
ಕ್ರಮವಾಗಿ ಬಾಂಬೆ ಹೈಕೋರ್ಟ್ ಹಾಗೂ ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಅಲೋಕ್ ಆರಾಧೆ, ಹಾಗೂ ವಿಪುಲ್ ಎಂ ಪಂಚೋಲಿ, ಅವರು ಇಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.
ಈ ಇಬ್ಬರ ನೇಮಕಾತಿಯೊಂದಿಗೆ, 34 ನ್ಯಾಯಮೂರ್ತಿಗಳ ಸಂಖ್ಯಾ ಬಲದ ಸುಪ್ರೀಂ ಕೋರ್ಟ್ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮ್ ನಾಥ್, ಜೆ ಕೆ ಮಹೇಶ್ವರಿ ಹಾಗೂ ಬಿ ವಿ ನಾಗರತ್ನ ಅವರನ್ನೊಳಗೊಂಡ ಕೊಲಿಜಿಯಂ ಈ ಇಬ್ಬರು ನ್ಯಾಯಮೂರ್ತಿಗಳ ಪದೋನ್ನತಿಗೆ ಶಿಫಾರಸ್ಸು ಮಾಡಿತ್ತು.
ಗಮನಾರ್ಹ ಅಂಶವೆಂದರೆ, ನ್ಯಾ. ನಾಗರತ್ನ ಅವರು ನ್ಯಾ. ಪಂಚೋಲಿ ಅವರ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅವರ ನೇಮಕಾತಿ ನ್ಯಾಯಿಕ ಆಡಳಿತಕ್ಕೆ ಪ್ರತಿಕೂಲವಾಗಲಿದ್ದು ಕೊಲಿಜಿಯಂನ ವಿಶ್ವಾಸಾರ್ಹತೆಗೆ ಹಾನಿ ತರುತ್ತದೆ ಎಂದು ಎಚ್ಚರಿಸಿದ್ದರು.
ದೇಶದ ಹೈಕೋರ್ಟ್ ನ್ಯಾಯಮೂರ್ತಿಗಳ ಹಿರಿತನದ ಪಟ್ಟಿಯಲ್ಲಿ ನ್ಯಾ. ಪಂಚೋಲಿ 57ನೇ ಸ್ಥಾನದಲ್ಲಿದ್ದಾರಾದರೂ ಹಲವು ಹಿರಿಯ ನ್ಯಾಯಮೂರ್ತಿಗಳನ್ನು ಕಡೆಗಣಿಸಲಾಗಿದೆ ಎಂದು ಅವರು ಬೆರಳು ಮಾಡಿದ್ದರು. ಅವರ ಭಿನ್ನಾಭಿಪ್ರಾಯವನ್ನು ಕೊಲಿಜಿಯಂನ ಉಳಿದ ಸದಸ್ಯರಾದ ಸಿಜೆಐ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ , ವಿಕ್ರಮ್ ನಾಥ್ ಹಾಗೂ ಜೆ ಕೆ ಮಹೇಶ್ವರಿ ಅವರು ತಳ್ಳಿಹಾಕಿದ್ದರು.
ನ್ಯಾಯಮೂರ್ತಿ ಪಂಚೋಲಿ ಅವರು 2031ರಲ್ಲಿ ಸುಪ್ರೀಂ ಕೋರ್ಟ್‌ನ 60ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲಿದ್ದು ತಮ್ಮ ಮಾತೃ ನ್ಯಾಯಾಲಯವಾದ ಗುಜರಾತ್ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದ ಮೂರನೇ ಹಾಲಿ ನ್ಯಾಯಮೂರ್ತಿ ಎನಿಸಿಕೊಂಡಿದ್ದಾರೆ.
ಕೊಲಿಜಿಯಂ ಪಂಚೋಲಿ ಅವರಿಗೆ ಪದೋನ್ನತಿ ನೀಡಲು ಶಿಫಾರಸು ಮಾಡಿದ ಎರಡು ದಿನಗಳ ನಂತರ, ಆಗಸ್ಟ್ 27ರಂದು ಕೇಂದ್ರ ಸರ್ಕಾರ ಅವರನ್ನು ಮತ್ತು ಕರ್ನಾಟಕ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಮೂರ್ತಿಯಾಗಿ ಕೆಲ ಕಾಲ ಸೇವೆ ಸಲ್ಲಿಸಿದ್ದ ಆರಾಧೆ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸಲು ಅನುಮೋದನೆ ನೀಡಿತ್ತು.
ನ್ಯಾ. ಆರಾಧೆ ಸುಪ್ರೀಂ ಕೋರ್ಟ್‌ಗೆ ಬಡ್ತಿ ಪಡೆಯುವ ಮೊದಲು ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದರು. 2009 ರಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. 2011 ರಲ್ಲಿ ಅವರನ್ನು ಖಾಯಂ ನ್ಯಾಯಾಧೀಶರನ್ನಾಗಿ ಮಾಡಲಾಯಿತು. 2016 ರಲ್ಲಿ ಅವರನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು ಮತ್ತು 2018 ರಲ್ಲಿ 3 ತಿಂಗಳುಗಳ ಕಾಲ ಅದರ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು.
ಅದರ ನಂತರ, ಅವರು ನವೆಂಬರ್ 17, 2018 ರಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರು ಮತ್ತು 2022 ರಲ್ಲಿ ಕೆಲವು ತಿಂಗಳುಗಳ ಕಾಲ ಅದರ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು. ಜುಲೈ 2023 ರಲ್ಲಿ, ಅವರನ್ನು ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು. ನಂತರ ಅವರನ್ನು ಜನವರಿ 2025 ರಲ್ಲಿ ಬಾಂಬೆ ಹೈಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾಯಿಸಲಾಯಿತು.