[ಹಿಜಾಬ್‌ ವಿವಾದ] ಪ್ರಕರಣ ನಿರ್ಧರಿಸುವವರೆಗೆ ತರಗತಿಯಲ್ಲಿ ಹಿಜಾಬ್‌, ಭಾಗ್ವಾ ಧರಿಸುವಂತಿಲ್ಲ: ಕರ್ನಾಟಕ ಹೈಕೋರ್ಟ್‌

ವಿದ್ಯಾರ್ಥಿಗಳಿಗೆ ಸಮವಸ್ತ್ರ ಸಂಹಿತೆ ವಿಧಿಸಿ ಕಾಲೇಜು ಅಭಿವೃದ್ಧಿ ಸಮಿತಿಗಳು ಆದೇಶ ಮಾಡಲ್ಪಟ್ಟಿರುವ ಕಾಲೇಜುಗಳಿಗೆ ಆದೇಶ ಅನ್ವಯಿಸುತ್ತದೆ ಎಂದು ಪೀಠವು ಆದೇಶದಲ್ಲಿ ಸ್ಪಷ್ಟಪಡಿಸಿದೆ.
Karnataka High Court, Hijab

Karnataka High Court, Hijab

ಕೆಲವು ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧ ಮಾಡಿರುವ ವಿಚಾರವನ್ನು ನಿರ್ಧರಿಸುವವರೆಗೆ ಹಿಜಾಬ್, ಕೇಸರಿ ಶಾಲು (ಭಾಗ್ವಾ) ಅಥವಾ ಬೇರಾವುದೇ ಧಾರ್ಮಿಕ ಬಾವುಟಗಳನ್ನು ಇಟ್ಟುಕೊಂಡು ಕಾಲೇಜಿಗೆ ತೆರಳದಂತೆ ವಿದ್ಯಾರ್ಥಿಗಳಿಗೆ ಆದೇಶಿಸಿ ಕರ್ನಾಟಕ ಹೈಕೋರ್ಟ್‌ ಗುರುವಾರ ಮಧ್ಯಂತರ ಆದೇಶ ಮಾಡಿದೆ (ಶ್ರೀಮತಿ ರೇಶಮ್‌ ವರ್ಸಸ್‌ ಕರ್ನಾಟಕ ರಾಜ್ಯ).

ಹಿಜಾಬ್‌ ಧರಿಸಿ ಕಾಲೇಜಿಗೆ ತೆರಳುವುದನ್ನು ನಿಷೇಧಿಸಿ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ತಮ್ಮನ್ನು ಕಾಲೇಜಿಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಆಕ್ಷೇಪಿಸಿ ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ಜೆ ಎಂ ಖಾಜಿ ಅವರನ್ನು ಒಳಗೊಂಡ ಪೀಠವು ವಿಚಾರಣೆ ನಡೆಸಿ ಮಧ್ಯಂತರ ಆದೇಶ ನೀಡಿತ್ತು. ಆದೇಶದ ಪ್ರತಿಯನ್ನ ಶುಕ್ರವಾರ ಹೈಕೋರ್ಟ್‌ನ ವೆಬ್‌ತಾಣದಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

“ಎಲ್ಲಾ ಮನವಿಗಳು ನ್ಯಾಯಾಲಯದ ಪರಿಗಣನೆಗೆ ಒಳಪಟ್ಟಿರುವುದರಿಂದ ಯಾವುದೇ ಧರ್ಮ ಅಥವಾ ನಂಬಿಕೆಗೆ ಸೇರಿದ ವಿದ್ಯಾರ್ಥಿಗಳು ಕೇಸರಿ ಶಾಲು (ಭಾಗ್ವಾ), ಶಿರವಸ್ತ್ರ, ಹಿಜಾಬ್‌, ಧಾರ್ಮಿಕ ಬಾವುಟಗಳನ್ನು ಮುಂದಿನ ಆದೇಶದವರೆಗೆ ತರಗತಿಗೆ ಕೊಂಡೊಯ್ಯುವಂತಿಲ್ಲ” ಎಂದು ಆದೇಶದಲ್ಲಿ ಹೇಳಲಾಗಿದೆ.

ವಿದ್ಯಾರ್ಥಿಗಳಿಗೆ ಸಮವಸ್ತ್ರ ಸಂಹಿತೆ ವಿಧಿಸಿ ಕಾಲೇಜು ಅಭಿವೃದ್ಧಿ ಸಮಿತಿಗಳು ಆದೇಶ ಮಾಡಲ್ಪಟ್ಟಿರುವ ಕಾಲೇಜುಗಳಿಗೆ ಆದೇಶ ಅನ್ವಯಿಸುತ್ತದೆ ಎಂದು ಪೀಠವು ಆದೇಶದಲ್ಲಿ ಸ್ಪಷ್ಟಪಡಿಸಿದೆ. ಹೀಗಾಗಿ, ಸಮವಸ್ತ್ರ ಸಂಹಿತೆ ವಿಧಿಸದ ಕಾಲೇಜುಗಳಿಗೆ ನ್ಯಾಯಾಲಯದ ಆದೇಶ ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ.

