ಹಿಜಾಬ್ ಧರಿಸಿ ಶಾಲಾಕಾಲೇಜುಗಳಿಗೆ ಬರುತ್ತಿರುವ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ಪ್ರವೇಶಿಸಲು ಅನುಕೂಲವಾಗುವಂತೆ ಪ್ರತ್ಯೇಕ ಆವೃತ್ತ ಸ್ಥಳ (Separate Enclosure) ಕಲ್ಪಿಸಲು ಸೂಚಿಸಿ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ/ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಸೂಚನೆ ನೀಡಿದೆ.
ಈ ಕುರಿತು ರಾಜ್ಯ ಸರ್ಕಾರದ ಸಚಿವಾಲಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ (ಪದವಿ ಪೂರ್ವ) ಅಧೀನ ಕಾರ್ಯದರ್ಶಿಯವರು ಮಂಗಳವಾರ ಸುತ್ತೋಲೆ ಹೊರಡಿಸಿದ್ದಾರೆ. ಸುತ್ತೋಲೆಯಲ್ಲಿ, ಹಿಜಾಬ್ ಕುರಿತು ಮಾನ್ಯ ಉಚ್ಚ ನ್ಯಾಯಾಲಯದ "ಮಧ್ಯಂತರ ತೀರ್ಪಿನನ್ವಯ ಹಿಜಬ್ ಧರಿಸಿ ಶಾಲಾ ಕಾಲೇಜಿಗೆ ಬರುತ್ತಿರುವ ವಿದ್ಯಾರ್ಥಿನಿಯರು ಹಿಜಬ್ ಅನ್ನು ಧರಿಸಿ ಪ್ರವೇಶಿಸದಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಹಿಜಬ್ ತೆಗೆದು ತರಗತಿಗಳಿಗೆ ಪ್ರವೇಶಿಸಲು ಅನುಕೂಲವಾಗುವಂತೆ ಮಹಿಳಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಆವೃತ್ತ ಸ್ಥಳ ಕಲ್ಪಿಸುವಂತೆ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ/ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ" ಎಂದು ಹೇಳಲಾಗಿದೆ.
ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶದಲ್ಲಿ, “ಎಲ್ಲಾ ಮನವಿಗಳು ನ್ಯಾಯಾಲಯದ ಪರಿಗಣನೆಗೆ ಒಳಪಟ್ಟಿರುವುದರಿಂದ ಯಾವುದೇ ಧರ್ಮ ಅಥವಾ ನಂಬಿಕೆಗೆ ಸೇರಿದ ವಿದ್ಯಾರ್ಥಿಗಳು ಕೇಸರಿ ಶಾಲು (ಭಾಗ್ವಾ), ಶಿರವಸ್ತ್ರ, ಹಿಜಾಬ್, ಧಾರ್ಮಿಕ ಬಾವುಟಗಳನ್ನು ಮುಂದಿನ ಆದೇಶದವರೆಗೆ ತರಗತಿಗೆ ಕೊಂಡೊಯ್ಯುವಂತಿಲ್ಲ” ಎಂದು ಹೇಳಿತ್ತು.
ಈ ನಡುವೆ, ಹಿಜಾಬ್ ನಿಷೇಧಿಸಿರುವುದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮನವಿಗಳ ಕುರಿತು ನ್ಯಾಯಾಲಯ ತೀರ್ಪು ಪ್ರಕಟಿಸುವವರೆಗೆ ಶಾಲೆಯ ಬಳಿ ವಿದ್ಯಾರ್ಥಿನಿಯರು ಮತ್ತು ಬೋಧಕರು ಹಿಜಾಬ್ ಮತ್ತು ಬುರ್ಕಾ ತೆಗೆಯುವುದನ್ನು ವಿಡಿಯೊ ಮಾಡುವುದು, ಫೋಟೊ ತೆಗೆಯದಂತೆ 70 ಪ್ರತಿವಾದಿ ಮಾಧ್ಯಮಗಳನ್ನು ನಿರ್ಬಂಧಿಸಿ ಮಧ್ಯಂತರ ಆದೇಶ ಮಾಡುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಿರುವುದನ್ನು ಇಲ್ಲಿ ನೆನೆಯಬಹುದು.
ಸರ್ಕಾರದ ಆದೇಶವನ್ನು ಇಲ್ಲಿ ಗಮನಿಸಿ: