ಭಾರತದ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾ. ಎನ್ ವಿ ರಮಣ

ಭಾರತದ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾ. ಎನ್ ವಿ ರಮಣ

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನ್ಯಾಯಮೂರ್ತಿ ರಮಣ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ನ್ಯಾ. ಎನ್ ವಿ ರಮಣ ಅವರು ಭಾರತದ‌ 48 ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನ್ಯಾಯಮೂರ್ತಿ ರಮಣ ಅವರಿಗೆ ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಬೋಧಿಸಿದರು. ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರಿಂದ ನ್ಯಾ. ರಮಣ ಅವರು ಅಧಿಕಾರ ವಹಿಸಿಕೊಂಡರು. ಆಂಧ್ರಪ್ರದೇಶ ಹೈಕೋರ್ಟ್‌ನಿಂದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾದ ಮೊದಲ ನ್ಯಾಯಮೂರ್ತಿ ಎಂಬ ಅಗ್ಗಳಿಕೆ ಅವರದ್ದಾಗಿದೆ.

Also Read
ಶಿಸ್ತು ಅಳವಡಿಸಿಕೊಂಡರೆ ಸಾಂಕ್ರಾಮಿಕ ರೋಗ ತಡೆ ಸಾಧ್ಯ: ಸಿಜೆಐ ಎನ್ ವಿ ರಮಣ

1957ರ ಆಗಸ್ಟ್ 27ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೊನ್ನಾವರಂ ಗ್ರಾಮದ ಕೃಷಿ ಕುಟುಂಬವೊಂದರಲ್ಲಿ ನ್ಯಾ. ರಮಣ ಜನಿಸಿದರು. ಕೃಷಿಕರು ಮತ್ತು ಕಾರ್ಮಿಕರ ಪರ ವಿದ್ಯಾರ್ಥಿ ದೆಸೆಯಿಂದಲೂ ಧ್ವನಿ ಎತ್ತುತ್ತ ಬಂದ ಅವರು ತೆಲುಗಿನ ಹೆಸರಾಂತ ʼಈನಾಡುʼ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿದರು. ಕೆಲಕಾಲದಲ್ಲಿಯೇ ಅಂದರೆ 1983ರಲ್ಲಿ ವಕೀಲರಾಗಿ ಸೇವೆಗೆ ಮುಂದಾದರು. ಆಂಧ್ರಪ್ರದೇಶದ ಹೈಕೋರ್ಟ್, ಕೇಂದ್ರೀಯ ಮತ್ತು ಆಂಧ್ರಪ್ರದೇಶ ಆಡಳಿತ ನ್ಯಾಯಮಂಡಳಿಗಳು ಹಾಗೂ ಸುಪ್ರೀಂಕೋರ್ಟ್‌ನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದರು.

ಆಂಧ್ರಪ್ರದೇಶದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸುವ ಮೊದಲು ವಿವಿಧ ಸರ್ಕಾರಿ ಅಂಗಸಂಸ್ಥೆಗಳ ಸ್ಥಾಯಿ ವಕೀಲರಾಗಿ ಕೆಲಸ ಮಾಡಿದ್ದರು. 2000ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು 2013ರಲ್ಲಿ ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು. ಮರುವರ್ಷ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಏಳು ವರ್ಷಗಳ ಅವಧಿಯಲ್ಲಿ ಅವರು 156 ತೀರ್ಪುಗಳನ್ನು ನೀಡಿದ್ದಾರೆ.

Related Stories

No stories found.