಮತ್ತು ಇತರರು ವರ್ಸಸ್‌ ಭಾರತ ಸರ್ಕಾರ ಮತ್ತು ಇತರರು).

  2. ವಾಣಿಜ್ಯ ಬಾಂಕ್‌ಗಳಿಗೆ ಅನ್ವಯಿಸುವ ರೀತಿಯಲ್ಲಿಯೇ ಎಸ್‌ಎಆರ್‌ಎಫ್‌ಎಇಎಸ್‌ಐ ಕಾಯಿದೆಯು ಸಹಕಾರ ಬ್ಯಾಂಕ್‌ಗಳಿಗೆ ಅನ್ವಯಿಸುತ್ತದೆ (ಪಾಂಡುರಂಗ ಗಣಪತಿ ವರ್ಸಸ್‌ ವಿಶ್ವಾಸ್‌ರಾವ್‌ ಪಾಟೀಲ್‌ ಮುರಗುಡ ಸಹಕಾರಿ ಬ್ಯಾಂಕ್‌ ಲಿಮಿಟೆಡ್).

  3. ಪರಿಶಿಷ್ಟ ಪ್ರದೇಶಗಳಲ್ಲಿರುವ ಶಿಕ್ಷಕರಿಗೆ ಶೇ. 100ರಷ್ಟು ಮೀಸಲಾತಿ ಕಲ್ಪಿಸುವ ಸರ್ಕಾರದ ಆದೇಶವು ಅಸಾಂವಿಧಾನಿಕ (ಚೆಬ್ರೊಲು ಲೀಲಾ ಪ್ರಸಾದ್‌ ರಾವ್‌ ಮತ್ತು ಇತರರು ವರ್ಸಸ್‌ ಆಂಧ್ರಪ್ರದೇಶ ರಾಜ್ಯ ಮತ್ತು ಇತರರು).

  4. ಪರಿಶಿಷ್ಟ ಜಾತಿಗಳ ಉಪ ವರ್ಗೀಕರಣ: ಪರಿಶಿಷ್ಟ ಜಾತಿಗಳು ಏಕರೂಪದ ವರ್ಗವಾಗಿ ರೂಪುಗೊಂಡಿವೆಯೇ ಎನ್ನುವ ಇ ವಿ ಚಿನ್ನಯ್ಯ ಪ್ರಕರಣದ ಜಿಜ್ಞಾಸೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ ಐವರು ನ್ಯಾಯಮೂರ್ತಿಗಳ ನೇತೃತ್ವದ ಪೀಠ (ಪಂಜಾಬ್‌ ರಾಜ್ಯ ಮತ್ತು ಇತರರು ವರ್ಸಸ್‌ ದವೇಂದ್ರ ಸಿಂಗ್‌ ಮತ್ತು ಇತರರು).

ನ್ಯಾಯಮೂರ್ತಿಗಳಾದ ಎನ್‌ ವಿ ರಮಣ, ಅರುಣ್‌ ಮಿಶ್ರಾ, ರೋಹಿಂಟನ್‌ ಫಾಲಿ ನಾರಿಮನ್‌, ಆರ್‌ ಭಾನುಮತಿ, ಅಶೋಕ್‌ ಭೂಷಣ್‌ ಮತ್ತು ಎ ಎಸ್‌ ಬೋಪಣ್ಣ ಅವರಿದ್ದ ಪೀಠದ ತೀರ್ಪು: 

  1. 2012ರಲ್ಲಿ ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಅಪರಾಧಿಗಳಿಗೆ ಗಲ್ಲು ಶಿಕ್ಷೆಗೆ ತಡೆಯನ್ನು ಕೋರಿದ್ದ ಪರಿಹಾರ ಮನವಿಯ (ಕ್ಯುರೇಟಿವ್ ಪಿಟಿಷನ್) ವಜಾ (ಪವನ್‌ ಕುಮಾರ್‌ ಗುಪ್ತಾ ವರ್ಸಸ್‌ ದೆಹಲಿ ರಾಜ್ಯಕ್ಕೆ ಸೇರಿದ ಎನ್‌ಸಿಟಿ).

