ಕನ್ನಡ ಕಡ್ಡಾಯಕ್ಕೆ ಎದುರಾಗಿರುವ ಆಕ್ಷೇಪಣೆಗಳು ಅಸಮರ್ಥನೀಯವೆಂದ ರಾಜ್ಯ ಸರ್ಕಾರ; ಇಲ್ಲಿದೆ ವಾದದ ಪ್ರಮುಖಾಂಶಗಳು

ಶಾಲಾ ಹಂತದಲ್ಲಿ ಕನ್ನಡವನ್ನು ಭಾಷಾ ವಿಷಯವನ್ನಾಗಿ ಕಲಿಯದ ವಿದ್ಯಾರ್ಥಿಗಳಿಗೆ ಒಂದು ಸೆಮಿಸ್ಟರ್‌ಗೆ ಸೀಮಿತಗೊಳಿಸಿ ಕಾರ್ಯನಿರ್ವಹಣೆಗೆ ಅಗತ್ಯವಾದ (ಫಂಕ್ಷನಲ್‌ ಕನ್ನಡ) ಕನ್ನಡ ಕಲಿಕೆ ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರ.
Kannada and Karnataka High Court
Kannada and Karnataka High Court

ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಪಠ್ಯದ ಭಾಗವಾಗಿ ನಿರ್ದಿಷ್ಟ ಭಾಷೆಯನ್ನು ಆಯ್ದುಕೊಳ್ಳಬೇಕು ಎಂದು ಹೇಳಲಾಗಿಲ್ಲ. ಹೀಗಾಗಿ, ಕನ್ನಡವನ್ನು ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ಆದೇಶವನ್ನು ವಜಾ ಮಾಡಬೇಕು ಎಂದು ಕೋರಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್‌ ಮತ್ತಿತರರು ಸಲ್ಲಿಸಿರುವ ಮನವಿಯು ಅಸಮರ್ಥನೀಯ ಮತ್ತು ವಜಾಕ್ಕೆ ಅರ್ಹವಾಗಿದೆ ಎಂದು ರಾಜ್ಯ ಸರ್ಕಾರವು ತನ್ನ ಆಕ್ಷೇಪಣೆಯಲ್ಲಿ ಬಲವಾಗಿ ಸಮರ್ಥಿಸಿಕೊಂಡಿದೆ.

ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್‌, ಮಹಾವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕ ಸಂಘ, ಶ್ರೀ ಹಯಗ್ರೀವಾ ಟ್ರಸ್ಟ್‌, ವ್ಯೋಮಾ ಲಿಂಗ್ವಿಸ್ಟಿಕ್‌ ಲ್ಯಾಬ್ಸ್‌ ಫೌಂಡೇಶನ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಮನವಿಯು ಮುಖ್ಯ ನ್ಯಾಯಮೂರ್ತಿ ರಿತು ರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠದಲ್ಲಿ ವಿಚಾರಣೆಗೆ ಒಳಪಟ್ಟಿದೆ. ಸದರಿ ಮನವಿಯು ನವೆಂಬರ್‌ 29ರಂದು ವಿಚಾರಣೆಗೆ ಬರಲಿದ್ದು, ಸರ್ಕಾರದ ಆದೇಶಕ್ಕೆ ತಡೆ ನೀಡಬೇಕೆ ಬೇಡವೇ ಎಂಬುದನ್ನು ಪೀಠ ನಿರ್ಧರಿಸಲಿದೆ.

ಈ ಮಧ್ಯೆ, ರಾಜ್ಯ ಸರ್ಕಾರವು ಕನ್ನಡ ಕಡ್ಡಾಯಗೊಳಿಸಿರುವುದಕ್ಕೆ ನೀಡಿರುವ ಕಾರಣಗಳನ್ನು ಆಕ್ಷೇಪಣೆಯಲ್ಲಿ ವಿವರಿಸಿದೆ. ಅವುಗಳು ಇಂತಿವೆ:

