ಸಂವಿಧಾನಕ್ಕೆ ಅನುಗುಣವಾಗಿ ಧಾರ್ಮಿಕ ಪದ್ದತಿಗಳಿಗೆ ತಿದ್ದುಪಡಿ ಮಾಡಬಹುದು: ಸಂವಾದ ಕಾರ್ಯಕ್ರಮದಲ್ಲಿ ನ್ಯಾ. ಚಂದ್ರಚೂಡ್‌

ಪ್ರಜಾಪ್ರಭುತ್ವಕ್ಕೆ ಅಡ್ಡಿಯಾಗುವಂತಹ ವ್ಯಕ್ತಿಗಳ ಭಿನ್ನಾಭಿಪ್ರಾಯವನ್ನು ಪರಿಗಣಿಸಬಾರದು ಎಂದು ಕೂಡ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಚಂದ್ರಚೂಡ್‌ ಹೇಳಿದ್ದಾರೆ.
ಸಂವಿಧಾನಕ್ಕೆ ಅನುಗುಣವಾಗಿ ಧಾರ್ಮಿಕ ಪದ್ದತಿಗಳಿಗೆ ತಿದ್ದುಪಡಿ ಮಾಡಬಹುದು: ಸಂವಾದ ಕಾರ್ಯಕ್ರಮದಲ್ಲಿ ನ್ಯಾ. ಚಂದ್ರಚೂಡ್‌

ಸ್ವಾತಂತ್ರ್ಯಕ್ಕಾಗಿ ನಡೆಸುವ ಸಾಂವಿಧಾನಿಕ ಆಂದೋಲನ ಕೇವಲ ರಾಜಕೀಯ ಸ್ವಾತಂತ್ರ್ಯದ ಆಂದೋಲನವಲ್ಲ. ಬದಲಿಗೆ ಸಮಾಜ ಪರಿವರ್ತನೆಯ ಆಂದೋಲನ ಎಂದು ನ್ಯಾ. ಡಿ ವೈ ಚಂದ್ರಚೂಡ್‌ ಅಭಿಪ್ರಾಯಪಟ್ಟಿದ್ದಾರೆ. ಹಾರ್ವರ್ಡ್‌ ಕಾನೂನು ಶಾಲೆಯ ಮಹಿಳಾ ಒಕ್ಕೂಟ ಮತ್ತು ʼಬಾರ್‌ ಅಂಡ್‌ ಬೆಂಚ್‌ʼ ಶನಿವಾರ ಆಯೋಜಿಸಿದ್ದ ʼಜಾಗತೀಕರಣಗೊಂಡ ಕಾನೂನು ಜಗತ್ತಿನಲ್ಲಿ ಯಾನʼ ಎಂಬ ಆನ್‌ಲೈನ್‌ ಸಂವಾದ ಕಾರ್ಯಕ್ರಮದಲ್ಲಿ ಅವರ ಮಾತನಾಡಿದರು.

