

ಕಾಂತಾರ ಚಾಪ್ಟರ್-1 ಚಿತ್ರದ ದೈವಪಾತ್ರಗಳನ್ನು ಅಪಹಾಸ್ಯ ಮಾಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಕೃತ್ಯಕ್ಕೆ ಕ್ಷಮೆಯಾಚಿಸಿ ಬಾಲಿವುಡ್ ನಟ ರಣವೀರ್ ಸಿಂಗ್ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಯಾವುದೇ ರೀತಿಯ ಪ್ರಾಮಾಣಿಕ ಪಶ್ಚಾತ್ತಾಪ ವ್ಯಕ್ತಪಡಿಸಲಾಗಿಲ್ಲ ಎಂದು ದೂರುದಾರರ ಪರ ಶುಕ್ರವಾರ ವಕೀಲರು ಆಕ್ಷೇಪಿಸಿದರು.
ದೈವಗಳನ್ನು ಅಪಹಾಸ್ಯ ಮಾಡಿದ, ಚಾಮುಂಡಿ ದೈವವನ್ನು 'ಹೆಣ್ಣು ದೆವ್ವ' ಎಂದು ಕರೆದ ಆರೋಪ ಸಂಬಂಧ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ದಾಖಲಾಗಿರುವ ಖಾಸಗಿ ದೂರು ಹಾಗೂ ಹೈಗ್ರೌಂಡ್ಸ್ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ರಣವೀರ್ ಸಿಂಗ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ರಣವೀರ್ ಪರ ಹಿರಿಯ ವಕೀಲ ಸಜನ್ ಪೂವಯ್ಯ ಅವರು “ಅರ್ಜಿದಾರರ ಕ್ಷಮೆಯಾಚನೆಯ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಮೈಸೂರಿನಲ್ಲಿರುವ ಚಾಮುಂಡಿ ಬೆಟ್ಟಕ್ಕೂ ಭೇಟಿ ನೀಡುವುದಾಗಿ ಅರ್ಜಿದಾರರು ಪ್ರಮಾಣಪತ್ರದಲ್ಲಿ ಭರವಸೆ ನೀಡಿದ್ದಾರೆ” ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ದೂರುದಾರರ ಪರ ವಕೀಲ ಸಿಜಿ ಮಲಾಯಿಲ್ ಅವರು ಪ್ರಮಾಣಪತ್ರದ 3ನೇ ಪ್ಯಾರಾ ಗಮನಿಸಿದರೆ, ನೈಜ ಮನೋಭಾವದಿಂದ ಪ್ರಮಾಣಪತ್ರ ಸಲ್ಲಿಸಿಲ್ಲ. ಅದರಲ್ಲಿ ಯಾವುದೇ ಪ್ರಾಮಾಣಿಕ ಪಶ್ಚಾತ್ತಾಪವಿಲ್ಲ. ಅವರು ಏನು ಹೇಳಿದ್ದರೋ ಅದನ್ನು ಪ್ರಮಾಣಪತ್ರದಲ್ಲಿ ನಿರ್ದಿಷ್ಟವಾಗಿ ತಿಳಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಿಜಿ ಮಲಾಯಿಲ್ ಆಕ್ಷೇಪಿಸಿದ ಸಾಲುಗಳನ್ನು ಓದಿದ ಸಜನ್ ಪೂವಯ್ಯ "ಘಟನೆ ನಡೆದ ದಿನದಂದು ನಾನು ದೈವದ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದೇನೆ ಎನ್ನುವುದು ನನಗೆ ಅರಿವಾಗಿರಲಿಲ್ಲ. ನಾನು ಮುಂಬೈನ ಸಿಂಧಿ ಕುಟುಂಬದಲ್ಲಿ ಬೆಳೆದವನು ಮತ್ತು ಈ ಸೂಕ್ಷ್ಮತೆಗಳ ಬಗ್ಗೆ ನನಗೆ ತಿಳಿದಿರಲಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಆದ್ದರಿಂದ, ಈ ಪ್ರಮಾಣಪತ್ರದ ಮೂಲಕ ನಾನು ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ ಮತ್ತು ಘಟನೆಗಾಗಿ ನನ್ನ ಪ್ರಾಮಾಣಿಕ ಬೇಷರತ್ ಕ್ಷಮೆಯಾಚಿಸುತ್ತೇನೆ. ಮುಂದಿನ ದಿನಗಳಲ್ಲಿ ಮೈಸೂರಿನ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತೇನೆ ಮತ್ತು ನನ್ನ ಭಕ್ತಿಯನ್ನು ವ್ಯಕ್ತಪಡಿಸುತ್ತೇನೆ. ವಿಷಯ ತಿಳಿದ ತಕ್ಷಣ ನಾನು ಬಹಿರಂಗವಾಗಿ ಬೇಷರತ್ ಕ್ಷಮೆಯಾಚಿಸಿದ್ದೇನೆ" ಎಂದು ರಣವೀರ್ ಸಿಂಗ್ ಪ್ರಮಾಣಪತ್ರದಲ್ಲಿರುವ ಅಂಶಗಳನ್ನು ಪೀಠಕ್ಕೆ ವಿವರಿಸಿದರು.
