Supreme Court, Kanwar Yatra
Supreme Court, Kanwar Yatra

[ಕಾಂವಡ್ ಯಾತ್ರೆ] ಹೋಟೆಲ್‌ಗಳು ಈ ಹಿಂದೆ ಮಾಂಸಾಹಾರ ನೀಡುತ್ತಿದ್ದವೇ ಎಂದು ಅರಿಯುವ ಹಕ್ಕು ಗ್ರಾಹಕರಿಗೆ ಇದೆ: ಸುಪ್ರೀಂ

ಮಾಂಸಾಹಾರ ನೀಡುತ್ತಿದ್ದ ಹೋಟೆಲ್ ಯಾತ್ರೆಯ ಸಲುವಾಗಿ ಸಸ್ಯಾಹಾರ ನೀಡಲಾರಂಭಿಸಿದ್ದರೆ ಅದನ್ನು ಗ್ರಾಹಕರು ತಿಳಿದುಕೊಳ್ಳಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
Published on

ಈ ಮೊದಲು ಮಾಂಸಾಹಾರ ನೀಡಲಾಗುತ್ತಿತ್ತೇ ಎಂಬುದೂ ಸೇರಿದಂತೆ ಕಾಂವಡ್‌ ಯಾತ್ರೆಯ ಮಾರ್ಗದಲ್ಲಿರುವ ಹೋಟೆಲ್‌ಗಳಲ್ಲಿ ಬಡಿಸುವ ಆಹಾರದಲ್ಲಿ ಬಳಸುವ ಪದಾರ್ಥ ಮತ್ತು ತಯಾರಿಕೆಯ ವಿಧಾನ ತಿಳಿಯುವ ಹಕ್ಕು ಗ್ರಾಹಕರಿಗೆ ಇದೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ [ಅಪೂರ್ವಾನಂದ್ ಝಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಹೋಟೆಲ್‌ಗಳ ಮಾಲೀಕರು ತಮ್ಮ ಹೆಸರು ಮತ್ತು ವಿವರಗಳನ್ನು ಕ್ಯೂಆರ್‌ ಕೋಡ್‌ಗಳ ಮೂಲಕ ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ನೀಡಿರುವ ನಿರ್ದೇಶನ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್‌ ಮತ್ತು ಎನ್‌ ಕೆ ಸಿಂಗ್ ಅವರಿದ್ದ ಪೀಠ ವಿಚಾರಣೆ ನಡೆಸಿತು.

Also Read
ಕಾಂವಡ್ ಯಾತ್ರೆ ಹೋಟೆಲ್ ಮಾಲೀಕರ ವಿವರ ಡಿಜಿಟಲ್‌ ರೂಪದಲ್ಲಿ: ಉ.ಪ್ರದೇಶ ಸರ್ಕಾರದ ಆದೇಶ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

ಅಂಗಡಿ ಮಾಲೀಕರ ಧಾರ್ಮಿಕ ಅಸ್ಮಿತೆಯನ್ನು ಬಹಿರಂಗಪಡಿಸುವ ಮತ್ತು ಮುಸ್ಲಿಂ ಹೋಟೆಲ್‌ ಮಾಲೀಕರ ವಿರುದ್ಧ ತಾರತಮ್ಯಕ್ಕೆ ಎಡೆ ಮಾಡಿಕೊಡುವ ಉದ್ದೇಶವನ್ನು ಸರ್ಕಾರದ ಈ ಕ್ರಮ ಹೊಂದಿದೆ ಎಂದು ಕಳವಳ ವ್ಯಕ್ತಪಡಿಸಿ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಕಳೆದ ವರ್ಷ ತಡೆ ನೀಡಿತ್ತು. ಆದರೂ ಕ್ಯೂಆರ್‌ ಕೋಡ್‌ ಮೂಲಕ ಹೋಟೆಲ್‌ ವಿವರ ಪ್ರದರ್ಶಿಸಬೇಕು ಎಂದು ಸರ್ಕಾರ ನೀಡಿರುವ ನಿರ್ದೇಶನ ಸುಪ್ರೀಂ ಕೋರ್ಟ್‌ಈ ಹಿಂದೆ ಹೊರಡಿಸಿದ್ದ ತಡೆಯಾಜ್ಞೆಯನ್ನು ಉಲ್ಲಂಘಿಸಲು ಕೈಗೊಂಡ ಕ್ರಮ ಎಂದು ದೂರಲಾಗಿತ್ತು.

ಇಂದು ಕಾಂವಡ್‌ ಯಾತ್ರೆಯ ಕೊನೆಯ ದಿನವಾಗಿರುವುದರಿಂದ, ನ್ಯಾಯಾಲಯ ಪ್ರಕರಣದ ಬಗ್ಗೆ ವಿವರವಾಗಿ ಚರ್ಚಿಸಲು ನಿರಾಕರಿಸಿತು.

"ಇಂದು ಯಾತ್ರೆಯ ಕೊನೆಯ ದಿನ ಎಂದು ತಿಳಿದುಬಂದಿದೆ. ಹೇಗಿದ್ದರೂ, ಅದು ಕೊನೆಗೊಳ್ಳುವ ಸಾಧ್ಯತೆಯಿದೆ. ಈ ಹಂತದಲ್ಲಿ, ಎಲ್ಲಾ ಹೋಟೆಲ್ ಮಾಲೀಕರು ಶಾಸನಬದ್ಧವಾಗಿ ಅಗತ್ಯವಿರುವಂತೆ ಪರವಾನಗಿ ಮತ್ತು ನೋಂದಣಿ ಪ್ರಮಾಣಪತ್ರವನ್ನು ಪ್ರದರ್ಶಿಸುವ ಆದೇಶ ಪಾಲಿಸಬೇಕು ಎಂದು ಹೇಳುತ್ತೇವೆ. ವಾದಿಸಲಾದ ಉಳಿದ ವಿಷಯಗಳ ಬಗ್ಗೆ ಚರ್ಚಿಸುವುದಿಲ್ಲ" ಎಂದು ವಿವರಿಸಿತು.

