ಕಾರ್ಮಿಕ ಸಚಿವ ಹೆಬ್ಬಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ನಟ ಚೇತನ್ ಪರಿಹಾರ ರೂಪದಲ್ಲಿ ಕೇಳಿರುವುದೇನು?

ತಮ್ಮ ವಿರುದ್ಧ ಮಾನಹಾನಿಕರ ಟ್ವೀಟ್‌ ಮಾಡಲಾಗಿದ್ದು, ಇದು ಆಧಾರರಹಿತ, ಆಘಾತಕಾರಿ ಹೇಳಿಕೆಗಳನ್ನು ಒಳಗೊಂಡಿದೆ. ಇದರಿಂದಾಗಿ ಸಮಾಜದಲ್ಲಿ ತಮ್ಮ ಪ್ರತಿಷ್ಠೆಗೆ ಅಪಾಯ ಒದಗಿದೆ ಎಂದು ಚೇತನ್‌ ಹೂಡಿರುವ ಮಾನನಷ್ಟ ಮೊಕದ್ದಮೆಯಲ್ಲಿ ತಿಳಿಸಲಾಗಿದೆ.
Chetan Kumar and Labour Minister Arbail Shivram Hebbar
Chetan Kumar and Labour Minister Arbail Shivram Hebbar

ಕಾರ್ಮಿಕ ಸಚಿವ ಅರೆಬೈಲ್‌ ಶಿವರಾಂ ಹೆಬ್ಬಾರ್‌ ಅವರ ವಿರುದ್ಧ ನಟ ಚೇತನ್‌ಕುಮಾರ್‌ ಮಾನನಷ್ಟ ಮೊಕದ್ದಮೆ ಹೂಡಿದ್ದು ಈ ಸಂಬಂಧ 1 ರೂಪಾಯಿ ಪರಿಹಾರ ಕೇಳಿದ್ದಾರೆ. ಪ್ರಕರಣದ ಸಂಬಂಧ ಜೂನ್ 24 ರಂದು ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ಪ್ರತಿವಾದಿ ಹೆಬ್ಬಾರ್‌ ಅವರಿಗೆ ನೋಟಿಸ್ ನೀಡಿದ್ದಾರೆ.

ನ್ಯಾಯವಾದಿ ಸಂಸ್ಥೆ ʼಮಂಜು ಅಂಡ್‌ ಮಂಜು ಅಸೋಸಿಯೇಟ್ಸ್‌ʼ ಮೂಲಕ ಚೇತನ್‌ ಸಲ್ಲಿಸಿರುವ ಮೊಕದ್ದಮೆ ಪ್ರಕಾರ ತಾನು ಜಾತಿ ವ್ಯವಸ್ಥೆ ಮತ್ತು ಬ್ರಾಹ್ಮಣ್ಯವನ್ನು ಟೀಕಿಸುವ ಟ್ವೀಟ್‌ಗಳನ್ನು ಮಾಡಿದ್ದೆ ಅದರಲ್ಲಿ ಅಂಬೇಡ್ಕರ್‌ ಮತ್ತು ಪೆರಿಯಾರ್‌ ಅವರನ್ನು ಕೂಡ ಉಲ್ಲೇಖಿಸಿದ್ದೆ ಎಂದು ತಿಳಿಸಿದ್ದಾರೆ.

ನಟ ಚೇತನ್‌ ಅವರು ಫೇಸ್‌ಬುಕ್‌, ಯೂಟ್ಯೂಬ್‌, ಇನ್‌ಸ್ಟಾಗ್ರಾಂನಲ್ಲಿ ಹೇಳಿಕೆ ನೀಡುವ ಮೂಲಕ ಒಟ್ಟಾರೆಯಾಗಿ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವ, ಅವರ ನಂಬಿಕೆಗಳನ್ನು ಅವಮಾನಿಸುವ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿ ಬಳಿಕ ವಿಪ್ರ ಯುವ ವೇದಿಕೆ ಅಧ್ಯಕ್ಷ ಪವನ್‌ ಕುಮಾರ್‌ ಶರ್ಮಾ ಅವರು ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಐಪಿಸಿ ಸೆಕ್ಷನ್ 153 ಬಿ ಮತ್ತು 295 ಎ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗೆ ಪೊಲೀಸರು ಚೇತನ್‌ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

Also Read
ನಟ ಸುಶಾಂತ್ ಸಿಂಗ್ ಸಾವಿನ ಸುತ್ತ ಹೆಣೆದ ಚಲನಚಿತ್ರ ಬಿಡುಗಡೆಗೆ ತಡೆ ನೀಡದ ದೆಹಲಿ ಹೈಕೋರ್ಟ್

ಘಟನೆಯ ಹಿನ್ನೆಲೆಯಲ್ಲಿ ಕಾರ್ಮಿಕ ಸಚಿವ ಹೆಬ್ಬಾರ್‌ ಅವರು ತನ್ನನ್ನು ಟೀಕಿಸುವ ಮತ್ತು ಖಂಡಿಸುವ ಪೋಸ್ಟ್‌ ಮಾಡಿದ್ದಾರೆ. ತಾನು ಆರ್ಥಿಕ ಲಾಭಕ್ಕಾಗಿ ಈ ಆರೋಪಗಳನ್ನು ಮಾಡಿದ್ದಾಗಿ ಆರೋಪಿಸಿದ್ದಾರೆ. ಈ ಮೂಲಕ ಅವರು ಚಲನಚಿತ್ರೋದ್ಯಮದಲ್ಲಿ ಮಾತ್ರವಲ್ಲದೆ ಸಾಮಾಜಿಕ ಕಾರ್ಯಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಮತ್ತು ತಮ್ಮ ಖ್ಯಾತಿಗೆ ಧಕ್ಕೆ ತಂದಿದ್ದಾರೆ ಎಂದು ಚೇತನ್‌ ಆರೋಪಿಸಿದ್ದಾರೆ.