ಇದನ್ನೊಪ್ಪದ ಮಲಾಯಿಲ್ ಅವರು “ಅರ್ಜಿದಾರರ ಕ್ಷಮಾಪಣಾ ಪ್ರಮಾಣಪತ್ರ ನೋಡಿದರೆ ನಾವೇ ತಪ್ಪಾಗಿ ದೂರು ನೀಡಿರುವಂತಿದೆ. ಘಟನಾ ಸ್ಥಳದಲ್ಲಿದ್ದ ನಟ ರಿಷಬ್ ಶೆಟ್ಟಿ ಅವರು ಆ ರೀತಿ ಮಾಡದಂತೆ ಸ್ಪಷ್ಟವಾಗಿ ಹೇಳಿದ್ದಾರೆ. ಅರ್ಜಿದಾರರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಪ್ರಾಮಾಣಿಕವಾಗಿ ಪಶ್ಚಾತಾಪ ವ್ಯಕ್ತಪಡಿಸಲಾಗಿಲ್ಲ. ಆದ್ದರಿಂದ, ಸರಿಯಾದ ರೀತಿಯಲ್ಲಿ ಅಫಿಡವಿಟ್ ಸಲ್ಲಿಸಲಿ. ಅದರಲ್ಲಿ ಅವರು ಹೇಳಬೇಕಿರುವುದನ್ನು ನಿರ್ದಿಷ್ಟ ಪದಗಳಲ್ಲಿ ಹೇಳಲಿ” ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೂವಯ್ಯ ಅವರು “ದೂರುದಾರರಿಗೆ ತೃಪ್ತಿಯಾಗುವಂತಹ ಪ್ರಮಾಣಪತ್ರದ ಭಾಷೆಯ ಬಗ್ಗೆ ಅವರೊಂದಿಗೆ ಕುಳಿತು ಚರ್ಚಿಸಿ, ಸಿದ್ಧಪಡಿಸಲಾಗುವುದು. ಬಳಿಕ ಅದನ್ನು ನ್ಯಾಯಾಲಯದ ಮುಂದೆ ಮಂಡಿಸಲಾಗುವುದು. ಪ್ರಮಾಣಪತ್ರದ ಕರಡು ಪ್ರತಿಯನ್ನು ದೂರುದಾರರಿಗೂ ಒದಗಿಸಲಾಗುವುದು “ಎಂದು ತಿಳಿಸಿದರು.
ಇದನ್ನು ಆಲಿಸಿದ ಪೀಠವು ದೂರುದಾರರ ತೃಪ್ತಿಗೆ ಅನುಗುಣವಾಗಿ ಪ್ರಮಾಣಪತ್ರ ಸಲ್ಲಿಸುವಂತೆ ಮೌಖಿಕವಾಗಿ ಸೂಚಿಸಿ, ವಿಚಾರಣೆಯನ್ನು ಏಪ್ರಿಲ್ 23ಕ್ಕೆ ಮುಂದೂಡಿತು.