Also Read
[ಕನ್ನಡ ಕಡ್ಡಾಯ] ರಾತ್ರೋರಾತ್ರಿ ನಿರ್ಧಾರವಲ್ಲ, ಬಹುದಿನಗಳ ಬೇಡಿಕೆ: ಎ ಜಿ ಪ್ರಭುಲಿಂಗ ನಾವದಗಿ ಸಮರ್ಥನೆ
 • ಕನ್ನಡೇತರ ವಿದ್ಯಾರ್ಥಿಗಳನ್ನು ಪ್ರಾದೇಶಿಕವಾದ ಕನ್ನಡದ ಭಾಷೆ ಮತ್ತು ಸಂಸ್ಕೃತಿ ವ್ಯಾಪ್ತಿಯಲ್ಲಿ ವಿಲೀನಗೊಳಿಸುವ ಉದ್ದೇಶದಿಂದ ಎರಡು ಭಾಷಾ ವಿಷಯಗಳ ಪೈಕಿ ಒಂದು ಭಾಷೆಯನ್ನಾಗಿ ಕನ್ನಡ ಕಲಿಯಲು ಆದೇಶಿಸಲಾಗಿದೆ. ಇದು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಲ್ಲ. ಉನ್ನತ ಶಿಕ್ಷಣದಲ್ಲಿ ಕನ್ನಡ ಬೋಧನಾ ಮಾಧ್ಯಮವನ್ನಾಗಿಸಲಾಗಿಲ್ಲ.

 • ಶಾಲಾ ಹಂತದಲ್ಲಿ ಕನ್ನಡವನ್ನು ಭಾಷೆಯನ್ನಾಗಿ ಕಲಿತಿರುವ ವಿದ್ಯಾರ್ಥಿಗಳಿಗೆ ಪದವಿಯ ನಾಲ್ಕು ಸೆಮಿಸ್ಟರ್‌ಗಳಲ್ಲಿ ಕನ್ನಡ ಕಡ್ಡಾಯ ಮಾಡಲಾಗಿದೆ. ಉಳಿದಂತೆ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಇಚ್ಛೆಯಂತೆ ಮತ್ತೊಂದು ವಿಷಯವನ್ನು ಅಧ್ಯಯನ ಮಾಡಬಹುದಾಗಿದೆ. ಹೊರ ರಾಜ್ಯ, ಹೊರ ದೇಶ ಮತ್ತು ರಾಜ್ಯದಲ್ಲೇ ಇದ್ದೂ ಶಾಲಾ ಹಂತದಲ್ಲಿ ಕನ್ನಡವನ್ನು ಭಾಷಾ ವಿಷಯವನ್ನಾಗಿ ಕಲಿಯದ ವಿದ್ಯಾರ್ಥಿಗಳಿಗೆ ಒಂದು ಸೆಮಿಸ್ಟರ್‌ಗೆ ಸೀಮಿತಗೊಳಿಸಿ ಕಾರ್ಯನಿರ್ವಹಣೆಗೆ ಅಗತ್ಯವಾದ (ಫಂಕ್ಷನಲ್‌ ಕನ್ನಡ) ಕನ್ನಡ ಕಲಿಕೆ ಕಡ್ಡಾಯಗೊಳಿಸಲಾಗಿದೆ. ಈ ಮಕ್ಕಳಿಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ದಿನನಿತ್ಯದ ಸಂಹವನಕ್ಕೆ ಅಗತ್ಯವಾದ ಕನ್ನಡ ಕಲಿಕೆಗೆ ಪ್ರತ್ಯೇಕ ಪಠ್ಯ ರೂಪಿಸಲಾಗಿದೆ. ಇದು, ಈ ವಿದ್ಯಾರ್ಥಿಗಳನ್ನು ಕನ್ನಡದೊಂದಿಗೆ ವಿಲೀನಗೊಳಿಸಲು ಅನುಕೂಲವಾಗಲಿದ್ದು, ಜನ ಸಾಮಾನ್ಯರೊಂದಿಗೆ ಒಡನಾಡಲು ಇದರಿಂದ ಸಹಾಯಕವಾಗಲಿದೆ.

 • 1980ರಲ್ಲಿ ಕನ್ನಡದ ಪ್ರಾತಿನಿಧ್ಯ ಹೆಚ್ಚಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಸಾಹಿತಿ ಡಾ. ವಿ ಕೃ ಗೋಕಾಕ್‌ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. 1981ರ ಜನವರಿ 27ರಂದು 3ರಿಂದ 10ನೇ ತರಗತಿ ವರೆಗೆ ಕನ್ನಡ ಕಡ್ಡಾಯ ಸೇರಿದಂತೆ ಹಲವು ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು ವಿ ಕೃ ಗೋಕಾಕ್‌ ನೇತೃತ್ವದ ಸಮಿತಿಯು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ತನ್ನ ಶಿಫಾರಸ್ಸುಗಳ ಸಮರ್ಥನೆಗೆ ಹಲವು ಬಲವಾದ ಕಾರಣಗಳನ್ನು ಸಮಿತಿಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

 • ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕನ್ನಡ ಭಾಷಾ ಕಲಿಕಾ ಕಾಯಿದೆ 2015 ಅನ್ನು ಜಾರಿಗೆ ತಂದಿದ್ದು, 1 ರಿಂದ 10ನೇ ತರಗತಿವರೆಗೆ ಎಲ್ಲಾ ವಿದ್ಯಾರ್ಥಿಗಳು ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಯುವುದನ್ನು ಖಾತರಿಪಡಿಸಿದೆ. ಮೇಲಿನ ಸಲಹೆಗಳನ್ನು ಪರಿಗಣಿಸಿ, ಉದ್ದೇಶಗಳನ್ನು ಈಡೇರಿಸುವ ದೃಷ್ಟಿಯಿಂದ ಪದವಿ ಹಂತದಲ್ಲಿ ನಾಲ್ಕು ಸೆಮಿಸ್ಟರ್‌ಗಳಲ್ಲಿ ಎರಡು ಭಾಷೆಗಳನ್ನು ಕಲಿಯಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ, ಪರಿಗಣನೆಗೆ ಒಳಪಟ್ಟಿರುವ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ.

 • ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ತತ್ವ ಪಾಲನೆ ಮತ್ತು ವಿ ಕೃ ಗೋಕಾಕ್‌ ಸಮಿತಿಯ ಉದ್ದೇಶಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಪದವಿ ಹಂತದಲ್ಲಿ ಎರಡು ಭಾಷೆಗಳ ಪೈಕಿ ಕಾರ್ಯನಿರ್ವಹಣಾ ಭಾಷೆಯನ್ನು ಕಡ್ಡಾಯಗೊಳಿಸಲಾಗಿದೆ. ಪದವಿ ಹಂತದಲ್ಲಿರುವ ವಿದ್ಯಾರ್ಥಿಗಳು ಭಾಷೆಯ ಇತಿಹಾಸ ಮತ್ತು ಸಾಹಿತ್ಯಕ ಸಂಪ್ರದಾಯ ಅರ್ಥ ಮಾಡಿಕೊಳ್ಳಬಲ್ಲರು.

 • ಎನ್‌ಇಪಿ ನಿಬಂಧನೆಗಳು, ವಿ ಕೃ ಗೋಕಾಕ್‌ ಸಮಿತಿ ವರದಿ ಮತ್ತು ಪ್ರಾದೇಶಿಕ ಭಾಷೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದರ ಅಗತ್ಯ ಪರಿಗಣಿಸಿದ ಬಳಿಕ ಪದವಿ ಹಂತದಲ್ಲಿ ಎರಡು ಭಾಷೆಗಳ ಪೈಕಿ ಒಂದನ್ನು ಕನ್ನಡವನ್ನಾಗಿ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡುವುದು ಯಾವುದೇ ವಿದ್ಯಾರ್ಥಿಯ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿಲ್ಲ.

 • ಪ್ರಾದೇಶಿಕ ಭಾಷೆಯ ಅಭಿವೃದ್ಧಿಗೆ ಪೂರಕವಾದ ನೀತಿಯನ್ನು ಜಾರಿಗೊಳಿಸುವ ಹಕ್ಕನ್ನು ಕರ್ನಾಟಕ ಹೊಂದಿದೆ. ಹೀಗಾಗಿ, 10ನೇ ತರಗತಿಯವರೆಗೆ ಕನ್ನಡವನ್ನು ಭಾಷೆಯನ್ನಾಗಿ ಕಲಿಯದ, ಕರ್ನಾಟಕದ ಹೊರಗೆ ತಮ್ಮ ಶಾಲಾ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳು ಪದವಿ ಹಂತದಲ್ಲಿ ಎರಡು ಭಾಷೆಗಳ ಪೈಕಿ ಒಂದು ಸೆಮಿಸ್ಟರ್‌ಗೆ ಸೀಮಿತಗೊಂಡು ಕನ್ನಡ ಆಯ್ಕೆ ಮಾಡಿಕೊಳ್ಳಬೇಕಿದೆ. ಪ್ರಥಮ ವರ್ಷದ ಮೊದಲ ಸೆಮಿಸ್ಟರ್‌ನಲ್ಲಿ ಕಾರ್ಯನಿರ್ವಹಣೆಗೆ ಅಗತ್ಯವಾದ ಪಠ್ಯಕ್ರಮವನ್ನು ಮಾತ್ರ ನೀಡಲಾಗಿದೆ.

 • ಪ್ರಥಮ ಸೆಮಿಸ್ಟರ್‌ನಲ್ಲಿ ಕನ್ನಡ ಕಲಿಯುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಕೈಗೊಂಡಿರುವ ನೀತಿಯ ಭಾಗವಾದ ನಿರ್ಧಾರವು ಸಂವಿಧಾನದ 29 ಮತ್ತು 30ನೇ ವಿಧಿಗಳು ಮತ್ತು ಯಾವುದೇ ನಿಬಂಧನೆಗೆ ವಿರುದ್ಧವಾಗಿಲ್ಲ.

