
ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾ. ವಿಪುಲ್ ಪಂಚೋಲಿ ಅವರನ್ನು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ನೀಡಿದ್ದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳ ಆಯ್ಕೆ ಶಿಫಾರಸು ಮಾಡುವ ಸುಪ್ರೀಂ ಕೋರ್ಟ್ ಕೊಲಿಜಿಯಂನ ಸದಸ್ಯರಾದ ನ್ಯಾ. ಬಿ ವಿ ನಾಗರತ್ನ ಅವರು ವ್ಯಕ್ತಪಡಿಸಿರುವ ಭಿನ್ನಾಭಿಪ್ರಾಯವನ್ನು ಬಹಿರಂಗಪಡಿಸುವುದು ಅಗತ್ಯವಿತ್ತು ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಬುಧವಾರ ಆಗ್ರಹಿಸಿದ್ದಾರೆ.
ನ್ಯಾ. ನಾಗರತ್ನ ಅವರ ಭಿನ್ನಾಭಿಪ್ರಾಯದ ವಿವರಗಳನ್ನು ದಾಖಲಿಸಬೇಕಿತ್ತು ಎಂದು ಕಳೆದ ಮೇನಲ್ಲಿ ನಿವೃತ್ತರಾದ ನ್ಯಾ. ಓಕಾ ತಿಳಿಸಿದ್ದಾರೆ.
ನ್ಯಾಯಮೂರ್ತಿಯೊಬ್ಬರು ವ್ಯಕ್ತಪಡಿಸಿದ ಭಿನ್ನಾಭಿಪ್ರಾಯ ಏನೆಂದು ನಮಗೆ ತಿಳಿದಿರಬೇಕು. ಅದರಲ್ಲಿ ಯಾವುದೇ ತಪ್ಪಿಲ್ಲ. ಆ ಭಿನ್ನಾಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಏಕೆ ಕಾಣಿಸಿಕೊಳ್ಳುತ್ತಿಲ್ಲ ಎಂದು ಯಾರಾದರೂ ಟೀಕಿಸಿದರೆ ಅದು ಸಮರ್ಥನೀಯ ಎಂದು ಅವರು ಹೇಳಿದರು.
ಆದರೆ ಆಯ್ಕೆಯಾಗದ ಅಭ್ಯರ್ಥಿಗಳ ಗೌಪ್ಯತೆ ಕಾಪಾಡಿಕೊಂಡು ಮಾಹಿತಿ ಬಹಿರಂಗವಾಬೇಕು. ಏಕೆಂದರೆ ಆಯ್ಕೆಯಾಗದ ಎಷ್ಟೋ ವಕೀಲರು ಕಾನೂನು ಪ್ರಾಕ್ಟೀಸ್‌ಗೆ ಮರಳಬೇಕಿರುತ್ತದೆ ಎಂದರು.
ಒರಿಸ್ಸಾ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾ. ಎಸ್ ಮುರಳೀಧರ್ ಅವರು ಸಂಪಾದಿಸಿರುವ '[ಇನ್] ಕಂಪ್ಲೀಟ್ ಜಸ್ಟೀಸ್? ದ ಸುಪ್ರೀಂ ಕೋರ್ಟ್ ಅಟ್ 75' ಪುಸ್ತಕ ಬಿಡುಗಡೆ ಸಮಾರಂಭದ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ಕೇಳಿದ ಪ್ರಶ್ನೆಗೆ ಸಹಮತ ವ್ಯಕ್ತಪಡಿಸುತ್ತಾ ನ್ಯಾ. ಓಕಾ ಉತ್ತರಿಸಿದರು.
ಸುಪ್ರೀಂ ಕೋರ್ಟ್‌ನ ಹಿಂದೆ ಕೈಗೊಳ್ಳುತ್ತಿದ್ದ ನಿರ್ಣಯದ ಪ್ರಕಾರ ಅಭ್ಯರ್ಥಿಗಳ ಆದಾಯವನ್ನು ಸಹ ಬಹಿರಂಗಪಡಿಸಬೇಕಿತ್ತು. ವಕೀಲರ ಘನತೆ ಮತ್ತು ಪಾರದರ್ಶಕತೆ ಎರಡನ್ನೂ ಜತನದಿಂದ ಕಾಯ್ದುಕೊಂಡು ಈ ರೀತಿ ಮಾಡಬೇಕು ಎಂದು ಅವರು ಹೇಳಿದರು. ಆದರೆ ಭಿನ್ನಾಭಿಪ್ರಾಯಕ್ಕೆ ಕಾರಣ ಏನು ಎಂದು ಪ್ರಕಟಿಸಿದರೆ ಅದರಿಂದ ಅಭ್ಯರ್ಥಿಗಳಿಗೆ ಸಮಸ್ಯೆಯಾಗಬಾರದು ಎಂತಲೂ ಅವರು ಹೇಳಿದರು.
ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾ. ವಿಪುಲ್ ಪಂಚೋಲಿ ಅವರನ್ನು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ನೀಡುವ ಶಿಫಾರಸು ಮಾಡಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಆಗಸ್ಟ್ 25ರಂದು ಕೈಗೊಂಡ ನಿರ್ಣಯದ ವಿವಾದಕ್ಕೀಡಾಗಿತ್ತು.
ಶಿಫಾರಸನ್ನು ಕೇಂದ್ರ ಸರ್ಕಾರ ಬುಧವಾರ ಅನುಮೋದಿಸಿದೆ. ನ್ಯಾ. ಪಂಚೋಲಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಲಿದ್ದು, ಜೊತೆಗೆ ಒಂದೂವರೆ ವರ್ಷಗಳಿಗೂ ಹೆಚ್ಚು ಕಾಲ ಅವರು ಮುಖ್ಯ ನ್ಯಾಯಮೂರ್ತಿಯಾಗಿರಲಿದ್ದಾರೆ.
ನ್ಯಾ. ಬಿ ವಿ ನಾಗರತ್ನ ಅವರು ಕೊಲಿಜಿಯಂ ನಿರ್ಧಾರಕ್ಕೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದು, ಅವರ ನೇಮಕಾತಿ ನ್ಯಾಯಿಕ ಆಡಳಿತಕ್ಕೆ ಪ್ರತಿಕೂಲವಾಗಲಿದ್ದು ಕೊಲಿಜಿಯಂನ ವಿಶ್ವಾಸಾರ್ಹತೆಗೆ ಹಾನಿ ತರುತ್ತದೆ ಎಂದು ಎಚ್ಚರಿಸಿದ್ದಾರೆ ಎನ್ನಲಾಗಿತ್ತು. ದೇಶದ ಹೈಕೋರ್ಟ್ ನ್ಯಾಯಮೂರ್ತಿಗಳ ಹಿರಿತನದ ಪಟ್ಟಿಯಲ್ಲಿ ನ್ಯಾ. ಪಂಚೋಲಿ 57ನೇ ಸ್ಥಾನದಲ್ಲಿದ್ದಾರಾದರೂ ಹಲವು ಹಿರಿಯ ನ್ಯಾಯಮೂರ್ತಿಗಳನ್ನು ಕಡೆಗಣಿಸಲಾಗಿದೆ ಎಂದು ಅವರು ಬೆರಳು ಮಾಡಿದ್ದರು.
ಅವರ ಭಿನ್ನಾಭಿಪ್ರಾಯವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ , ವಿಕ್ರಮ್ ನಾಥ್ ಮತ್ತು ಜೆ ಕೆ ಮಹೇಶ್ವರಿ ಅವರು ತಳ್ಳಿಹಾಕಿದರು. ಸುಪ್ರೀಂ ಕೋರ್ಟ್ ಜಾಲತಾಣದಲ್ಲಿ ಪ್ರಕಟಿಸಲಾದ ನಿರ್ಣಯದಲ್ಲಿ ಭಿನ್ನಾಭಿಪ್ರಾಯದ ವಿವರಗಳನ್ನು ಬಹಿರಂಗಪಡಿಸರಲಿಲ್ಲ.
ಈ ನಿರ್ಧಾರ ವಕೀಲ ಸಮುದಾಯ ಮತ್ತು ನಾಗರಿಕ ಸಮಾಜ ಸಂಸ್ಥೆಗಳಿಂದ ಟೀಕೆಗೆ ಗುರಿಯಾಯಿತು. ಕೊಲಿಜಿಯಂ ನಿರ್ಣಯದಿಂದ ಕಿರಿಯ ನ್ಯಾಯಮೂರ್ತಿಗಳನ್ನು ಪದೋನ್ನತಿ ನೀಡುವಲ್ಲಿ ಅನ್ವಯಿಸಲಾದ ಮಾನದಂಡಗಳು ಸೇರಿದಂತೆ ಪ್ರಮುಖ ವಿವರಗಳು ಇಲ್ಲದಿರುವುದನ್ನು ಅವರು ಟೀಕಿಸಿದ್ದರು.