ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸಂದೇಶ್ ಅವರು ಭ್ರಷ್ಟಾಚಾರ ಪ್ರಕರಣವೊಂದರ ವಿಚಾರಣೆ ವೇಳೆ ಸಂಸ್ಥೆಯ ಹಾಗೂ ಎಡಿಜಿಪಿಯವರ ವಿರುದ್ಧ ಮಾಡಿರುವ ಟೀಕೆಗಳನ್ನು ಆಕ್ಷೇಪಿಸಿ ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೋಹ್ಲಿ ಅವರಿದ್ದ ತ್ರಿಸದಸ್ಯ ಪೀಠದ ಮುಂದೆ ಪ್ರಕರಣವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸೋಮವಾರ ಉಲ್ಲೇಖಿಸಿದರು.
ಈ ವೇಳೆ ಸಿಜೆಐ ಅವರು "ಏನಿದು ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಿಸುವುದು, ಮುಂತಾಗಿ ಬೆದರಿಕೆಯೊಡ್ಡಿರುವ ವಿಚಾರ?" ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸಿಬಿ ಪರ ವಕೀಲರು, ಅದೆಲ್ಲವೂ ಮಾಧ್ಯಮಗಳಲ್ಲಿ ವರದಿಯಾಗಿರುವಂತಹದ್ದಾಗಿದ್ದು, ತಪ್ಪಾಗಿ ವರದಿಯಾಗಿದೆ. ಇದರಿಂದ ಸಂಸ್ಥೆಯ ಘನತೆಗೆ ಧಕ್ಕೆಯಾಗಿದೆ," ಎಂದು ವಿವರಿಸಿದರು.
ಆಗ ಸಿಜೆಐ ಅವರು ಪ್ರಕರಣವನ್ನು ಮಂಗಳವಾರ (ಜು.12) ಪಟ್ಟಿ ಮಾಡಲಾಗುವುದು ಎಂದು ತಿಳಿಸಿದರು.
ನ್ಯಾ. ಸಂದೇಶ್ ಅವರು ಜು.7ರ ತಮ್ಮ ಆದೇಶದಲ್ಲಿ ಎಸಿಬಿ ಹಾಗೂ ಅದರ ಮುಖ್ಯಸ್ಥರಾದ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರ ವಿರುದ್ಧ ತಾವು ಮೌಖಿಕವಾಗಿ ಮಾಡಿದ್ದ ಅವಲೋಕನಗಳಿಗೆ ಕಾರಣಗಳನ್ನು ನೀಡಿದ್ದು, ಸಂಸ್ಥೆಯ ಒಳಿತಿಗೆ ಇವು ಪೂರಕವಾಗಿಲ್ಲ ಎಂದು ದಾಖಲಿಸಿದ್ದರು. ಇದನ್ನು ಅಕ್ಷೇಪಿಸಿ ಎಸಿಬಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇದೇ ಪ್ರಕರಣದಲ್ಲಿ ತಮ್ಮ ವಿರುದ್ಧ ನ್ಯಾ. ಸಂದೇಶ್ ಅವರು ಮಾಡಿರುವ ಟೀಕೆಗಳನ್ನು ಕೈಬಿಡುವಂತೆ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿರುವುದನ್ನೂ ಸಹ ಇಲ್ಲಿ ನೆನೆಯಬಹುದು.