ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ 545 ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇರ ನೇಮಕಾತಿ ಹಗರಣದ ಕುರಿತು ನ್ಯಾಯಾಂಗ ತನಿಖೆ ನಡೆಸಲು ವಿಚಾರಣಾ ಆಯೋಗವನ್ನು ರಚಿಸಿ ರಾಜ್ಯ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗ ರಚಿಸಿರುವ ಸರ್ಕಾರ ಮೂರು ತಿಂಗಳೊಳಗೆ ಹಗರಣದ ಕುರಿತು ವರದಿ ಸಲ್ಲಿಸುವಂತೆ ಮನವಿ ಮಾಡಿದೆ.
ನೇಮಕಾತಿಯಲ್ಲಿ ಬಹು ಆಯಾಮದ ಅಕ್ರಮಗಳು ನಡೆದಿರುವುದರಿಂದ ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದು ಸಾರ್ವಜನಿಕ ಮಹತ್ವ ಉಳ್ಳದ್ದಾಗಿದೆ. ಜೊತೆಗೆ ಭವಿಷ್ಯದಲ್ಲಿ ಇಂತಹ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವ ಅಗತ್ಯವಿರುವುದರಿಂದ ಆಯೋಗ ರಚಿಸಲಾಗಿದೆ ಎಂದು ಸರ್ಕಾರ ಹೊರಡಿಸಿರುವ ಅಧಿಸೂಚನೆ ತಿಳಿಸಿದೆ.
ಈ ಕೆಳಗಿನ ಅಂಶಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಆಯೋಗವನ್ನು ಕೋರಲಾಗಿದೆ:
ಪಿಎಸ್‌ಐಗಳ ಆಯ್ಕೆ ಪ್ರಕ್ರಿಯೆಗಳಲ್ಲಿ ನೇಮಕಾತಿ ನಿಯಮಗಳನ್ನು ಉಲ್ಲಂಘಿಸಲಾಗಿದೆಯೇ?
ನಿಯಮಗಳು ಉಲ್ಲಂಘನೆಯಾಗಿದ್ದಲ್ಲಿ ಹಾಗೆ ಉಲ್ಲಂಘನೆಯಾದ ನಿಯಮಗಳು ಯಾವುವು? ನಡೆದ ಅಕ್ರಮಗಳೇನು? ಅವು ಯಾವ ಹಂತದಲ್ಲಿ ಉಂಟಾಗಿವೆ?
ಅಕ್ರಮಗಳಲ್ಲಿ ಭಾಗಿಯಾಗಿ ದುರ್ಲಾಭ ಪಡೆದ ವ್ಯಕ್ತಿಗಳು ಯಾರು?
ಪಿಎಸ್‌ಐ ಹುದ್ದೆಗೆ ಅಭ್ಯರ್ಥಿಗಳ ನೇರ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಯಮಾನುಸಾರ, ಪಾರದರ್ಶಕವಾಗಿ ಮತ್ತು ಲೋಪರಹಿತವಾಗಿ ನಡೆಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳು ಯಾವುವು?
ತನಿಖಾ ಆಯೋಗಗಳ ಕಾಯಿದೆ – 1952 ಹಾಗೂ ಸಿವಿಲ್ ಪ್ರಕ್ರಿಯಾ ಸಂಹಿತೆಯಲ್ಲಿ ನೀಡಲಾದ ಅವಕಾಶಗಳಡಿ ತನಿಖೆ ನಡೆಸಲು ಆಯೋಗಕ್ಕೆ ಎಲ್ಲಾ ಅಧಿಕಾರ ಇರುತ್ತದೆ ಎಂದು ತಿಳಿಸಿರುವ ಸರ್ಕಾರ ತನಿಖೆ ಪೂರ್ಣಗೊಳಿಸಲು ಸಿಐಡಿ ಹಾಗೂ ಪೊಲೀಸ್ ನೇಮಕಾತಿ ವಿಭಾಗಗಳು ಸಹಕರಿಸಬೇಕು ಎಂದು ಸೂಚಿಸಿದೆ. ಜೊತೆಗೆ ಆಯೋಗಕ್ಕೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ (ಡಿಜಿ- ಐಜಿಪಿ) ಅದು ನಿರ್ದೇಶನ ನೀಡಿದೆ.
ಜನವರಿ 2021ರಲ್ಲಿ ಪಿಎಸ್‌ಐ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿತ್ತು. ಅದೇ ವರ್ಷ ಅಕ್ಟೋಬರ್ 3ರಂದು ರಾಜ್ಯದ 92 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿತ್ತು. ಲಿಖಿತ ಪರೀಕ್ಷೆಗಳಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಸಿಐಡಿ ತನಿಖೆ ನಡೆದು ಪರೀಕ್ಷೆ ಬರೆದಿದ್ದ 52 ಅಭ್ಯರ್ಥಿಗಳು ಸೇರಿದಂತೆ ಹಲವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಜೊತೆಗೆ ಅವರು ಪೊಲೀಸ್ ಇಲಾಖೆ ನಡೆಸುವ ಎಲ್ಲಾ ವೃಂದ ಹುದ್ದೆಗಳ ನೇಮಕಾತಿಯಲ್ಲಿ ಭಾಗವಹಿಸದಂತೆ ಶಾಶ್ವತವಾಗಿ ನಿಷೇಧ ವಿಧಿಸಲಾಗಿತ್ತು.
ಅಧಿಸೂಚನೆಯ ವಿವರಗಳನ್ನು ಇಲ್ಲಿ ಓದಿ: