ನಟ ಕಮಲ್‌ ಹಾಸನ್‌ ವಿವಾದಾತ್ಮಕ ಹೇಳಿಕೆ: ಮಧ್ಯಪ್ರವೇಶಿಸಲು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಕನ್ನಡ ಸಾಹಿತ್ಯ ಪರಿಷತ್ತು

ಕಮಲ್‌ ಹಾಸನ್‌ ಮನವಿ ವಿರೋಧಿಸಿ ಹಾಗೂ ಕನ್ನಡ ಭಾಷೆ-ಸಂಸ್ಕೃತಿಯ ಇತಿಹಾಸ, ಘನತೆ ಮತ್ತು ಗುರುತನ್ನು ಸಂರಕ್ಷಿಸುವ ವಿಚಾರದಲ್ಲಿ ಪರಿಷತ್ತಿಗೆ ತನ್ನ ವಾದ ಮಂಡಿಸಲು ಅವಕಾಶ ಕಲ್ಪಿಸಬೇಕು ಎಂದು ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಕೋರಿದ್ದಾರೆ.
Mahesh Joshi and Karnataka HC
Mahesh Joshi and Karnataka HC
Published on

ನಟ ಕಮಲ್‌ ಹಾಸನ್‌ ನಟನೆಯ ಥಗ್‌ ಲೈಫ್‌ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಭದ್ರತೆ ಒದಗಿಸಲು ಸರ್ಕಾರ ಮತ್ತು ಪೊಲೀಸ್‌ ಇಲಾಖೆಗೆ ನಿರ್ದೇಶಿಸುವಂತೆ ಚಿತ್ರ ನಿರ್ಮಿಸಿರುವ ರಾಜ್‌ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆ ಸಲ್ಲಿಸಿರುವ ಅರ್ಜಿಯಲ್ಲಿ ಮಧ್ಯಪ್ರವೇಶಿಸಲು ಕೋರಿ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಅಧ್ಯಕ್ಷ ಡಾ.ಮಹೇಶ್‌ ಜೋಷಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ತಮಿಳುನಿಂದ ಕನ್ನಡ ಹುಟ್ಟಿದೆ ಎಂದು ಥಗ್‌ ಲೈಫ್‌ ಚಿತ್ರದ ಆಡಿಯೊ ಬಿಡುಗಡೆ ವೇಳೆ ನಟ ಕಮಲ್‌ ಹಾಸನ್‌ ಹೇಳಿಕೆ ನೀಡಿದ್ದರು. ಇದರಿಂದ ಥಗ್‌ ಲೈಫ್‌ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಕನ್ನಡಪರ ಸಂಘಟನೆಗಳು ಮತ್ತು ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ ವಿರೋಧ ವ್ಯಕ್ತಪಡಿಸಿದ್ದವು.

ಮೂಲ ಅರ್ಜಿಯ ವಿಚಾರಣೆಯ ವೇಳೆ ಪೀಠವು ನಟ ಕಮಲ್‌ ಹಾಸನ್‌ ಅವರು ತಾವೇ ಸೃಷ್ಟಿಸಿರುವ ಸಮಸ್ಯೆಯನ್ನು ಕ್ಷಮೆ ಕೋರುವ ಮೂಲಕ ಅವರೇ ಅಂತ್ಯ ಕಾಣಿಸಬೇಕು ಎಂದು ಹೇಳಿತ್ತು. ಅಲ್ಲದೇ, ಚಿತ್ರ ಬಿಡುಗಡೆಗೆ ಪೊಲೀಸ್‌ ಭದ್ರತೆ ಒದಗಿಸುವುದಕ್ಕೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲು ನಿರಾಕರಿಸಿತು. ಪರಿಣಾಮ ಪೂರ್ವ ನಿಗದಿಯಂತೆ ಜೂನ್‌ 5ರಂದು ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಮಾಡುವುದರಿಂದ ರಾಜ್‌ ಕಮಲ್‌ ಫಿಲ್ಮ್ಸ್‌ಹಿಂದೆ ಸರಿದಿತ್ತು.

Also Read
ಕರ್ನಾಟಕದಲ್ಲಿ ಸದ್ಯಕ್ಕೆ ಥಗ್‌ ಲೈಫ್‌ ಬಿಡುಗಡೆ ಇಲ್ಲ: ಕ್ಷಮೆ ಕೇಳಲು ಕಮಲ್ ಹಾಸನ್‌ ನಕಾರ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆಗೆ ಕಮಲ್‌ ಹಾಸನ್‌ ಸಮಾಲೋಚನೆ ನಡೆಸಲು ಬಯಸಿರುವುದಾಗಿ ತಿಳಿಸಿದ್ದರಿಂದ ನ್ಯಾಯಾಲಯವು ವಿಚಾರಣೆಯನ್ನು ಜೂನ್‌ 10ಕ್ಕೆ ಮುಂದೂಡಿತ್ತು. ಇದೀಗ ರಾಜ್‌ ಕಮಲ್‌ ಫಿಲ್ಮ್ಸ್‌ ಅರ್ಜಿಗೆ ಸಂಬಂಧಿಸಿದಂತೆ ಮಧ್ಯಪ್ರವೇಶ ಮಾಡಲು ಅನುಮತಿ ಕೋರಿರುವ ಕನ್ನಡ ಸಾಹಿತ್ಯ ಪರಿಷತ್ತು, ಅರ್ಜಿದಾರ ಸಂಸ್ಥೆಯ ಮನವಿಗಳಿಗೆ ತಮ್ಮ ವಿರೋಧವಿದೆ. ಕನ್ನಡ ಭಾಷೆಯ ಬಗ್ಗೆ ಕಮಲ್‌ ನಕಾರಾತ್ಮಕ ಹೇಳಿಕೆ ನೀಡಿದ್ದಾರೆ. ಮೇಲಾಗಿ ಕ್ಷಮೆ ಕೋರಲು ನಿರಾಕರಿಸಿ ಅಹಂಕಾರ ಮೆರೆದಿದ್ದಾರೆ ಎಂದಿದೆ.

ಮುಂದುವರೆದು, ಅರ್ಜಿದಾರರ ಮನವಿ ವಿರೋಧಿಸಿ ಹಾಗೂ ಕನ್ನಡ ಭಾಷೆ-ಸಂಸ್ಕೃತಿಯ ಇತಿಹಾಸ, ಘನತೆ ಮತ್ತು ಗುರುತನ್ನು ಸಂರಕ್ಷಿಸುವ ವಿಚಾರದಲ್ಲಿ ತನಗೆ ವಾದ ಮಂಡಿಸಲು ಅವಕಾಶ ಕಲ್ಪಿಸಬೇಕು ಎಂದು ಪರಿಷತ್ತು ಕೋರಿದೆ.

Kannada Bar & Bench
kannada.barandbench.com