ನ್ಯಾಯಾಲಯ ನೀಡುವ ನಿರ್ದೇಶನಗಳನ್ನು ಉತ್ತರ ಪ್ರದೇಶ ಸರ್ಕಾರ ಒಪ್ಪಿಕೊಳ್ಳುವುದಿಲ್ಲ: ನಿವೃತ್ತ ಸಿಜೆಐ ಗೋವಿಂದ್‌ ಮಾಥೂರ್‌

ಅಲಾಹಾಬಾದ್‌ ಹೈಕೋರ್ಟ್‌ ನಿವೃತ್ತ ಸಿಜೆಐ ಗೋವಿಂದ್‌ ಮಾಥೂರ್‌ 'ಬಾರ್‌ ಅಂಡ್‌ ಬೆಂಚ್‌' ಆಂಗ್ಲ ಅಂತರ್ಜಾಲ ತಾಣಕ್ಕೆ ನೀಡಿದ ಸಂದರ್ಶನದಲ್ಲಿ ಉತ್ತರ ಪ್ರದೇಶ ಸರ್ಕಾರದ ಧೋರಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯ ನೀಡುವ ನಿರ್ದೇಶನಗಳನ್ನು ಉತ್ತರ ಪ್ರದೇಶ ಸರ್ಕಾರ ಒಪ್ಪಿಕೊಳ್ಳುವುದಿಲ್ಲ: ನಿವೃತ್ತ ಸಿಜೆಐ ಗೋವಿಂದ್‌ ಮಾಥೂರ್‌

“ಉತ್ತರ ಪ್ರದೇಶದ ಕಾರ್ಯಾಂಗವು ನ್ಯಾಯಾಲಯ (ಹೈಕೋರ್ಟ್‌) ನೀಡುವ ಆದೇಶಗಳನ್ನು ಒಪ್ಪಿಕೊಳ್ಳುವುದಿಲ್ಲ” ಎಂದು ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೋವಿಂದ್‌ ಮಾಥೂರ್‌ ಹೇಳಿದ್ದಾರೆ.

ಅಲಹಾಬಾದ್ ಹೈಕೋರ್ಟ್ ಹೊರಡಿಸಿದ ಸಮಂಜಸವಾದ ನಿರ್ದೇಶನಗಳನ್ನು ಪಾಲಿಸದಿರಲು ಉತ್ತರಪ್ರದೇಶ ಸರ್ಕಾರಕ್ಕೆ ಏನು ಸಮಸ್ಯೆ ಇದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಉತ್ತರ ಪ್ರದೇಶ ಸರ್ಕಾರ ಏಕೆ ನ್ಯಾಯಾಂಗವನ್ನು ಎದುರಾಳಿ ಎಂದು ಪರಿಗಣಿಸುತ್ತಿದೆಯೋ ತಿಳಿಯದಾಗಿದೆ. ನ್ಯಾಯಾಂಗವು ರಾಜ್ಯದ ಮತ್ತೊಂದು ಮುಖ. ಉತ್ತರ ಪ್ರದೇಶದ ಐದು ನಗರಗಳಲ್ಲಿ ಲಾಕ್‌ಡೌನ್‌ ಜಾರಿಗೆ ತರುವಂತೆ ಅಲಾಹಾಬಾದ್‌ ಹೈಕೋರ್ಟ್‌ ನೀಡಿದ್ದ ಆದೇಶವು ತನ್ನ ಮಿತಿಯನ್ನು ಮೀರುವುದಾಗಿರಲಿಲ್ಲ. ಪ್ರತಿಯೊಂದು ವಿವರವನ್ನು ಒಳಗೊಂಡಿದ್ದ ಸಕಾರಣಗಳನ್ನು ನೀಡಿದ್ದ ಆದೇಶ ಅದಾಗಿತ್ತು ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.

ಐದು ನಗರಗಳಲ್ಲಿ ಪ್ರತಿದಿನ ಪರಿಸ್ಥಿತಿ ಹದಗೆಡುತ್ತಿರುವುದನ್ನು ಗುರುತಿಸಿ, ನ್ಯಾಯಾಲಯ ಲಾಕ್‌ಡೌನ್‌ಗೆ ಆದೇಶಿಸಿತ್ತೇ ವಿನಾ ಸುಮ್ಮನೇ ಲಾಕ್‌ಡೌನ್‌ ಮಾಡುವಂತೆ ಆದೇಶಿಸಿರಲಿಲ್ಲ ಎಂದಿದ್ದಾರೆ.

ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಧಾರ್ಮಿಕ ಮತಾಂತರ ಕುರಿತು ಕಾನೂನು ಜಾರಿಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ನಾನು ಮಾತನಾಡುವುದು ಸರಿಯಲ್ಲ. ಏಕೆಂದರೆ ಈ ಪ್ರಕರಣದ ವಿಚಾರಣೆಯನ್ನು ನಾನು ನಡೆಸಿದ್ದೇನೆ. ಕಾನೂನಿನ ನಿಬಂಧನೆಗಳು ಮತ್ತು ಮೂಲಭೂತ ಹಕ್ಕುಗಳ ನಡುವೆ ಸಂಘರ್ಷ ಸಂಭವಿಸಬಹುದು ಎಂಬುದು ಅರಿವಾದ ಮೇಲೆ ನನ್ನನ್ನು ಒಳಗೊಂಡ ಪೀಠವು ರಿಟ್‌ ಮನವಿಯನ್ನು ವಿಚಾರಣೆಗೆ ಪರಿಗಣಿಸಿತ್ತು. ರಿಟ್‌ ಮನವಿಯ ವಿಚಾರಣೆ ನಡೆದು, ಶೀಘ್ರವಾಗಿ ಆ ಪ್ರಕರಣ ಇತ್ಯರ್ಥವಾಗಬೇಕು ಎಂಬುದು ನನ್ನ ಆಶಯವಾಗಿದೆ ಎಂದಿದ್ದಾರೆ.

ನಿವೃತ್ತಿಯ ಬಳಿಕ ನಾನು ಯಾವುದೇ ಸರ್ಕಾರಿ ಜವಾಬ್ದಾರಿಗಳನ್ನು ನಿಭಾಯಿಸುವುದಿಲ್ಲ ಎಂಬ ವಿಚಾರದಲ್ಲಿ ಸ್ಪಷ್ಟವಾಗಿದ್ದೇನೆ. ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಕೆಲಸದಲ್ಲಿ ತೊಡಗಿಸಿಕೊಳ್ಳುವ ಇರಾದೆ ಇದೆ. ನಿವೃತ್ತಿ ಒಂದು ರೀತಿಯಲ್ಲಿ ಸರಿಯಾಗಿದೆ. ವಕೀಲನಾಗಿದ್ದರೆ 80 ವರ್ಷಕ್ಕೆ ನಿವೃತ್ತಿಯಾಗುತ್ತಿದ್ದೆ. ನ್ಯಾಯಮೂರ್ತಿಯಾಗಿ 62 ವರ್ಷಕ್ಕೆ ನಿವೃತ್ತಿ ಹೊಂದಿರುವ ನಾನು ಅದೃಷ್ಟಶಾಲಿ. ನನ್ನ ಇಚ್ಛೆಯಂತೆಯೇ ಏನಾದರೂ ಮಾಡಲಿದ್ದೇನೆ ಎಂಬುದು ಮಾತ್ರ ಸ್ಪಷ್ಟ ಎಂದಿದ್ದಾರೆ.

Also Read
ನನ್ನ ಪಾಲಿಗೆ ಡಾ.ಅಂಬೇಡ್ಕರ್‌ ಅವರು ಬಡವರ ದೇವರು: ಅಲಾಹಾಬಾದ್‌ ಹೈಕೋರ್ಟ್‌ ಸಿಜೆ ಗೋವಿಂದ್ ಮಾಥೂರ್‌ ವಿದಾಯ ಭಾಷಣ

ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುವವರನ್ನು ಯಾರೂ ನಿರ್ಬಂಧಿಸಲಾಗದು ಎಂಬುದಕ್ಕೆ ಕಾನೂನು ಕ್ಷೇತ್ರ ಹೇಳಿ ಮಾಡಿಸಿದಂಥದ್ದು. ಕಕ್ಷಿದಾರರಿಗೆ ನ್ಯಾಯದಾನ ನೀಡುವ ವಿಚಾರದಲ್ಲಿ ನೀವು ಬದ್ಧತೆ ಕಾಪಾಡಿಕೊಂಡರೆ ಹಣ ತಂತಾನೆ ಹರಿದು ಬರಲಿದೆ ಎಂದು ಯುವ ವಕೀಲರಿಗೆ ಕಿವಿ ಮಾತು ಹೇಳಿದ್ದಾರೆ. ಯುವಕರು ಉದ್ಯೋಗ ಭದ್ರತೆ ಕೇಳಿದರೆ ಕಾನೂನು ಕ್ಷೇತ್ರಕ್ಕೆ ಹೆಜ್ಜೆ ಇರಿಸದಿರುವುದು ಉತ್ತಮ ಎಂದೂ ಎಚ್ಚರಿಸಿದ್ದಾರೆ.

ಅತ್ಯಂತ ಬಡ ಹಿನ್ನೆಲೆಯಿಂದ ಬಂದು ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ರೂಢಿಸಿಕೊಂಡು ವೃತ್ತಿ ಬದುಕಿನಲ್ಲಿ ಯಶಸ್ವಿಯಾದ ಹಲವು ವಕೀಲರನ್ನು ನಾನು ನೋಡಿದ್ದೇನೆ. ಕಾನೂನು ಪದವಿ ಪೂರ್ಣಗೊಂಡ ಬಳಿಕ ನಾನು ಯಾವುದೇ ಉದ್ಯೋಗದ ಬಗ್ಗೆ ಯೋಚಿಸಲಿಲ್ಲ. ನನಗೆ ಕಾನೂನು ಎಂದರೆ ವಕೀಲನಾಗಿರುವುದು ಮತ್ತು ವಕೀಲನಾಗಿರುವುದಷ್ಟೆ ಎಂದಿದ್ದಾರೆ.

ಸಂದರ್ಶನವನ್ನು ಇಲ್ಲಿ ವೀಕ್ಷಿಸಬಹುದು:

Related Stories

No stories found.