Also Read
ನ್ಯಾಯಮೂರ್ತಿ ಅರುಣ್ ಮಿಶ್ರಾ: ಒಂದು ಮೌಲ್ಯಮಾಪನ

ನ್ಯಾ. ಅರುಣ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಹೊರಡಿಸಿದ ಮಹತ್ವದ ತೀರ್ಪುಗಳು.

  1. ಸಂವಿಧಾನದ 30ನೇ ವಿಧಿಯ ಅಡಿಯಲ್ಲಿ ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸಲು ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ನೀಡಲಾಗಿರುವ ಹಕ್ಕುಗಳು ಪರಿಪೂರ್ಣವಲ್ಲ, ರಾಜ್ಯವು ಸಮಂಜಸವಾದ ನಿರ್ಬಂಧ ವಿಧಿಸಬಹುದು (ಕ್ರಿಶ್ಚಿಯನ್‌ ವೈದ್ಯಕೀಯ ಕಾಲೇಜು ವೇಲ್ಲೂರು ಸಂಘ ವರ್ಸಸ್‌ ಭಾರತ ಸರ್ಕಾರ ಮತ್ತು ಇತರರು).

  2. ಪರಿಶಿಷ್ಟ ಜಾತಿಗಳು/ಪರಿಶಿಷ್ಟ ವರ್ಗಗಳು (ದೌರ್ಜನ್ಯ ತಡೆ) ತಿದ್ದುಪಡಿ ಕಾಯಿದೆ – 2018ರ ಸಾಂವಿಧಾನಿಕ ಸಿಂಧುತ್ವ ಎತ್ತಿ ಹಿಡಿದ ನ್ಯಾಯಾಲಯ (ಪ್ರಥ್ವಿರಾಜ್‌ ಚೌಹಾಣ್‌ ವರ್ಸಸ್‌ ಭಾರತ ಸರ್ಕಾರ ಮತ್ತು ಇತರರು).

  3. 233ನೇ ವಿಧಿಯ ಅನ್ವಯ ನ್ಯಾಯವಾದಿಗಳಿಗೆ ಮೀಸಲಾಗಿರುವ ನೇರ ಕೋಟಾದಲ್ಲಿ ನ್ಯಾಯಿಕ ಅಧಿಕಾರಿಗಳನ್ನು ಜಿಲ್ಲಾ ನ್ಯಾಯಾಧೀಶರನ್ನಾಗಿ ನೇಮಿಸಲಾಗದು (ಧೀರಜ್‌ ಮೋರ್‌ ವರ್ಸಸ್‌ ಗೌರವಾನ್ವಿತ ದೆಹಲಿ ಹೈಕೋರ್ಟ್‌).

  4. ಹಿಂದೂ ಉತ್ತರಾಧಿಕಾರಿ ಕಾಯಿದೆಗೆ 2005ರಲ್ಲಿ ತಿದ್ದುಪಡಿ ಮಾಡುವುದಕ್ಕೂ ಮುನ್ನವೇ ಪುತ್ರಿಯರು ಜನಿಸಿದರೂ ಜನ್ಮತಃ ಪುತ್ರಿಯರು ಸಮಾನ ಸಹವರ್ತಿಗಳು ಎನಿಸಿಕೊಳ್ಳಲಿದ್ದಾರೆ (ವಿನೀತಾ ಶರ್ಮಾ ವರ್ಸಸ್‌ ರಾಕೇಶ್‌ ಶರ್ಮಾ ಮತ್ತು ಇತರರು).

  5. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರ ವಿರುದ್ಧ ಟ್ವೀಟ್‌ ಮಾಡಿದ್ದ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ವಿರುದ್ಧ ದಾಖಲಿಸಿದ್ದ ನ್ಯಾಯಾಂಗ ನಿಂದನಾ ಪ್ರಕರಣದಲ್ಲಿ ಭೂಷಣ್‌ ದೋಷಿ, ರೂ.1ದಂಡ (ಇನ್‌ ರಿ ಪ್ರಶಾಂತ್‌ ಭೂಷಣ್‌ ಮತ್ತು ಇತರರು).

Related Stories

No stories found.
Kannada Bar & Bench
kannada.barandbench.com