
ಸಶಸ್ತ್ರ ಪಡೆಗಳ ಸದಸ್ಯರು ಮತ್ತು ಅವರ ಕುಟುಂಬಗಳಿಗೆ ರಚನಾತ್ಮಕ ಕಾನೂನು ನೆರವು ನೀಡುವ ಸಲುವಾಗಿ ವೀರ್ ಪರಿವಾರ್ ಸಹಾಯತಾ ಯೋಜನೆ-2025ಕ್ಕೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ನಾಲ್ಸಾ) ಚಾಲನೆ ನೀಡಿತು.
ಕಾಶ್ಮೀರದ ಶ್ರೀನಗರದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಮುನ್ನಾದಿನವಾದ ಶುಕ್ರವಾರ ನಡೆದ ಪ್ರಾಧಿಕಾರದ ಉತ್ತರ ವಲಯ ಪ್ರಾದೇಶಿಕ ಸಮ್ಮೇಳನದಲ್ಲಿ ಯೋಜನೆಯನ್ನುನಾಲ್ಸಾದ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾ. ಸೂರ್ಯ ಕಾಂತ್ ಔಪಚಾರಿಕವಾಗಿ ಯೋಜನೆಯನ್ನು ಪರಿಚಯಿಸಿದರು. ರಕ್ಷಣಾ ಸಿಬ್ಬಂದಿಗೆ ಸಾಂಸ್ತಿಕ ಕಾನೂನು ನೆರವು ನೀಡುವ ನಿಟ್ಟಿನಲ್ಲಿ ಯೋಜನೆ ಚಾರಿತ್ರಿಕ ಪ್ರಥಮ ಹೆಜ್ಜೆ ಎಂದು ಅವರು ಹೇಳಿದರು. ಸಂವಿಧಾನದ 39ಎ ವಿಧಿಯಡಿಯಲ್ಲಿ ನಾಲ್ಸಾದ ಕಾನೂನು ನೆರವು ಯೋಜನೆಗೆ 30 ವರ್ಷ ಸಂದಿರುವ ಸಂದರ್ಭದಲ್ಲಿಯೇ ಯೋಜನೆ ಜಾರಿಗೆ ಬರುತ್ತಿದೆ.
" ರಕ್ಷಣಾ ಸಿಬ್ಬಂದಿ ಮತ್ತು ಬುಡಕಟ್ಟು ಜನಾಂಗದವರಿಗೆ ನ್ಯಾಯದ ಸಾಂವಿಧಾನಿಕ ದೃಷ್ಟಿಕೋನದ ಮರುದೃಢೀಕರಣ" ಎಂಬ ವಿಚಾರವಾಗಿ ಪ್ರಾದೇಶಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ನಮ್ಮ ಸೈನಿಕರು ದೇಶದ ಗಡಿಗಳಲಲ್ಲಿ ದೇಶದ ಹಿತ ಕಾಯುತ್ತಿರುತ್ತಾರೆ. ಕಾನೂನು ಸಮುದಾಯವಾಗಿ ದೇಶದೊಳಗೆ ನಾವು ಅವರ ಹಿತ ಕಾಯಬೇಕಿದೆ ಎಂದರು.
ಜಿಲ್ಲಾ, ರಾಜ್ಯ ಮತ್ತು ಕೇಂದ್ರ ಸೈನಿಕ ಮಂಡಳಿಗಳಲ್ಲಿ ಸ್ಥಾಪಿಸಲಾದ ಕಾನೂನು ಸೇವಾ ಕೇಂದ್ರಗಳ ಳ ಮೂಲಕ ವೀರ್ ಪರಿವಾರ ಸಹಾಯತಾ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಕೇಂದ್ರಗಳು ಕಾನೂನು ಸಹಾಯ ಬಯಸುವ ಸೇವಾನಿರತ ಮತ್ತು ನಿವೃತ್ತ ರಕ್ಷಣಾ ಸಿಬ್ಬಂದಿಗೆ ಯೋಜನೆ ದೊರಕಿಸಿಕೊಡಲಿವೆ ಎಂದು ಅವರು ಹೇಳಿದರು.
ಈ ಕೇಂದ್ರಗಳು ನೋಡಲ್ ಅಧಿಕಾರಿಗಳು, ಕಾನೂನು ನೆರವು ವಕೀಲರು ಮತ್ತು ಪರ್ಯಾಯ ಕಾನೂನು ಸ್ವಯಂಸೇವಕರನ್ನು ಒಳಗೊಂಡಿರುತ್ತವೆ. ವ್ಯಾಪಕ ಶ್ರೇಣಿಯ ಕಾನೂನು ಸಮಸ್ಯೆಗಳನ್ನು ಪರಿಹರಿಸಲು ಈ ಕೇಂದ್ರಗಳನ್ನು ರೂಪಿಸಲಾಗಿದೆ ಎಂದು ನ್ಯಾಯಮೂರ್ತಿ ಕಾಂತ್ ಮಾಹಿತಿ ನೀಡಿದರು.