ಶಬರಿಮಲೆ ವಿವಾದ ಕುರಿತಂತೆ…

ಋತುಸ್ರಾವ ಅನುಭವಿಸುತ್ತಿರುವ ಮಹಿಳೆಯರಿಗೆ ಶಬರಿಮಲೆ ದೇಗುಲಕ್ಕೆ ಅನುಮತಿ ನೀಡದಿರುವ ಕ್ರಮ ಸಾಂವಿಧಾನಿಕ ಮೌಲ್ಯ ಮತ್ತು ಹಕ್ಕುಗಳಿಗೆ ಒಳಪಟ್ಟಿದೆ ಎಂದು ಅವರು ಹೇಳಿದರು. “ಮುಟ್ಟಿನ ಮಹಿಳೆಯರಿಗೆ ಅನುಮತಿ ನಿರಾಕರಿಸಲು ಕಾರಣ ಎಂದರೆ ದೇವತೆಯನ್ನು ಬ್ರಹ್ಮಚಾರಿ ಎಂದು ಪರಿಗಣಿಸಿರುವುದು ಮತ್ತು ಮಹಿಳೆಯರ ಉಪಸ್ಥಿತಿ ದೇವತೆಯ ಬ್ರಹ್ಮಚರ್ಯ ಸ್ವಭಾವದ ಮೇಲೆ ಪರಿಣಾಮ ಬೀರುತ್ತದೆ ಎಂಬುದಾಗಿದೆ. ನಾವು ನ್ಯಾಯಮೂರ್ತಿಗಳಾಗಿ ಮತ್ತು ಮನುಷ್ಯರಾಗಿ ಆ ನಂಬಿಕೆಯನ್ನು ಗೌರವಿಸುತ್ತೇವೆ. ಧಾರ್ಮಿಕ ವಿಚಾರದಲ್ಲಿ ಖಾಸಗಿಯಾದದ್ದೇನೂ ಇಲ್ಲ ಎಂದು (ಶಬರಿಮಲೆ ಪೀಠದ ಬಹುತೇಕ ಸದಸ್ಯರು) ನಾವು ಹೇಳಿದ್ದೇವೆ. ಧರ್ಮ ದೇಶದ ಸಾರ್ವಜನಿಕ ವಲಯದಲ್ಲಿ ಅಗತ್ಯ ಅವಕಾಶ ಪಡೆದಿದೆ. ಹೀಗಾಗಿ ಧಾರ್ಮಿಕ ಪದ್ದತಿ ಕೂಡ ಸಾಂವಿಧಾನಿಕ ನಿಯಂತ್ರಣಕ್ಕೆ ಪೂರಕವಾಗಿದೆ ಎಂಬುದಾಗಿ ನಾವು ಹೇಳಿದ್ದೇವೆ” ಎಂದು ಅವರು ತಿಳಿಸಿದರು.

ಸಾಮಾಜಿಕ ಪರಿವರ್ತನೆಯ ಸಾಧನವಾಗಿ ಸಂವಿಧಾನ

ʼಸಂವಿಧಾನ ಕೇವಲ ರಾಜಕೀಯ ಅಧಿಕಾರವನ್ನು ನೀಡುವ ಸಾಧನವಾಗಿರದೆ ಸಾಮಾಜಿಕ ಪರಿವರ್ತನೆಯ ಸಾಧನವಾಗಿಯೂ ಕೆಲಸ ಮಾಡಿದೆʼ ಎಂದ ಅವರು ದಲಿತರ ದೇವಾಲಯ ಪ್ರವೇಶ ಆಂದೋಲನದ ಸುದೀರ್ಘ ಇತಿಹಾಸವನ್ನು ಉದಾಹರಣೆಯಾಗಿ ನೀಡಿದರು.

"ಭಾರತದಲ್ಲಿ, ವಸಾಹತುಶಾಹಿ ಆಡಳಿತದಿಂದ ಸ್ವರಾಜ್ಯದ ಆಡಳಿತಕ್ಕೆ ರಾಜಕೀಯ ಅಧಿಕಾರ ಹಸ್ತಾಂತರಿಸಿದ ಸಾಧನವಾಗಿ ಮಾತ್ರ ನಾವು ಸಂವಿಧಾನವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಇಲ್ಲ. ಇದು ಸಮಾಜ ಪರಿವರ್ತನೆಯ ಆಂದೋಲನವೂ ಆಗಿತ್ತು. ಭಾರತೀಯ ಸಮಾಜದ ಪರಿವರ್ತನೆಯ ಆಳ ಹಂಬಲವನ್ನು ನಮ್ಮ ಸಂವಿಧಾನ ಪ್ರತಿಬಿಂಬಿಸುತ್ತದೆ” ಎಂದು ಅವರು ಹೇಳಿದರು.

