

ಕಾಂತಾರ ಚಾಪ್ಟರ್-1 ಚಿತ್ರದ ದೈವಪಾತ್ರದ ಬಗ್ಗೆ ಅಪಮಾನಕಾರಿಯಾಗಿ ಮಾತನಾಡಿದ ಆರೋಪಕ್ಕೆ ಗುರಿಯಾಗಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಪರ ಹಿರಿಯ ವಕೀಲ ಸಜನ್ ಪೂವಯ್ಯ ಅವರು ಕ್ಷಮೆಯಾಚಿಸಿ ಅಫಿಡವಿಟ್ ಸಲ್ಲಿಸಲಾಗುವುದು ಮತ್ತು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಾಗುವುದು ಎಂದು ಮಂಗಳವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದರು.
ಗೋವಾದಲ್ಲಿ ಈಚೆಗೆ ನಡೆದಿದ್ದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ಕಾಂತಾರ ಚಾಪ್ಟರ್-1 ಚಿತ್ರದ ಚಾಮುಂಡಿ ದೈವಕ್ಕೆ ಅಪಮಾನ ಮಾಡಿದ ಆರೋಪದ ಸಂಬಂಧ ದಾಖಲಾಗಿರುವ ಖಾಸಗಿ ದೂರು ಮತ್ತು ಅದರ ಮುಂದುವರಿದ ಭಾಗವಾಗಿ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ರಣವೀರ್ ಸಿಂಗ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ದೂರುದಾರರ ಪರ ವಕೀಲ ಸಿಜಿ ಮಲೆಯಾಳಿ ಅವರು “ರಣವೀರ್ ಸಿಂಗ್ ಎಕ್ಸ್‌ನಲ್ಲಿ ಟ್ವೀಟ್ ಮಾಡಿ ಕ್ಷಮೆ ಕೇಳಿದ್ದಾರೆ. ಆದರೆ, ಅದರಲ್ಲಿ ಪ್ರಾಮಾಣಿಕತೆ ಕಾಣುವುದಿಲ್ಲ. ಹೃದಯಪೂರ್ವಕವಾಗಿ ಅವರು ಕ್ಷಮೆಯಾಚಿಸಿಲ್ಲ. ಅವರ ಮ್ಯಾನೇಜರ್‌ಗಳು ಟ್ವೀಟ್ ಮಾಡಿದ್ದಾರೆ. ಚಾಮುಂಡಿ ದೈವವನ್ನು ʼಮಹಿಳಾ ದೆವ್ವʼ ಎಂದಿದ್ದಾರೆ. ಮೌಖಿಕವಾಗಿ ದೈವಕ್ಕೆ ಅಪಮಾನ ಮಾಡಿರುವುದರಿಂದ ಅವರು ಮೌಖಿಕವಾಗಿ ಕ್ಷಮೆ ಕೋರಬೇಕು. ಚಾಮುಂಡಿ ಬೆಟ್ಟಕ್ಕೆ ಸಜನ್ ಪೂವಯ್ಯ ಅವರ ಜೊತೆ ಹೋಗಿ ರಣವೀರ್ ಅಲ್ಲಿಯೇ ಕ್ಷಮೆ ಕೋರಲಿ” ಎಂದರು.
ಅಲ್ಲದೇ, “ಚಾಮುಂಡಿ ನಮಗೆ ನ್ಯಾಯ ಕೊಡಿಸುವ ದೇವತೆ. ನಾಗದೇವ (ನ್ಯಾ. ನಾಗಪ್ರಸನ್ನ ಅವರನ್ನು ಉಲ್ಲೇಖಿಸಿ) ರಣವೀರ್‌ಗೆ ರಕ್ಷಣೆ ನೀಡಿದ್ದಾರೆ” ಎಂದು ಲಘು ದಾಟಿಯಲ್ಲಿ ಹೇಳಿದರು.
ಆಗ ಪೀಠವು “ಕ್ಷಮೆ ಕೋರಿ ಅಫಿಡವಿಟ್ ಸಲ್ಲಿಸುತ್ತೇವೆ ಎಂದು ರಣವೀರ್ ಹೇಳುತ್ತಿದ್ದಾರೆ. ಇನ್ನೇನು ಬೇಕು? ರಣವೀರ್ ಮಾಡಿರುವುದು ಸರಿಯಲ್ಲ. ಅದನ್ನು ಬೆಂಬಲಿಸುವುದಿಲ್ಲ. ನ್ಯಾಯಾಲಯಕ್ಕೆ ಬಂದು ಕ್ಷಮೆ ಕೋರಬೇಕು ಎಂದು ನೀವು (ದೂರುದಾರರು) ಬಯಸುತ್ತಿದ್ದೀರಾ? ಪ್ರಮಾದವಾಗಿದೆ. ರಣವೀರ್ ದೇವಾಲಯಕ್ಕೆ ಭೇಟಿ ನೀಡಬೇಕು. ಪಶ್ಚಾತಾಪ ವ್ಯಕ್ತಪಡಿಸುವ ಮನಸ್ಸಿರಬೇಕು. ನಟರು ಪ್ರಭಾವ ಬೀರುವ ಹೆಚ್ಚು ಶಕ್ತಿಯನ್ನು ಹೊಂದಿರುತ್ತಾರೆ” ಎಂದರು.
ರಣವೀರ್ ಪರ ಹಿರಿಯ ವಕೀಲ ಸಜನ್ ಪೂವಯ್ಯ ಅವರು “ಕ್ಷಮೆ ಕೋರಿ ರಣವೀರ್ ಅಫಿಡವಿಟ್ ಸಲ್ಲಿಸಲಿದ್ದಾರೆ. ಹಾಗೆಯೇ ದೇವಸ್ಥಾನಕ್ಕೂ ಭೇಟಿ ನೀಡುತ್ತಾರೆ. ದಿನಾಂಕವನ್ನು ನಿಗದಿಪಡಿಸಲಾಗುವುದು” ಎಂದರು. ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ಏಪ್ರಿಲ್ 10ಕ್ಕೆ ಮುಂದೂಡಿತು.