ಈ ಯೋಜನೆಯ ಪ್ರಮುಖ ಅಂಶವೆಂದರೆ ತಮ್ಮ ಮನೆಗಳಿಂದ ದೂರದಲ್ಲಿರುವ ಯೋಧರಿಗೆ ಸಹಾಯ ಮಾಡಲೆಂದೇ ನ್ಯಾಯವ್ಯಾಪ್ತಿಯನ್ನು ಬದಲಿಸಲಾಗು ಅರ್ಜಿಯನ್ನು ಯಾವುದೇ ಕೇಂದ್ರ ಸ್ವೀಕರಿಸಿದರೂ ನೇರವಾಗಿ ವ್ಯಾಜ್ಯ ತಲೆದೋರಿರುವ ನ್ಯಾಯವ್ಯಾಪ್ತಿಗೆ ಅದನ್ನು ರವಾನಿಸಲು ಯೋಜನೆ ಅನುವು ಮಾಡಿಕೊಡುತ್ತದೆ. ತಮ್ಮ ಮನೆಗಳಿಂದ ದೂರ ಇರುವ ಯೋಧರ ಕರ್ತವ್ಯಕ್ಕೆ ಅಡ್ಡಿಯಾಗದಂತೆ ಕಾನೂನು ವ್ಯಾಜ್ಯಗಳನ್ನು ಯೋಜನೆಯಡಿ ಮುಂದುವರೆಸಬಹುದಾಗಿದೆ.
ಈ ಯೋಜನೆಯು ಮಾಜಿ ಯೋಧರು ಮತ್ತು ರಕ್ಷಣಾ ಕುಟುಂಬದ ಸದಸ್ಯರಿಗೆ ಪರ್ಯಾಯ ಕಾನೂನು ಸ್ವಯಂಸೇವಕರಾಗುವಂತೆಯೂ ತರಬೇತಿ ನೀಡುತ್ತದೆ.
ಭೂ ವಿವಾದಗಳು, ವೈವಾಹಿಕ ಸಮಸ್ಯೆಗಳು, ಸೇವಾ ಹಕ್ಕುಗಳಿಂದ ಹಿಡಿದು ಭಾರಿ ವಿದ್ಯುತ್ ಶುಲ್ಕದಂತಹ ಸಾಮಾನ್ಯ ಸಮಸ್ಯೆಗಳವರೆಗೆ ದೇಶದ ಯಾವುದೋ ಮೂಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರಿಗೆ ಈ ಯೋಜನೆ ನೆರವು ನೀಡುತ್ತದೆ.
ಸರ್ಕಾರ ಎಲ್ಲಾ ನಾಗರಿಕರಿಗೆ ಸಮಾನವಾಗಿ ನ್ಯಾಯ ಮತ್ತು ಉಚಿತ ಕಾನೂನು ನೆರವು ನೀಡಬೇಕೆಂದು ಸೂಚಿಸುವ ಸಂವಿಧಾನದ 39A ವಿಧಿಯ ವ್ಯಾಪ್ತಿಯಲ್ಲಿ ವೀರ್ ಪರಿವಾರ್ ಯೋಜನೆಯು ಬರುತ್ತದೆ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು,
ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ, ರಾಜೇಶ್ ಬಿಂದಾಲ್ ಮತ್ತು ಎನ್. ಕೋಟೀಶ್ವರ್ ಸಿಂಗ್, ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಾಗೂ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಭಾಗವಹಿಸಿದ್ದರು.
ದೆಹಲಿ, ಅಲಹಾಬಾದ್, ಪಂಜಾಬ್ ಮತ್ತು ಹರಿಯಾಣ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು, ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅರುಣ್ ಪಲ್ಲಿ, ನ್ಯಾಯಮೂರ್ತಿಗಳಾದ ಸಂಜೀವ್ ಕುಮಾರ್ ಮತ್ತು ಸಿಂಧು ಶರ್ಮಾ ಮತ್ತಿತರರು ಉಪಸ್ಥಿತರಿದ್ದರು.
ಲೆಫ್ಟಿನೆಂಟ್ ಜನರಲ್ ಪ್ರತೀಕ್ ಶರ್ಮಾ ಮತ್ತು ಲೆಫ್ಟಿನೆಂಟ್ ಜನರಲ್ ಪ್ರಶಾಂತ್ ಶ್ರೀವಾಸ್ತವ ಸೇರಿದಂತೆ ಹಿರಿಯ ಸೇನಾ ಅಧಿಕಾರಿಗಳು ಮತ್ತು ಉತ್ತರ ವಲಯದಾದ್ಯಂತದ ಕಾನೂನು ಸೇವೆಗಳ ಪ್ರಾಧಿಕಾರಗಳ ಮುಖ್ಯಸ್ಥರು ಉಪಸ್ಥಿತರಿದ್ದರು.