“ನಮ್ಮದು ಹಲವು ಸಂಸ್ಕೃತಿಗಳನ್ನು ಒಳಗೊಂಡ ಬಹುಸಂಸ್ಕೃತಿಯ ನಾಡು ಎಂದು ವಿವರಿಸುವ ಅಗತ್ಯವಿಲ್ಲ. ಜಾತ್ಯತೀತವಾದ ನಮ್ಮ ರಾಷ್ಟ್ರವು ಯಾವುದೇ ಒಂದು ನಿರ್ದಿಷ್ಟ ಧರ್ಮದ ಜೊತೆ ಗುರುತಿಸಿಕೊಳ್ಳುವುದಿಲ್ಲ. ಪ್ರತಿಯೊಬ್ಬ ಪ್ರಜೆಯು ತಮ್ಮ ಇಚ್ಛೆಯ ನಂಬಿಕೆ ಪಾಲಿಸುವ ಹಕ್ಕು ಹೊಂದಿದ್ದಾರೆ ಎಂಬುದು ಸತ್ಯ. ಅದಾಗ್ಯೂ, ಅದು ಪರಿಪೂರ್ಣವಾಗಿಲ್ಲ. ನಿರ್ದಿಷ್ಟ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂದು ಸಂವಿಧಾನದಲ್ಲಿ ಹೇಳಲಾಗಿದೆ” ಎಂದು ಪೀಠವು ವಿವರಿಸಿದೆ.

“ ತರಗತಿಯಲ್ಲಿ ಹಿಬಾಜ್‌ ಧರಿಸುವುದು ಇಸ್ಲಾಮ್‌ ಧಾರ್ಮಿಕ ನಂಬಿಕೆಯ ಭಾಗವೇ ಎಂಬುದನ್ನು ಸಾಂವಿಧಾನಿಕ ಭರವಸೆಯ ಹಿನ್ನೆಲೆಯಲ್ಲಿ ಪರಿಶೀಲಿಸಬೇಕಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

Also Read
[ಬ್ರೇಕಿಂಗ್]‌ ಪ್ರಕರಣ ಇತ್ಯರ್ಥವಾಗುವವರೆಗೆ ಧಾರ್ಮಿಕ ಸಂಕೇತ ಬಿಂಬಿಸುವ ಉಡುಪು ಧರಿಸಲು ನಿರ್ಬಂಧ: ಕರ್ನಾಟಕ ಹೈಕೋರ್ಟ್‌

“ನಮ್ಮ ನಾಗರಿಕ ಸಮಾಜದಲ್ಲಿ ಧರ್ಮ, ಸಂಸ್ಕೃತಿ ಅಥವಾ ಮತ್ತಾವುದೋ ಹೆಸರಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ತರಲು ಅವಕಾಶ ನೀಡಲಾಗದು. ನಿರಂತರ ಧರಣಿ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಅನಿರ್ದಿಷ್ಟಾವಧಿಗೆ ಮುಚ್ಚುವುದು ಒಳ್ಳೆಯ ಬೆಳವಣಿಗೆಯಲ್ಲ. ಮಕ್ಕಳ ಶೈಕ್ಷಣಿಕ ಬದುಕಿನ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಬಾರದು. ಈ ದೃಷ್ಟಿಯಿಂದ ಅವರು ತರಗತಿಗೆ ತೆರಳಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಸಮವಸ್ತ್ರ ಸಂಹಿತೆ ವಿಧಿಸಿರುವ ಕಾಲೇಜುಗಳಿಗೆ ಯಾವುದೇ ಧಾರ್ಮಿಕ ನಂಬಿಕೆ ಬಿಂಬಿಸುವ ಉಡುಪು ಧರಿಸಿ ತರಗತಿಗೆ ತೆರಳದಂತೆ ವಿದ್ಯಾರ್ಥಿಗಳನ್ನು ನಿರ್ಬಂಧಿಸಿರುವ ಪೀಠವು ಸಂಬಂಧಪಟ್ಟ ಎಲ್ಲರಿಗೂ ಶಾಂತಿ ಮತ್ತು ನೆಮ್ಮದಿ ಕಾಪಾಡಲು ಕೋರಿದೆ.

Attachment
PDF
Smt. Resham and Others versus State of Karnataka and others.pdf
Preview

Related Stories

No stories found.
Kannada Bar & Bench
kannada.barandbench.com