 • ಭಾಷೆಯ ಆಧಾರದಲ್ಲಿ ಭಾರತದ ರಾಜ್ಯಗಳ ರಚನೆಯಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಸಂಸ್ಕೃತಿ ಮತ್ತು ಭಾಷೆಯನ್ನು ಸಂರಕ್ಷಿಸುವ ಜವಾಬ್ದಾರಿ ರಾಜ್ಯಗಳ ಮೇಲಿದೆ. ಡಾ. ವಿ ಕೃ ಗೋಕಾಕ್‌ ಮತ್ತು ಡಾ. ಸರೋಜಿನಿ ಮಹಿಷಿ ಸಮಿತಿ ಸೇರಿದಂತೆ ಆಗಾಗ್ಗೆ ರಚಿಸಲಾಗಿರುವ ಹಲವು ತಜ್ಞರ ಸಮಿತಿಗಳ ಶಿಫಾರಸ್ಸುಗಳನ್ನು ಆಧರಿಸಿ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾದ ಕನ್ನಡವನ್ನು ಸಂರಕ್ಷಿಸಿ ಮತ್ತು ಪ್ರೋತ್ಸಾಹಿಸಲು ರಾಜ್ಯ ಸರ್ಕಾರವು ಹಲವು ಕ್ರಮಕೈಗೊಂಡಿದೆ.

 • ಮಾದರಿ ಕಾರ್ಯಕ್ರಮ ರಚನೆ, ಮಾದರಿ ಪಠ್ಯ ರಚನೆ ಮತ್ತು ಭಾಷೆಗಳ ಅಧ್ಯಯನ ವಿಚಾರವು ರಾಜ್ಯದ ಕಾರ್ಯಕಾರಿ ಅಧಿಕಾರಕ್ಕೆ ಒಳಪಟ್ಟಿದೆ. ಹೀಗಾಗಿ, ಸರ್ಕಾರದ ನಿರ್ಧಾರದಲ್ಲಿ ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿಲ್ಲ.

 • ಎರಡು ಭಾಷಾ ವಿಷಯಗಳ ಪೈಕಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸುವುದು ಯಾವುದೇ ವ್ಯಕ್ತಿಯ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದಿಲ್ಲ. ಸದ್ಯ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಬೋಧನಾ ವಿಷಯವನ್ನಾಗಿ ಕನ್ನಡ ಕಡ್ಡಾಯ ಮಾಡಲಾಗಿಲ್ಲ. ಬದಲಿಗೆ ಎರಡು ಭಾಷೆಗಳ ಪೈಕಿ ಒಂದು ಕನ್ನಡವಾಗಿರಬೇಕೆಂದು ಕಡ್ಡಾಯ ಮಾಡಲಾಗಿದೆ. ಕನ್ನಡೇತರರು, ಶಾಲಾ ಹಂತದಲ್ಲಿ ಕನ್ನಡ ಕಲಿಯದವರು, ಹೊರ ರಾಜ್ಯ/ದೇಶದವರಿಗೆ ಕಾರ್ಯನಿರ್ವಹಣಾ ಕನ್ನಡವನ್ನು ಒಂದು ಸೆಮಿಸ್ಟರ್‌ಗೆ (ಆರು ತಿಂಗಳು) ಬೋಧಿಸಲಾಗುತ್ತದೆ. ಹೀಗಾಗಿ, ಇದು ಸಂವಿಧಾನದ 19ನೇ ವಿಧಿಗೆ ವಿರುದ್ಧವಾಗಿಲ್ಲ.

 • ರಾಜ್ಯ ಸರ್ಕಾರದ ಆದೇಶದಿಂದ ಬಾಧಿತರಾದವರು ನ್ಯಾಯಾಲಯಕ್ಕೆ ಬಂದಿಲ್ಲ. ಅರ್ಜಿದಾರರು ಖಾಸಗಿ ಹಿತಾಸಕ್ತಿಗಳನ್ನು ಇಟ್ಟುಕೊಂಡು ನ್ಯಾಯಾಲಯದ ಕದ ತಟ್ಟಿದ್ದಾರೆ. ಹೀಗಾಗಿ, ಈ ಮನವಿಯನ್ನು ವಜಾ ಮಾಡಬೇಕು ಎಂದು ಸರ್ಕಾರ ಕೋರಿದೆ.

Kannada Bar & Bench
kannada.barandbench.com