"ಫಿರ್ಯಾದಿದಾರರ ವಿರುದ್ಧ 11.06.2021 ರಂದು ಮಾನಹಾನಿಕರ ಟ್ವೀಟ್‌ ಮಾಡಲಾಗಿದೆ, ಇದು ಆಧಾರರಹಿತ, ಆಘಾತಕಾರಿ ಹೇಳಿಕೆಗಳನ್ನು ಒಳಗೊಂಡಿದೆ. ಇದರಿಂದಾಗಿ ಸಮಾಜದಲ್ಲಿ ಫಿರ್ಯಾದಿಯ ಪ್ರತಿಷ್ಠೆಯನ್ನು ಗಂಭೀರ ಅಪಾಯಕ್ಕೆ ತಳ್ಳಿದಂತಾಗಿದೆ. ಈ ಟ್ವೀಟ್‌ನಲ್ಲಿ ಲವಲೇಶದಷ್ಟೂ ಸತ್ಯ ಇಲ್ಲ ಮತ್ತು ಸತ್ಯಾಸತ್ಯತೆ ಪರಿಶೀಲಿಸದೆ, ದುರುದ್ದೇಶಪೂರ್ವಕವಾಗಿ, ಕೇವಲ ಫಿರ್ಯಾದಿಯ ಮನಸ್ಸಿನ ಶಾಂತಿಗೆ ಭಂಗ ತರುವ ಉದ್ದೇಶದಿಂದ ಮತ್ತು ಅವರ ವರ್ಚಸ್ಸು, ಪ್ರಾಮಾಣಿಕತೆಯನ್ನು ಸಾರ್ವಜನಿಕವಾಗಿ ದೊಡ್ಡಪ್ರಮಾಣದಲ್ಲಿ ಕಳಂಕಗೊಳಿಸುವ ಉದ್ದೇಶದಿಂದ ಟ್ವೀಟ್ ಮಾಡಲಾಗಿದೆ "ಎಂದು ಸಚಿವ ಹೆಬ್ಬಾರ್‌ ಅವರು ಮಾಡಿರುವ ಟ್ವೀಟ್‌ ಬಗ್ಗೆ ತಿಳಿಸಲಾಗಿದೆ.

ಈ ನಿಟ್ಟಿನಲ್ಲಿ ಕೆಳಕಂಡ ಪರಿಹಾರವನ್ನು ನ್ಯಾಯಾಲಯದ ಮುಖೇನ ಚೇತನ್‌ ಅವರು ಕೋರಿದ್ದಾರೆ:

ಪ್ರತಿವಾದಿಯು ಫಿರ್ಯಾದಿಗೆ ರೂ 1 ಅಥವಾ ಅದಕ್ಕೆ ತಕ್ಕಂತೆ ನ್ಯಾಯಾಲಯ ಹೇಳುವ ಮೊತ್ತ ಪಾವತಿಸಲು ನಿರ್ದೇಶನ ನೀಡಬೇಕು.

11.6.2021ರಂದು ಮಾನಹಾನಿಕರ ಹೇಳಿಕೆ ಟ್ವೀಟ್‌ ಮಾಡಿದ್ದಕ್ಕಾಗಿ ತನ್ನ ಟ್ವಿಟರ್‌ ಖಾತೆಯಲ್ಲಿ ಸಂಪೂರ್ಣ ಹಾಗೂ ಬೇಷರತ್‌ ಕ್ಷಮೆಯಾಚನೆ ಹೇಳಿಕೆ ಪ್ರಕಟಿಸಲು ಪ್ರತಿವಾದಿಗೆ (ಹೆಬ್ಬಾರ್) ನಿರ್ದೇಶಿಸಬೇಕು.

ಫಿರ್ಯಾದಿ ಮತ್ತವರ ಕುಟುಂಬದ ವಿರುದ್ಧ ಪ್ರತಿವಾದಿ ಖುದ್ದಾಗಿ ಅಥವಾ ಹಿಂಬಾಲಕರು, ಏಜೆಂಟರ ಮೂಲಕ ಯಾವುದೇ ಪತ್ರಿಕಾಗೋಷ್ಠಿ ನಡೆಸುವ ಅಥವಾ ಪ್ರಕಟಿಸುವ ಮುದ್ರಿಸುವ, ಪ್ರಸಾರ ಮಾಡುವ ಯಾವುದೇ ಹೇಳಿಕೆ ಬಿಡುಗಡೆ ಮಾಡದಂತೆ ನಿರ್ಬಂಧ ವಿಧಿಸಬೇಕು.

Related Stories

No stories found.
Kannada Bar & Bench
kannada.barandbench.com