ಕರಗ ಉತ್ಸವ ಸಮಿತಿ ಅಧ್ಯಕ್ಷರಿಂದ ಹಣ ದುರ್ಬಳಕೆ: ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದ ನ್ಯಾಯಾಲಯ

ಅರ್ಜಿದಾರರು ₹15.5 ಲಕ್ಷ ದುರ್ಬಳಕೆ ಮಾಡಿಕೊಂಡಿರುವ ಆರೋಪ ಎದುರಿಸುತ್ತಿದ್ದು ಧಾರ್ಮಿಕ ದತ್ತಿ ಇಲಾಖೆಯ ಖಾತೆಯಿಂದ ₹25.5 ಲಕ್ಷಗಳನ್ನು ಇತರರ ಖಾತೆಗೆ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
Bengaluru Karaga procession
Bengaluru Karaga processionDeccan Herald

ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡ ಆರೋಪ ಎದುರಿಸುತ್ತಿರುವ ಬೆಂಗಳೂರು ಕರಗ ಉತ್ಸವ ಸಮಿತಿ ಅಧ್ಯಕ್ಷ ಮತ್ತು ಧರ್ಮರಾಯಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ವೆಂಕಟರಮಣ ಗುರು ಪ್ರಸಾದ್‌ ಕೆ ವಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಈಚೆಗೆ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ನಿರಾಕರಿಸಿದೆ.

ಬೆಂಗಳೂರಿನ ವೆಂಕಟರಮಣ ಗುರು ಪ್ರಸಾದ್‌ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಮನವಿ ವಿಚಾರಣೆ ನಡೆಸಿದ 59ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಸದಾನಂದ ಆರ್‌. ನಾಯ್ಕ್‌ ಅವರು ವಜಾ ಮಾಡಿದ್ದಾರೆ.

“ಅರ್ಜಿದಾರರು ₹15.5 ಲಕ್ಷ ದುರ್ಬಳಕೆ ಮಾಡಿಕೊಂಡಿರುವ ಆರೋಪ ಎದುರಿಸುತ್ತಿದ್ದು, ಸರ್ಕಾರಿ ಸೇವೆಯಲ್ಲಿದ್ದುಕೊಂಡು ₹25.5 ಲಕ್ಷಗಳನ್ನು ಇತರರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಇದಲ್ಲದೇ, ಗೌರಿಬಿದನೂರು ಠಾಣೆಯಲ್ಲಿ ಅರ್ಜಿದಾರರ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಹೀಗಾಗಿ, ಪ್ರಕರಣವು ತನಿಖೆಯ ಹಂತದಲ್ಲಿರುವುದರಿಂದ ಅರ್ಜಿದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ. ಒಂದು ವೇಳೆ, ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಅವರು ಸಾಕ್ಷಿಗಳನ್ನು ಬೆದರಿಸುವ ಸಾಧ್ಯತೆ ಇದ್ದು, ತನಿಖೆ ಮತ್ತು ವಿಚಾರಣೆಗೆ ಸಹಕರಿಸದೆ ಹೋಗಬಹುದು. ಅಲ್ಲದೇ, ಜಾಮೀನು ನೀಡಬಹುದಾದ ಯಾವುದೇ ಆಧಾರಗಳನ್ನು ಅರ್ಜಿದಾರರು ನೀಡಿಲ್ಲ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು, ಜಿಲ್ಲಾ ದಂಡಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ, ದೇವಸ್ಥಾನದ ಕಾರ್ಯಕಾರಿ ಅಧಿಕಾರಿಗಳು ಮತ್ತು ಕರಗ ಉತ್ಸವ ಸಮಿತಿಯ ಸದಸ್ಯರಿಗೆ ಮಾಹಿತಿ ತಿಳಿಸದೇ ₹25.5 ಲಕ್ಷಗಳನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಖಾತೆಯಿಂದ ಅರ್ಜಿದಾರರು ತೆಗೆದುಕೊಂಡಿದ್ದಾರೆ. ಆದರೆ, ಏತಕ್ಕಾಗಿ ಹಣ ವೆಚ್ಚ ಮಾಡಲಾಗಿದೆ ಎಂಬ ವಿವರ ನೀಡಿಲ್ಲ ಎನ್ನುವುದು ಸರ್ಕಾರಿ ವಕೀಲರ ವಾದವಾಗಿತ್ತು. ಅಲ್ಲದೆ, ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ತನಿಖೆಗೆ ಸಹಕರಿಸದೆ ತಲೆತಪ್ಪಿಸಿಕೊಳ್ಳಬಹುದು ಎಂದು ಆಕ್ಷೇಪಿಸಲಾಗಿತ್ತು.