ವಿಚಾರಣೆಯ ಸಮಯದಲ್ಲಿ ಸರ್ಕಾರದ ಉದ್ದೇಶಗಳು ಮತ್ತು ಗ್ರಾಹಕರ ಹಕ್ಕುಗಳ ಕುರಿತು ಚರ್ಚೆ ನಡೆಯಿತು. ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಸರ್ಕಾರದ ಇತ್ತೀಚಿನ ನಿರ್ದೇಶನವನ್ನು ಪ್ರಶ್ನಿಸಿದರು.

"ಅಲ್ಪಸಂಖ್ಯಾತ ಸಮುದಾಯದ ಒಡೆತನದ ಸಂಸ್ಥೆಗಳನ್ನು ಸುತ್ತೋಲೆ ಬಹಿಷ್ಕರಿಸುತ್ತದೆ. ಅಲ್ಪಸಂಖ್ಯಾತ ಸಮುದಾಯದ ಮಾಲೀಕರ ಹೋಟೆಲ್‌ಗಳು ಸಸ್ಯಾಹಾರನ್ನಷ್ಟೇ ಮಾರಾಟ ಮಾಡುತ್ತಿವೆ. ನನ್ನ ಕಕ್ಷಿದಾರರನ್ನು ಮೆನು ಕಾರ್ಡ್‌ನಿಂದ ಬಹಿಷ್ಕರಿಸಬಹುದಾದರೂ ಅವರ ಉಪನಾಮವನ್ನು ಬಹಿಷ್ಕರಿಸಲು ಸಾಧ್ಯವಿಲ್ಲ. ಆ ಆದೇಶವನ್ನು ಉಲ್ಲಂಘಿಸುವ ಬದಲು ಮಾರ್ಪಡಿಸಲು ಅನುಮತಿ ದೊರೆಯಬೇಕಿತ್ತು" ಎಂದರು. 

ಸರ್ಕಾರದ ಈ ಕ್ರಮ ಸಮಾಜದಲ್ಲಿ ವಿಭಜನೆ ಸೃಷ್ಟಿಸುವ ಉದ್ದೇಶದಿಂದ ಕೂಡಿದೆ ಎಂದು ಅವರು ಹೇಳಿದರು.

ವಿಚಾರಣೆಯ ಒಂದು ಹಂತದಲ್ಲಿ ಹೋಟೆಲ್‌ ಮಾಲೀಕರು ಸದಾ ಸಸ್ಯಾಹಾರಿ ತಿನಿಸುಗಳನ್ನು ನೀಡುತ್ತವೆಯೇ ಎಂದು ನ್ಯಾಯಾಲಯ ಕೇಳಿತು. ಆಗ, ಯಾತ್ರೆಯ ಅವಧಿಯಲ್ಲಿ ಸಸ್ಯಾಹಾರ ನೀಡಲಾಗುತ್ತದೆ ಎಂದು ಸಿಂಘ್ವಿ ಹೇಳಿದರು. ನಂತರ ನ್ಯಾಯಾಲಯ ಗ್ರಾಹಕರಿಗೆ ಹೋಟೆಲ್‌ಗಳ ವಿವರ ತಿಳಿಯುವ ಹಕ್ಕು ಇದೆ ಎಂದು ಪ್ರತಿಕ್ರಿಯಿಸಿತು.  

Also Read
ಕಾಂವಡ್ ಯಾತ್ರೆ ಮಾರ್ಗದಲ್ಲಿ ಅಂಗಡಿ ಮಾಲೀಕರ ಹೆಸರು ಪ್ರದರ್ಶಿಸಬೇಕೆಂಬ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ

ತಾನು ನಾಸ್ತಿಕ ಎಂದ ನ್ಯಾಯಮೂರ್ತಿ ಸುಂದರೇಶ್‌ ಅವರು ಯಾತ್ರೆಯ ಅವಧಿಯಲ್ಲಷ್ಟೇ ಹೋಟೆಲ್‌ಗಳು ಸಸ್ಯಾಹಾರ ಒದಗಿಸಿದರೆ ಸಮಸ್ಯೆ ಉಂಟಾಗಬಹುದು ಎಂದು ಹೇಳಿದರು. ಈ ಹೋಟೆಲ್‌ಗಳು ಯಾತ್ರೆಗೂ ಮುನ್ನ ಮಾಂಸಾಹಾರ ಒದಗಿಸುತ್ತಿದ್ದವೇ ಎಂಬುದನ್ನು ತಿಳಿಯುವ ಮಾರ್ಗ ಗ್ರಾಹಕರಿಗೆ ದೊರೆಯಬೇಕು ಎಂದರು.

ಸರ್ಕಾರದ ಪರವಾಗಿ ಹಿರಿಯ ವಕೀಲ ಮುಕುಲ್‌ ರೋಹಟಗಿ ವಾದ ಮಂಡಿಸಿದರು. ನಂತರ ನ್ಯಾಯಾಲಯ ಪರವಾನಗಿ ಮತ್ತು ನೋಂದಣಿ ಪ್ರಮಾಣಪತ್ರಗಳನ್ನು ಹೋಟೆಲ್‌ಗಳು ಪ್ರದರ್ಶಿಸಬೇಕು ಎಂದು ನಿರ್ದೇಶಿಸಿ ಅರ್ಜಿ ವಿಲೇವಾರಿ ಮಾಡಿತು.  

Kannada Bar & Bench
kannada.barandbench.com