Also Read
ಇಷ್ಟ ಬಂದಾಗ ಬಂದು ಹೋಗುವ ತಾಣ ಇದಲ್ಲ: ವಿಳಂಬ ಧೋರಣೆ ಅನುಸರಿಸುವ ಸರ್ಕಾರಗಳಿಗೆ ಬಿಸಿ ಮುಟ್ಟಿಸಿದ ಸುಪ್ರೀಂಕೋರ್ಟ್

ಚಂದ್ರಚೂಡ್‌ ಅವರು ನಡೆಸಿದ ಚರ್ಚೆಯ ಪ್ರಮುಖಾಂಶಗಳು

  • ಭಾರತದಲ್ಲಿ ಧಾರ್ಮಿಕ ಪದ್ಧತಿಗಳ ಸಿಂಧುತ್ವವನ್ನು ನಿರ್ಧರಿಸಲು ಬಳಸಲಾಗುವ ಅಗತ್ಯ ಧಾರ್ಮಿಕ ಅಭ್ಯಾಸ ಪ್ರಯೋಗಗಳನ್ನು ವಿರೋಧಿಸುವುದಾಗಿ ತಿಳಿಸಿದ ಅವರು ಇದು ಹೊರಗಿಡುವಿಕೆ ವಿರೋಧಿ ತತ್ವವಾಗಿದೆ. ಇದರರ್ಥ ಧರ್ಮವೊಂದಕ್ಕೆ ಒಂದು ಆಚರಣೆ ಅಗತ್ಯವಾಗಿದ್ದರೂ ಒಂದು ನಿರ್ದಿಷ್ಟ ವರ್ಗದ ಸಮಾಜವನ್ನು ಹೊರಗಿಡುವುದಾದರೆ ಅದು ಸಾಂವಿಧಾನಿಕ ಮಾನದಂಡಗಳಿಗೆ ಬದ್ಧವಾಗಿರಬೇಕು. ಶಬರಿಮಲೆ ತೀರ್ಪಿನ ಸಂದರ್ಭದಲ್ಲಿ ನ್ಯಾ. ಇಂದೂ ಮಲ್ಹೋತ್ರಾ ಅವರು ನೀಡಿದ ಭಿನ್ನ ತೀರ್ಪನ್ನು ಶ್ಲಾಘಿಸಿದ ಅವರು ʼದಬ್ಬಾಳಿಕೆಯ ಧಾರ್ಮಿಕ ಆಚರಣೆಗಳನ್ನು ಮಾತ್ರ ನ್ಯಾಯಾಲಯಗಳು ನಿಷೇಧಿಸಬೇಕುʼ ಎಂದು ಅವರು ಅಭಿಪ್ರಾಯಪಟ್ಟರು.

  • ನ್ಯಾಯಾಲಯಗಳಿಂದ ವ್ಯಕ್ತವಾಗುವ ಭಿನ್ನ ತೀರ್ಪಿನ ಕುರಿತು ಮಾತನಾಡಿದ ಅವರು "ನ್ಯಾಯಾಧೀಶರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೆ ಅದು, ಅವರು ಸಂವಿಧಾನದ ಕೆಲ ಮೂಲಭೂತ ಮೌಲ್ಯಗಳಿಗೆ ಅಭಿವ್ಯಕ್ತಿ ನೀಡುತ್ತಿದ್ದಾರೆ ಎಂಬರ್ಥವಾಗಿದೆ. ಅದು ಅವರ ಹೃದಯದಿಂದ ಮೂಡಿಬಂದಿರುತ್ತದೆ. ಭಾರತದಲ್ಲಿ ಇದ್ದ ಭಿನ್ನಾಭಿಪ್ರಾಯಗಳ ಸ್ವರೂಪವನ್ನು ಗಮನಿಸಿದರೆ, ಅವು ಸಾಂವಿಧಾನಿಕ ಪ್ರಜಾಪ್ರಭುತ್ವದ ಮೇಲೆ ಪರಿಣಾಮ ಬೀರುವ ಸಂಗತಿಗಳಾಗಿವೆ ಎಂಬುದು ತಿಳಿದುಬರುತ್ತದೆ ”ಎಂದು ಅವರು ಹೇಳಿದರು. ಪ್ರಜಾಪ್ರಭುತ್ವಕ್ಕೆ ಅಡ್ಡಿಯಾಗುವಂತಹ ವ್ಯಕ್ತಿಗಳ ಭಿನ್ನಾಭಿಪ್ರಾಯವನ್ನುಗಣನೆಗೆ ತೆಗೆದುಕೊಳ್ಳಬಾರದು ಎಂಬುದಾಗಿಯೂ ಅವರು ತಿಳಿಸಿದರು.

