ಸಲಿಂಗ ವಿವಾಹ ಮರುಪರಿಶೀಲನಾ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಖನ್ನಾ

ಮದುವೆಯಾಗುವುದು ಪರಿಪೂರ್ಣ ಹಕ್ಕು ಎನ್ನಲಾಗದು ಮತ್ತು ಸಲಿಂಗ ಜೋಡಿ ಅದನ್ನು ಮೂಲಭೂತ ಹಕ್ಕು ಎಂದು ಪ್ರತಿಪಾದಿಸಲಾಗದು ಎಂಬುದಾಗಿ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಅಕ್ಟೋಬರ್ 2023ರಲ್ಲಿ ತಿಳಿಸಿತ್ತು.
Supreme Court and same sex marriage
Supreme Court and same sex marriage
Published on

ಸಲಿಂಗ ಜೋಡಿಯು ವಿವಾಹವಾಗುವ ಅಥವಾ ಸಿವಿಲ್‌ ಯೂನಿಯನ್‌ (ವಿವಾಹಕ್ಕೆ ಸರಿಸಮನಾದ ಕಾನೂನು ಮಾನ್ಯತೆ ಇರುವ ಸಂಬಂಧ) ಹೊಂದುವ ಕಾನೂನಾತ್ಮಕ ಹಕ್ಕಿನ ಕೋರಿಕೆಗೆ ಮಾನ್ಯತೆ ನೀಡಲು ನಿರಾಕರಿಸಿ ಅಕ್ಟೋಬರ್ 2023ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಗಳ ವಿಚಾರಣೆಯಿಂದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಬುಧವಾರ ಹಿಂದೆ ಸರಿದಿದ್ದಾರೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ನ್ಯಾಯಮೂರ್ತಿಗಳ ಕೊಠಡಿಯಲ್ಲಿ ಇಂದು (ಬುಧವಾರ) ಮರುಪರಿಶೀಲನಾ ಅರ್ಜಿಯ ವಿಚಾರಣೆ ಆರಂಭಿಸಿದ ವೇಳೆ ಅವರು ಈ ವಿಚಾರ ತಿಳಿಸಿದರು.

Also Read
ಸಲಿಂಗ ವಿವಾಹ ಮರುಪರಿಶೀಲನಾ ಅರ್ಜಿ: ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
Justice BV Nagarathna, Justice Sanjiv Khanna, CJI DY Chandrachud, Justice Hima Kohli and Justice PS Narasimha
Justice BV Nagarathna, Justice Sanjiv Khanna, CJI DY Chandrachud, Justice Hima Kohli and Justice PS Narasimha

ಅರ್ಜಿಗಳನ್ನು ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸುವಂತೆ ನಿನ್ನೆ (ಮಂಗಳವಾರ) ಹಿರಿಯ ವಕೀಲ ನೀರಜ್ ಕಿಶನ್ ಕೌಲ್ ಅವರು ಕೋರಿದ್ದರು. ಇದಕ್ಕೆ ಸಿಜೆಐ ಸಮ್ಮತಿಸಿರಲಿಲ್ಲ. ಪ್ರಕರಣದ ವಿಚಾರಣೆಯನ್ನು ಇಂದು ಮಧ್ಯಾಹ್ನ 1.30ಕ್ಕೆ ಸಿಜೆಐ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಗೌಪ್ಯವಾಗಿ ನಡೆಸುವುದಾಗಿ ತಿಳಿಸಿತ್ತು.

ಕಳೆದ ವರ್ಷ ನವೆಂಬರ್‌ನಲ್ಲಿ, ಹಿರಿಯ ವಕೀಲ ಮತ್ತು ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರು ವಿವಾಹ ಸಮಾನತೆ ಪ್ರಕರಣದಲ್ಲಿ ಮರುಪರಿಶೀಲನಾ ಅರ್ಜಿಗಳ ಮುಕ್ತ ನ್ಯಾಯಾಲಯದ ವಿಚಾರಣೆಯನ್ನು ಕೋರಿ ತುರ್ತು ಪ್ರಸ್ತಾವನೆ ಸಲ್ಲಿಸಿದ್ದರು.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್,  ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಹಾಗೂ ಪಿ ಎಸ್ ನರಸಿಂಹ ಅವರಿದ್ದ ಸಾಂವಿಧಾನಿಕ ಪೀಠ ಅಕ್ಟೋಬರ್ 17, 2023ರಂದು ಸಲಿಂಗ ವಿವಾಹ ಮಾನ್ಯತೆ ವಿರುದ್ಧ ತೀರ್ಪು ನೀಡಿತ್ತು.

Also Read
ಸಲಿಂಗ ವಿವಾಹ: ಸುಪ್ರೀಂ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಮುಕುಲ್‌ ರೋಹಟ್ಗಿ

ಈಗಿರುವ ಕಾನೂನು ಸಲಿಂಗ ಜೋಡಿ ವಿವಾಹವಾಗುವುದಕ್ಕೆ ಅಥವಾ ಸಿವಿಲ್‌ ಯೂನಿಯನ್‌ ಮದುವೆಗೆ ಸಮ್ಮತಿ ಸೂಚಿಸುವುದಿಲ್ಲ. ಹಾಗೆ ಸಮ್ಮತಿ ನೀಡುವ ಕಾನೂನು ರೂಪಿಸುವುದು ಸಂಸತ್ತಿಗೆ ಬಿಟ್ಟ ವಿಚಾರ. ಅಲ್ಲದೆ ಅಸ್ತಿತ್ವದಲ್ಲಿರುವ ಕಾನೂನಿನಡಿಯಲ್ಲಿ ಸಲಿಂಗ ಜೋಡಿಗೆ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಹಕ್ಕಿಲ್ಲ ಎಂದು ನ್ಯಾಯಾಲಯ ಹೇಳಿತ್ತು.

ನ್ಯಾ. ಭಟ್, ಕೊಹ್ಲಿ ಹಾಗೂ ನರಸಿಂಹ ಅವರು ಬಹುಮತದ ತೀರ್ಪು ನೀಡಿದರೆ, ಸಿಜೆಐ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಕೌಲ್ ಅಲ್ಪಮತದ ತೀರ್ಪಿತ್ತಿದ್ದರು.

ಮದುವೆಯಾಗುವುದು ಪರಿಪೂರ್ಣ ಹಕ್ಕು ಎನ್ನಲಾಗದು ಮತ್ತು ಸಲಿಂಗ ಜೋಡಿ ಅದನ್ನು ಮೂಲಭೂತ ಹಕ್ಕು ಎಂದು ಪ್ರತಿಪಾದಿಸಲಾಗದು ಎಂದು ಪೀಠದ ಎಲ್ಲಾ ನ್ಯಾಯಮೂರ್ತಿಗಳು ತಿಳಿಸಿದ್ದರು. ವಿಶೇಷ ವಿವಾಹ ಕಾಯಿದೆಯ ಸೆಕ್ಷನ್‌ಗಳನ್ನು ಪ್ರಶ್ನಿಸಿದ್ದನ್ನು ನ್ಯಾಯಾಲಯ ಸರ್ವಾನುಮತದಿಂದ ತಿರಸ್ಕರಿಸಿತ್ತು.

Kannada Bar & Bench
kannada.barandbench.com