ಕರ್ನಾಟಕದಲ್ಲಿ ಸದ್ಯಕ್ಕೆ ಥಗ್‌ ಲೈಫ್‌ ಬಿಡುಗಡೆ ಇಲ್ಲ: ಕ್ಷಮೆ ಕೇಳಲು ಕಮಲ್ ಹಾಸನ್‌ ನಕಾರ

“ಅಹಂ ಮುಂದೆ ಮಾಡಿದ್ದೀರಿ. ಅದು ಕಮಲ್‌ ಹಾಸನ್‌ ಅಥವಾ ಬೇರೆ ಯಾರೇ ಆಗಿರಬಹುದು. ಇದು ಜನರ ಭಾವನೆಗಳಿಗೆ ಹಾನಿ ಮಾಡುವ ವಿಚಾರವಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ಕರ್ನಾಟಕದಲ್ಲಿ ಸದ್ಯಕ್ಕೆ ಥಗ್‌ ಲೈಫ್‌ ಬಿಡುಗಡೆ ಇಲ್ಲ: ಕ್ಷಮೆ ಕೇಳಲು ಕಮಲ್ ಹಾಸನ್‌ ನಕಾರ
Published on

ಕರ್ನಾಟಕ ಚಲನಚಿತ್ರ ವಾಣಿಜ್ಯೋದ್ಯಮ ಮಂಡಳಿಯ (ಕೆಎಫ್‌ಸಿಸಿ) ಜೊತೆಗೆ ಸಮಾಲೋಚನೆ ನಡೆಸುವವರೆಗೆ ಕರ್ನಾಟಕದಲ್ಲಿ ʼಥಗ್‌ ಲೈಫ್‌ʼ ಚಿತ್ರ ಬಿಡುಗಡೆ ಮಾಡದಿರಲು ರಾಜ್‌ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯು ನಿರ್ಧರಿಸಿರುವುದರಿಂದ ಪ್ರಕರಣದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಮುಂದೂಡಿದೆ. ಈ ನಡುವೆ, (ತಮಿಳಿನಿಂದ ಕನ್ನಡ ಹುಟ್ಟಿದೆ ಎಂಬ ಹೇಳಿಕೆ ನೀಡಿರುವುದರ ಹಿಂದೆ) ಯಾವುದೇ ದುರುದ್ದೇಶವಿಲ್ಲದಿರುವುದರಿಂದ ಕ್ಷಮೆ ಕೋರುವುದಿಲ್ಲ ಎಂದು ಕಮಲ್‌ ಹೇಳಿದ್ದಾರೆ.

ʼಥಗ್‌ ಲೈಫ್‌ʼ ಸಿನಿಮಾ ಹಂಚಿಕೆ ಮತ್ತು ಬಿಡುಗಡೆಗೆ ಅಗತ್ಯ ಬಂದೋಬಸ್ತ್‌ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಾಜ್‌ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ ನಾರಾಯಣ್‌ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice M Nagaprasanna
Justice M Nagaprasanna

ಇದಕ್ಕೂ ಮುನ್ನ, ಸುದೀರ್ಘ ವಿಚಾರಣೆ ನಡೆಸಿದ್ದ ಪೀಠವು ಕಮಲ್‌ ಹಾಸನ್‌ ಕನ್ನಡಿಗರ ಕ್ಷಮೆ ಕೋರುವ ಮೂಲಕ ವಿವಾದಕ್ಕೆ ಅಂತ್ಯ ಹಾಡಲು ಸಲಹೆ ನೀಡಿತ್ತು. ಈ ಸಂಬಂಧ ಸೂಚನೆ ಪಡೆದು, ವಾದಿಸುವುದಾಗಿ ಪೀಠಕ್ಕೆ ತಿಳಿಸಿದ್ದ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ ಅವರು ಮಧ್ಯಾಹ್ನದ ನಂತರದ ವಿಚಾರಣೆಯಲ್ಲಿ ಕೆಎಫ್‌ಸಿಸಿಗೆ ಕಮಲ್‌ ಹಾಸನ್‌ ಬರೆದಿರುವ ಪತ್ರವನ್ನು ಓದುವ ಮೂಲಕ ಸಮರ್ಥನೆಗೆ ಮುಂದಾದರು. “ಸದ್ಯಕ್ಕೆ ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಮಾಡದಿರಲು ಕಮಲ್‌ ಹಾಸನ್‌ ನಿರ್ಧರಿಸಿದ್ದಾರೆ. ಹೀಗಾಗಿ, ಪೊಲೀಸ್‌ ರಕ್ಷಣೆ ಕೋರುವುದಿಲ್ಲ, ಈ ನಡುವೆ, ಕೆಎಫ್‌ಸಿಸಿ ಜೊತೆ ಸಮಾಲೋಚನೆ ನಡೆಸಲು ಕಮಲ್‌ ನಿರ್ಧರಿಸಿದ್ದಾರೆ” ಎಂದರು. ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ಜೂನ್‌ ೧೦ಕ್ಕೆ ಮುಂದೂಡಿತು.

ಧ್ಯಾನ್‌ ಚಿನ್ನಪ್ಪ ಅವರು “ಕನ್ನಡ ನಾಡು ಮತ್ತು ಕರ್ನಾಟಕದ ಬಗ್ಗೆ ಪ್ರೀತಿ ಇದೆ ಎಂದು ಕಮಲ್‌ ಹೇಳಿದ್ದಾರೆ. ದುರುದ್ದೇಶವಿದ್ದರೆ ಮಾತ್ರ ಕ್ಷಮೆ ಕೋರಬೇಕು ಎಂದು ಕೆಎಫ್‌ಸಿಸಿಗೆ ಬರೆದಿರುವ ಪತ್ರದಲ್ಲಿ ಕಮಲ್‌ ಘೋಷಣೆ ಮಾಡಿದ್ದಾರೆ. ಸ್ಪಷ್ಟನೆ ನೀಡಿಲ್ಲ. ಕರ್ನಾಟಕದಲ್ಲಿ ಚಿತ್ರ ಬಿಡುಗಡೆಯನ್ನು ವಿಳಂಬಿಸಬಹುದು ಎಂದಿದ್ದಾರೆ. ಹೀಗಾಗಿ, ಸಿನಿಮಾ ಬಿಡುಗಡೆಗೆ ಪೊಲೀಸರ ರಕ್ಷಣೆಯ ವಿಚಾರ ಮುಂದು ಮಾಡುವುದಿಲ್ಲ ಎಂದಿದ್ದಾರೆ. ಕೆಎಫ್‌ಸಿಸಿ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದಿದ್ದಾರೆ” ಎಂದರು.

“ಅತ್ಯಂತ ಗೌರವಪೂರ್ವಕವಾಗಿ ಕಮಲ್ ಹಾಸನ್‌ ಹೇಳಿಕೆ ನೀಡಿದ್ದು, ಅದರಿಂದ ಹಿಂದೆ ಸರಿಯುವುದಿಲ್ಲ‌ ಎಂದಿದ್ದಾರೆ. ಸಮಾಲೋಚನೆ ನಡೆಸುವವರೆಗೆ ಸಿನಿಮಾ ಬಿಡುಗಡೆ ಮಾಡದಿರಲು ಕಮಲ್‌ ನಿರ್ಧರಿಸಿದ್ದಾರೆ” ಎಂದರು.

Also Read
ಕನ್ನಡ ಕುರಿತ ವಿವಾದಾಸ್ಪದ ಹೇಳಿಕೆ: 'ಕಮಲ್‌ ಹಾಸನ್‌ ಇತಿಹಾಸಕಾರರೇ? ಭಾಷಾ ತಜ್ಞರೇ?' ಹೈಕೋರ್ಟ್‌ ಕೆಂಡಾಮಂಡಲ

ಅದಕ್ಕೆ ಪೀಠವು “ಅಹಂ ಮುಂದೆ ಮಾಡಿದ್ದೀರಿ. ಅದು ಕಮಲ್‌ ಹಾಸನ್‌ ಅಥವಾ ಬೇರೆ ಯಾರೇ ಆಗಿರಬಹುದು. ಇದು ಜನರ ಭಾವನೆಗಳಿಗೆ ಹಾನಿ ಮಾಡುವ ವಿಚಾರವಾಗಿದೆ. ಕಮಲ್‌ ಹಾಸನ್‌ ಹೇಳಿಕೆಯಿಂದ ಇಷ್ಟೆಲ್ಲಾ ಆಗಿದ್ದು, ಇದೆಲ್ಲವನ್ನೂ ಅವರ ಹೇಳಿಕೆಯೇ ನಿಲ್ಲಿಸಬಹುದು. ಕೆಎಫ್‌ಸಿಸಿಗೆ ಬರೆದಿರುವ ಪತ್ರದಲ್ಲಿ ಕ್ಷಮೆ ವಿಚಾರ ಹೊರತುಪಡಿಸಿ ಉಳಿದೆಲ್ಲವೂ ಇದೆ” ಎಂದಿತು.

ಅಂತಿಮವಾಗಿ ಕೇಂದ್ರ, ರಾಜ್ಯ ಸರ್ಕಾರ ಮತ್ತು ವಾಣಿಜ್ಯೋದ್ಯಮ ಮಂಡಳಿಗೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿತು.

Kannada Bar & Bench
kannada.barandbench.com