  • ಇತ್ತೀಚೆಗೆ ನಿಧನರಾದ ನ್ಯಾಯಿಕ ಜಗತ್ತಿನ ದಂತಕತೆ ರುತ್‌ ಬೇಡರ್‌ ಗಿನ್ಸ್‌ಬರ್ಗ್‌ ಅವರ ಗುಣಗಾನ ಮಾಡಿದ ನ್ಯಾ. ಚಂದ್ರಚೂಡ್‌ ಅವರಿಗೆ ಮಹಿಳಾ ಸಬಲೀಕರಣ ಪ್ರಮುಖ ಸಂಗತಿಯಾಗಿತ್ತು ಎಂದು ಹೇಳಿದರು.

ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸ್ಲೊವೇನಿಯಾದ ಮಾಜಿ ಅಧ್ಯಕ್ಷ ಡಾ. ಡ್ಯಾನಿಲೊ ಟರ್ಕ್ ವಿಭಿನ್ನ ಸಂಸ್ಕೃತಿಗಳನ್ನು ಅರ್ಥಮಾಡಿಕೊಳ್ಳುವಿಕೆ ಮತ್ತು ವಿವಿಧತೆಗೆ ತೋರಬೇಕಾದ ಸಹಮತವನ್ನು ಪ್ರತಿಪಾದಿಸಿದರು. ಮತ್ತೊಬ್ಬ ಅತಿಥಿ ಜಿನಿವಾ ವಿಶ್ವವಿದ್ಯಾಲಯದ (ಕಾನೂನು) ಪ್ರಾಧ್ಯಾಪಕಿ ಡಾ. ಲಾರೆನ್ಸ್‌ ಶಝೋರ್ನೆಸ್‌ ಅವರು ವರ್ಣಬೇಧ ನೀತಿ, ಮರಣದಂಡನೆ ಇತ್ಯಾದಿ ವಿಷಯಗಳಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದ ಬದಲಾಗುತ್ತಿರುವ ಪಾತ್ರದ ಕುರಿತು ವಿವರಣೆ ನೀಡಿದರು. ಅಲ್ಲದೆ ಅವರು ಜಾಗತಿಕ ರಾಜಕಾರಣದಲ್ಲಿ ಮತ್ತು ಶಾಂತಿ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ಮಹಿಳೆಯರ ವೃದ್ಧಿಸುತ್ತಿರುವ ಪಾತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಎಚ್‌ಎಲ್‌ಎಸ್‌ಡಬ್ಲ್ಯೂಎ ಸಹ ಸಂಸ್ಥಾಪಕರಾದ ಡಯಾನಾ ಫಿಲಿಪ್ ಮತ್ತು ಬಾಂಬೆ ಹೈಕೋರ್ಟ್‌ನ ಹಿರಿಯ ವಕೀಲೆ ಮೈಥಿಲಿ ಪಾರಿಖ್‌ ಕಾರ್ಯಕ್ರಮ ನಿರೂಪಿಸಿದರು.

Related Stories

No stories found.
Kannada Bar & Bench
kannada.barandbench.com