'ಮಿ. ಡಿಪೆಂಡಬಲ್' ನ್ಯಾಯಮೂರ್ತಿ ಎ ಎಸ್ ಬೋಪಣ್ಣ ಅವರಿಗೆ ಸುಪ್ರೀಂ ಕೋರ್ಟ್ ಬೀಳ್ಕೊಡುಗೆ

ನ್ಯಾಯಮೂರ್ತಿ ಬೋಪಣ್ಣ ಅವರು ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಂತೆ ಸರ್ವೋಚ್ಚ ನ್ಯಾಯಾಲಯದ ಮಿಸ್ಟರ್ ಡಿಪೆಂಡಬಲ್ ಎನಿಸಿಕೊಂಡಿದ್ದಾರೆ ಎಂದು ಸಿಜೆಐ ಈ ವೇಳೆ ನುಡಿದರು.
Justice AS Bopanna
Justice AS Bopanna
Published on

ಇದೇ ಭಾನುವಾರ, ಮೇ 19ರಂದು ನಿವೃತ್ತರಾಗಲಿರುವ ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎ ಎಸ್‌ ಬೋಪಣ್ಣ ಅವರಿಗೆ ಶುಕ್ರವಾರ ಬೀಳ್ಕೊಡುಗೆ ನೀಡಲಾಯಿತು.

ಸುಪ್ರೀಂ ಕೋರ್ಟ್ ವಕೀಲರ ಸಂಘ ಈ ಸಮಾರಂಭ ಆಯೋಜಿಸಿತ್ತು. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌, ಇತರ ನ್ಯಾಯಮೂರ್ತಿಗಳು ಹಾಗೂ ವಕೀಲರು ಭಾಗವಹಿಸಿದ್ದರು.  

ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾ. ಬೋಪಣ್ಣ ಅವರು “ನನ್ನ ನ್ಯಾಯಮೂರ್ತಿ ಸ್ಥಾನವು ಅಂತಿಮ ಘಟ್ಟಕ್ಕೆ ಬಂದಿದೆ. ನನ್ನ ಕನಸು ನನಸಾಗಿದೆ ಎಂದು ಹೇಳಲಾರೆ. ಏಕೆಂದರೆ ನಾನು ಕಾನೂನು ಕ್ಷೇತ್ರಕ್ಕೆ ಕಾಲಿಡುತ್ತೇನೆ ಪ್ರಾಕ್ಟೀಸ್‌ ಮಾಡುತ್ತೇನೆ ಇಲ್ಲಿಯವರೆಗೂ ತಲುಪುತ್ತೇನೆ ಎಂದು ಎಣಿಸಿರಲಿಲ್ಲ" ಎಂದರು.

ನೂರು ಶತಕ ಬಾರಿಸಿದರೂ ಹೊಸ ಸ್ಕೋರ್‌ ಆರಂಭವಾಗುವುದು ಶೂನ್ಯದಿಂದಲೇ ಎಂಬ ಕ್ರಿಕೆಟ್‌ ಲೋಕದ ದಂತಕತೆ ಸಚಿನ್‌ ತೆಂಡೂಲ್ಕರ್‌ ಅವರ ಮಾತನ್ನು ನ್ಯಾ. ಬೋಪಣ್ಣ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಜೆಐ ಚಂದ್ರಚೂಡ್‌ ಅವರು ನ್ಯಾಯಮೂರ್ತಿ ಬೋಪಣ್ಣ ಅವರು  ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್‌ ಅವರಂತೆ ಸರ್ವೋಚ್ಚ ನ್ಯಾಯಾಲಯದ ಮಿಸ್ಟರ್‌ ಡಿಪೆಂಡಬಲ್‌ ಎನಿಸಿಕೊಂಡಿದ್ದಾರೆ ಎಂದರು.

ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿರುವ ನ್ಯಾ. ಬೋಪಣ್ಣ ಅವರು ನ್ಯಾಯಾಲಯದಲ್ಲಿ ಕ್ಯಾಪ್ಟನ್‌ ಕೂಲ್‌ ರೀತಿ ಇರುತ್ತಿದ್ದರು. ಅವರ ನೆಚ್ಚಿನ ಆಟಗಾರ ಯಾರೋ ನನಗೆ ತಿಳಿದಿಲ್ಲ. ಆದರೆ ಅವರು ರಾಹುಲ್‌ ದ್ರಾವಿಡ್‌ ಅವರಂತೆ ನ್ಯಾಯಾಲಯದಲ್ಲಿ 'ಮಿಸ್ಟರ್‌ ಡಿಪೆಂಡಬಲ್‌'. ಅವರ ಮೃದುಮಾತು ನ್ಯಾಯಾಲಯದಲ್ಲಿ ಅನುರಣಿಸುತ್ತಿರುತ್ತದೆ ಮತ್ತು ಮೌಲ್ಯಯುತವಾಗಿರುತ್ತದೆ. ಅವರ ನ್ಯಾಯಾಲಯದಲ್ಲಿ ವಾದಿಸಲು ಮತ್ತು ಕೌಶಲ್ಯ ಮೆರೆಯಲು ಅವಕಾಶವಿತ್ತ ನ್ಯಾ. ಬೋಪಣ್ಣ ಅವರಿಗೆ ಅನೇಕ ಯುವ ವಕೀಲರು ಕೃತಜ್ಞರಾಗಿರುತ್ತಾರೆ ಎಂದು ಸಿಜೆಐ ತಿಳಿಸಿದರು.

ನ್ಯಾಯಮೂರ್ತಿ ಬೋಪಣ್ಣ ಅವರು ನಿವೃತ್ತಿಯ ನಂತರದ ಯಾವುದೇ ಕಾರ್ಯಯೋಜನೆಗಳನ್ನು ಒಪ್ಪಿಕೊಂಡಿಲ್ಲ ಎಂದು ಸಿಜೆಐ ಹೇಳಿದರು.

ನ್ಯಾ. ಬೋಪಣ್ಣ ಅವರು 24, 2019ರಂದು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದರು. 1984ರಲ್ಲಿ ಕರ್ನಾಟಕ ವಕೀಲರ ಪರಿಷತ್‌ನಲ್ಲಿ ನೋಂದಾಯಿಸಿಕೊಂಡ ಅವರು ಕರ್ನಾಟಕ ಹೈಕೋರ್ಟ್, ಸಿವಿಲ್ ಹಾಗೂ ಲೇಬರ್‌ ನ್ಯಾಯಾಲಯಗಳಲ್ಲಿ 22 ವರ್ಷ ಪ್ರಾಕ್ಟೀಸ್‌ ಮಾಡಿದರು.

ಜನವರಿ 6, 2006ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು ಮಾರ್ಚ್ 1, 2007ರಲ್ಲಿ ಕಾಯಂ ನ್ಯಾಯಮೂರ್ತಿಗಳಾದರು. ಅವರನ್ನು ಅಕ್ಟೋಬರ್ 29, 2018ರಂದು ಗುವಾಹಟಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತು.

Kannada Bar & Bench
kannada.barandbench.com