ಅರ್ಜಿದಾರರು ಅಕ್ರಮವಾಗಿ ಇತರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಅರ್ಜಿದಾರರು ಸರ್ಕಾರದ ₹15.5 ಲಕ್ಷವನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ. ಇದನ್ನು ಸರ್ಕಾರದ ಖಾತೆಗೆ ಜಮೆ ಮಾಡಲಾಗಿಲ್ಲ. ಅಲ್ಲದೇ, ಅರ್ಜಿದಾರರ ವಿರುದ್ಧ ಗೌರಿಬಿದನೂರು ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ಸರ್ಕಾರಿ ಅಭಿಯೋಜಕರು ಆಕ್ಷೇಪಿಸಿದರು.

Also Read
ಕರಗ ಮಹೋತ್ಸಕ್ಕೆ ಹೈಕೋರ್ಟ್ ಅನುಮತಿ; ಬೆಂಗಳೂರಿನಲ್ಲಿ ಮೆರವಣಿಗೆ ನಿಷೇಧಿಸಿದ್ದ ಹೈಕೋರ್ಟ್ ಆದೇಶದಲ್ಲಿ ಮಾರ್ಪಾಡು

ಅರ್ಜಿದಾರರ ಪರ ವಕೀಲ ಜಯತೀರ್ಥ ಅವರು ಕರಗ ಉತ್ಸವ ಸಮಿತಿಯ ಅಧ್ಯಕ್ಷ ಮತ್ತು ದೇವಸ್ಥಾನದ ಆಡಳಿತಾಧಿಕಾರಿಯಾಗಿ ಅರ್ಜಿದಾರರು ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. 2021ರ ಏಪ್ರಿಲ್‌ 19ರಿಂದ ಏಪ್ರಿಲ್‌ 24ರಿಂದ 29ರ ವರೆಗೆ ನಡೆದ ಧರ್ಮರಾಯಸ್ವಾಮಿ ದೇವಸ್ಥಾನದ ಕರಗ ಉತ್ಸವಕ್ಕಾಗಿ ಹಣ ಪಡೆದುಕೊಳ್ಳಲಾಗಿದೆ. ಯಾವುದೇ ಅಕ್ರಮ ನಡೆದಿಲ್ಲ ಎಂದಿದ್ದರು.

ಎಲ್ಲಾ ಬಾಕಿಗಳನ್ನು ಪಾವತಿಸಿ ಉಳಿದ ₹10 ಲಕ್ಷವನ್ನು 2022ರ ಜನವರಿ 7ರಂದು ಇಲಾಖೆಯ ಖಾತೆಗೆ ಜಮೆ ಮಾಡಲಾಗಿದೆ. ಅರ್ಜಿದಾರರು ದೇವಸ್ಥಾನಕ್ಕೆ ಸೇರಬೇಕಾದ ಹಣವನ್ನು ದುರ್ಬಳಕೆ ಮಾಡಿಕೊಂಡಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಅರ್ಜಿದಾರರು ನೇರ ಅಥವಾ ಪರೋಕ್ಷವಾಗಿ ಅಪರಾಧದಲ್ಲಿ ಭಾಗಿಯಾಗದೇ ಇದ್ದರೂ ಅವರನ್ನು ಸಿಲುಕಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.

Attachment
PDF
Venkataramana Guru Prasad K V V. State of Karnataka.pdf
Preview

Related Stories

No stories found.
Kannada Bar & Bench
kannada.barandbench.com