ಪರಿಷತ್‌ ಚುನಾವಣೆ: ನಿಗದಿಯಂತೆ ಬೆಂಗಳೂರು ನಗರ ಕ್ಷೇತ್ರದ ಫಲಿತಾಂಶ ಪ್ರಕಟಿಸಲು ಆಯೋಗಕ್ಕೆ ಹೈಕೋರ್ಟ್‌ ಅನುಮತಿ

ನಾಮನಿರ್ದೇಶಿತ ಸದಸ್ಯರಿಗೆ ಪುರಸಭೆಯ ಸಭೆಗಳಿಗೆ ಸಂಬಂಧಿಸಿದಂತೆ ಮತದಾನದ ಹಕ್ಕು ಮೊಕಟುಗೊಳಿಸಲಾಗಿದೆ. ಇದು ಇತರ ಚುನಾವಣೆಗಳಿಗೆ ಅನ್ವಯಿಸುವುದಿಲ್ಲ ಎಂದು ಅಭಿಪ್ರಾಯಪಟ್ಟ ಪೀಠ.
Karnataka HC and election
Karnataka HC and election

ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣಾ ಫಲಿತಾಂಶ ಪ್ರಕಟಣೆಗೆ ಸಂಬಂಧಿಸಿದಂತೆ ಎದುರಾಗಿದ್ದ ಆತಂಕ ಕಡೆಗೂ ನಿವಾರಣೆಯಾಗಿದೆ. ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ನ್ಯಾಯಾಲಯದ ಅನುಮತಿ ಇಲ್ಲದೆ ಪ್ರಕಟಿಸದಂತೆ ಮಧ್ಯಂತರ ಆದೇಶ ನಿಡಿದ್ದ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶವನ್ನು ಸೋಮವಾರ ವಿಭಾಗೀಯ ಪೀಠವು ಮಾರ್ಪಡಿಸಿ ಫಲಿತಾಂಶ ಪ್ರಕಟಣೆಗೆ ಚುನಾವಣಾ ಆಯೋಗಕ್ಕೆ ಅನುಮತಿಸಿದೆ.

ಆದರೆ, ಇದೇ ವೇಳೆ ನ್ಯಾಯಾಲಯವು ಅಂತಿಮವಾಗಿ ಫಲಿತಾಂಶವು ನಾಮನಿರ್ದೇಶಿತ ಸದಸ್ಯರ ಮತದಾನದ ಹಕ್ಕು ಪ್ರಶ್ನಿಸಿ ಸಲ್ಲಿಸಿರುವ ಮನವಿಯ ಕುರಿತು ಏಕಸದಸ್ಯ ಪೀಠ ನೀಡುವ ತೀರ್ಪಿಗೆ ಒಳಪಟ್ಟಿರುತ್ತದೆ ಎಂದ ಸ್ಪಷ್ಟಪಡಿಸಿದೆ.

ಮೇಲ್ಮನವಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠವು, ಅರ್ಜಿದಾರರ ಪ್ರಮುಖ ತಗಾದೆಯಾದ ನಾಮನಿರ್ದೇಶಿತ ಸದಸ್ಯರಿಗೆ ಪರಿಷತ್‌ ಚುನಾವಣೆಯಲ್ಲಿ ನೀಡಿರುವ ಮತದಾನದ ಅವಕಾಶದ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿತು. ನಾಮನಿರ್ದೇಶಿತ ಸದಸ್ಯರಿಗೆ ಪುರಸಭೆಯ ಸಭೆಗಳಿಗೆ ಸಂಬಂಧಿಸಿದಂತೆ ಮತದಾನದ ಹಕ್ಕು ಮೊಕಟುಗೊಳಿಸಲಾಗಿದೆ. ಇದು ಇತರ ಚುನಾವಣೆಗಳಿಗೆ ಅನ್ವಯಿಸುವುದಿಲ್ಲ. ಏಕಸದಸ್ಯ ಪೀಠದ ಮಧ್ಯಂತರ ಆದೇಶ ಸಮರ್ಪಕವಾಗಿಲ್ಲ ಎಂದಿತು.

Also Read
[ಪರಿಷತ್‌ ಚುನಾವಣೆ] ಬೆಂಗಳೂರು ನಗರ ಕ್ಷೇತ್ರದ ಫಲಿತಾಂಶಕ್ಕೆ ಹೈಕೋರ್ಟ್‌ ತಡೆ ಪ್ರಶ್ನಿಸಿ ಚುನಾವಣಾ ಆಯೋಗದ ಮೇಲ್ಮನವಿ

ಆನೇಕಲ್, ಅತ್ತಿಬೆಲೆ ಹಾಗೂ ಬೊಮ್ಮಸಂದ್ರ ಪುರಸಭೆಗಳ 15 ನಾಮನಿರ್ದೇಶಿತ ಸದಸ್ಯರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲು ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ತಿನ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯ ಫಲಿತಾಂಶವನ್ನು ನ್ಯಾಯಾಲಯದ ಅನುಮತಿ ಪಡೆಯದೇ ಪ್ರಕಟಿಸಬಾರದು ಎಂದು ನ್ಯಾ. ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠವು ಡಿ. 9ರಂದು ಆದೇಶಿಸಿತ್ತು. ಈ ಆದೇಶದ ವಿರುದ್ಧ ಕೇಂದ್ರ ಚುನಾವಣಾ ಆಯೋಗವು (ಇಸಿಐ) ಶುಕ್ರವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಮೇಲ್ಮನವಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠವು ಮತ ಎಣಿಕೆ ಡಿಸೆಂಬರ್‌ 14ರಂದು ನಡೆಯಲಿದ್ದು ಡಿಸೆಂಬರ್‌ 13ರಂದು ಮೇಲ್ಮನವಿ ವಿಚಾರಣೆ ನಡೆಸಲಾಗುವುದು ಎಂದಿತ್ತು.

Related Stories

No stories found.
Kannada Bar & Bench
kannada.barandbench.com