ಬಾಲ ನ್ಯಾಯ ವ್ಯವಸ್ಥೆಯಲ್ಲಿ ಸಿಬ್ಬಂದಿ ಕೊರತೆ: ನ್ಯಾ. ಮದನ್ ಲೋಕೂರ್ ಕಳವಳ

"ಭಾರತದಲ್ಲಿ ಬಾಲ ನ್ಯಾಯ ವ್ಯವಸ್ಥೆಯಲ್ಲಿ ತನಿಖೆ ಸಬಲೀಕರಣ” ಎಂಬ ವಿಷಯದ ಕುರಿತು ನಡೆದ ರಾಷ್ಟ್ರೀಯ ಸಮಾವೇಶದ ಉದ್ಘಾಟನೆ ವೇಳೆ ನ್ಯಾ. ಲೋಕೂರ್ ಮಾತನಾಡಿದರು.
Former judge, Justice Madan B Lokur
Former judge, Justice Madan B Lokur
Published on

ಭಾರತದಲ್ಲಿ ಬಾಲ ನ್ಯಾಯ ವ್ಯವಸ್ಥೆಯು ಸಿಬ್ಬಂದಿ ಕೊರತೆಯಿಂದ ಬಳಲುತ್ತಿದ್ದು ಅಪರಾಧಿಗಳ ಪರಿವೀಕ್ಷಣೆ ಕಾಯಿದೆಯನ್ನು ದೇಶದಲ್ಲಿ ಸೂಕ್ತ ರೀತಿಯಲ್ಲಿ ಜಾರಿಗೆ ತಂದಿಲ್ಲ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ಆತಂಕ ವ್ಯಕ್ತಪಡಿಸಿದರು.

ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ (ಟಿಐಎಸ್‌ಎಸ್‌) ಕ್ಷೇತ್ರ ಕ್ರಿಯಾ ಯೋಜನೆಯಾದ ಬಾಲ ನ್ಯಾಯ ಸಂಪನ್ಮೂಲ ಕೋಶ (ಆರ್‌ಸಿಜೆಜೆ) ಮತ್ತು ದೆಹಲಿ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗ ಜಂಟಿಯಾಗಿ ನವದೆಹಲಿಯಲ್ಲಿ ಜೂನ್ 6ರಂದು ಆಯೋಜಿಸಿದ್ದ "ಭಾರತದಲ್ಲಿ ಬಾಲ ನ್ಯಾಯ ವ್ಯವಸ್ಥೆಯಲ್ಲಿ ಪರಿವೀಕ್ಷಣೆ ಸಬಲೀಕರಣ” ಎಂಬ ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Also Read
ವಿಶ್ವಸಂಸ್ಥೆಯ ಆಂತರಿಕ ನ್ಯಾಯ ಮಂಡಳಿ ಅಧ್ಯಕ್ಷರಾಗಿ ನಿವೃತ್ತ ನ್ಯಾ. ಮದನ್‌ ಲೋಕೂರ್‌ ನೇಮಕ

ಭಾರತದಲ್ಲಿ ಕಾನೂನಿನೊಂದಿಗೆ ಸಂಘರ್ಷದಲ್ಲಿರುವ 150 ರಿಂದ 500 ಮಕ್ಕಳ ತನಿಖೆಯ ಮೇಲ್ವಿಚಾರಣೆಯನ್ನು ಒಬ್ಬರೇ ತನಿಖಾಧಿಕಾರಿ ನಿರ್ವಹಿಸುತ್ತಾರೆ. ಕೆನಡಾಕ್ಕೆ 2000ನೇ ಇಸವಿಯಲ್ಲಿ ಭೇಟಿ ನೀಡಿದ್ದಾಗ ಅಲ್ಲಿ  30-35 ಮಕ್ಕಳಿಗೆ ಒಬ್ಬ ತನಿಖಾಧಿಕಾರಿ ಇದ್ದದ್ದನ್ನು ಕಂಡೆ ಎಂದು ವಿಶ್ವಸಂಸ್ಥೆಯ ಆಂತರಿಕ ನ್ಯಾಯ ಮಂಡಳಿಯ ಹಾಲಿ ಅಧ್ಯಕ್ಷರಾಗಿರುವ ಅವರು ನೆನೆದರು. ಬಾಲಾಪರಾಧಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಹೆಚ್ಚಿನ ತನಿಖಾಧಿಕಾರಿಗಳನ್ನು ನೇಮಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (ಎನ್‌ಎಎಲ್‌ಎಸ್‌ಎ) ಸದಸ್ಯ ಕಾರ್ಯದರ್ಶಿ (ಪ್ರಭಾರಿ) ಭರತ್ ಪರಾಶರ್, ಟಿಐಎಸ್‌ಎಸ್‌ನ ಸಮಾಜ ಕಾರ್ಯ ಶಾಲೆಯ ಡೀನ್ ಪ್ರೊ. ಬಿಪಿನ್ ಜೊಜೊ ಮತ್ತು ದೆಹಲಿ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ. ಸಂಜಯ್ ರಾಯ್ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು, ಬಾಲ ನ್ಯಾಯಮಂಡಳಿಯ ಪ್ರಧಾನ ಮ್ಯಾಜಿಸ್ಟ್ರೇಟ್‌ಗಳು, ಬಾಲ ನ್ಯಾಯ ವ್ಯವಸ್ಥೆಯ ಭಾಗವಾಗಿ ಕೆಲಸ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತರು, ವಿವಿಧ ಕಾನೂನು ಅಧಿಕಾರಿಗಳು, ತಜ್ಞರು, ಸಂಶೋಧಕರು ಸಮಾರಂಭದಲ್ಲಿ ಭಾಗವಹಿಸಿದ್ದರು.

Kannada Bar & Bench
kannada.barandbench.com