ಸಲಿಂಗ ವಿವಾಹ ಮರುಪರಿಶೀಲನಾ ಅರ್ಜಿ: ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಮದುವೆಯಾಗುವುದು ಪರಿಪೂರ್ಣ ಹಕ್ಕು ಎನ್ನಲಾಗದು ಮತ್ತು ಸಲಿಂಗ ಜೋಡಿ ಅದನ್ನು ಮೂಲಭೂತ ಹಕ್ಕು ಎಂದು ಪ್ರತಿಪಾದಿಸಲಾಗದು ಎಂದು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಅಕ್ಟೋಬರ್ 2023ರಲ್ಲಿ ತಿಳಿಸಿತ್ತು.
Supreme Court, Same sex marriage
Supreme Court, Same sex marriage
Published on

ಸಲಿಂಗ ಜೋಡಿಯು ವಿವಾಹವಾಗುವ ಅಥವಾ ಸಿವಿಲ್‌ ಯೂನಿಯನ್‌ (ವಿವಾಹಕ್ಕೆ ಸರಿಸಮನಾದ ಕಾನೂನು ಮಾನ್ಯತೆ ಇರುವ ಸಂಬಂಧ) ಹೊಂದುವ ಕಾನೂನಾತ್ಮಕ ಹಕ್ಕಿನ ಕೋರಿಕೆಗೆ ಮಾನ್ಯತೆ ನೀಡಲು ನಿರಾಕರಿಸಿ ಅಕ್ಟೋಬರ್ 2023ರಲ್ಲಿ ತಾನು ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಗಳನ್ನು ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದೆದುರು ಹಿರಿಯ ವಕೀಲ ನೀರಜ್ ಕಿಶನ್ ಕೌಲ್ ಅವರು ಈ ವಿಚಾರ ಪ್ರಸ್ತಾಪಿಸಿದರು. ಈ ಅರ್ಜಿಗಳನ್ನು ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲು ಅವರು ಮನವಿ ಮಾಡಿದರು. ಆದರೆ ಇದಕ್ಕೆ ಸಿಜೆಐ ಸಮ್ಮತಿಸಲಿಲ್ಲ.

Also Read
ಸಲಿಂಗ ವಿವಾಹ ಅಥವಾ ಸಿವಿಲ್ ಯೂನಿಯನ್‌ಗೆ ಸುಪ್ರೀಂ ನಕಾರ; ಅಲ್ಪಮತದ ತೀರ್ಪಿನಲ್ಲಿ ಸಿವಿಲ್‌ ಯೂನಿಯನ್‌ಗೆ ಸಿಜೆಐ ಸಹಮತ

ಪ್ರಕರಣದ ವಿಚಾರಣೆಯನ್ನು ಬುಧವಾರ ಮಧ್ಯಾಹ್ನ 1.30ಕ್ಕೆ ಸಿಜೆಐ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಗೌಪ್ಯವಾಗಿ ನಡೆಸಲಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ, ಹಿರಿಯ ವಕೀಲ ಮತ್ತು ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ವಿವಾಹ ಸಮಾನತೆ ಪ್ರಕರಣದಲ್ಲಿ ಮರುಪರಿಶೀಲನಾ ಅರ್ಜಿಗಳ ಮುಕ್ತ ನ್ಯಾಯಾಲಯದ ವಿಚಾರಣೆಯನ್ನು ಕೋರಿ ತುರ್ತು ಪ್ರಸ್ತಾವನೆ ಸಲ್ಲಿಸಿದ್ದರು.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್,  ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಹಾಗೂ ಪಿ ಎಸ್ ನರಸಿಂಹ ಅವರಿದ್ದ ಸಾಂವಿಧಾನಿಕ ಪೀಠ ಅಕ್ಟೋಬರ್ 17, 2023ರಂದು ಸಲಿಂಗ ವಿವಾಹ ಮಾನ್ಯತೆ ವಿರುದ್ಧ ತೀರ್ಪು ನೀಡಿತ್ತು.

ಈಗಿರುವ ಕಾನೂನು ಸಲಿಂಗ ಜೋಡಿ ವಿವಾಹವಾಗುವುದಕ್ಕೆ ಅಥವಾ ಸಿವಿಲ್‌ ಯೂನಿಯನ್‌ ಮದುವೆಗೆ ಸಮ್ಮತಿ ಸೂಚಿಸುವುದಿಲ್ಲ. ಹಾಗೆ ಸಮ್ಮತಿ ನೀಡುವ ಕಾನೂನು ರೂಪಿಸುವುದು ಸಂಸತ್ತಿಗೆ ಬಿಟ್ಟ ವಿಚಾರ. ಅಲ್ಲದೆ ಅಸ್ತಿತ್ವದಲ್ಲಿರುವ ಕಾನೂನಿನಡಿಯಲ್ಲಿ ಸಲಿಂಗ ಜೋಡಿಗೆ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಹಕ್ಕಿಲ್ಲ ಎಂದು ನ್ಯಾಯಾಲಯ ಹೇಳಿತ್ತು.

Also Read
ಸಲಿಂಗ ವಿವಾಹ ಕುರಿತು ಕಾಯಿದೆ ರೂಪಿಸುವುದು ಸರ್ಕಾರಕ್ಕೆ ಭವಿಷ್ಯದಲ್ಲಿ ಸಾಧ್ಯವಾಗಬಹುದು: ನ್ಯಾ. ಸಂಜಯ್ ಕಿಶನ್ ಕೌಲ್

ನ್ಯಾ. ಭಟ್, ಕೊಹ್ಲಿ ಹಾಗೂ ನರಸಿಂಹ ಅವರು ಬಹುಮತದ ತೀರ್ಪು ನೀಡಿದರೆ, ಸಿಜೆಐ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಕೌಲ್ ಅಲ್ಪಮತದ ತೀರ್ಪಿತ್ತಿದ್ದರು.

ಮದುವೆಯಾಗುವುದು ಪರಿಪೂರ್ಣ ಹಕ್ಕು ಎನ್ನಲಾಗದು ಮತ್ತು ಸಲಿಂಗ ಜೋಡಿ ಅದನ್ನು ಮೂಲಭೂತ ಹಕ್ಕು ಎಂದು ಪ್ರತಿಪಾದಿಸಲಾಗದು ಎಂದು ಪೀಠದ ಎಲ್ಲಾ ನ್ಯಾಯಮೂರ್ತಿಗಳು ತಿಳಿಸಿದ್ದರು. ವಿಶೇಷ ವಿವಾಹ ಕಾಯಿದೆಯ ಸೆಕ್ಷನ್‌ಗಳನ್ನು ಪ್ರಶ್ನಿಸಿದ್ದನ್ನು ನ್ಯಾಯಾಲಯ ಸರ್ವಾನುಮತದಿಂದ ತಿರಸ್ಕರಿಸಿತ್ತು.

Kannada Bar & Bench
kannada.barandbench.com