
ಕೇಂದ್ರೀಯ ತನಿಖಾ ದಳದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್ ಅವರನ್ನು ಭಾರತದ ಕಾನೂನು ಕ್ಷೇತ್ರದ ಖ್ಯಾತನಾಮರಲ್ಲಿ ಒಬ್ಬರಾದ ರಾಮ್ ಜೇಠ್ಮಲಾನಿ ಅವರ ಜೊತೆ ಹೋಲಿಸಿ ಕರ್ನಾಟಕ ಹೈಕೋರ್ಟ್ ಈಚೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿರುವ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗಳ ನೇಮಕದಲ್ಲಿ ಅಕ್ರಮದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ಪ್ರಸನ್ನಕುಮಾರ್ ಅವರನ್ನು “ನಾವು ಕರ್ನಾಟಕದ ರಾಮ್ ಜೇಠ್ಮಲಾನಿ ಎನ್ನುತ್ತೇವೆ” ಎಂದು ಶ್ಲಾಘಿಸಿತು.
ಕೆಪಿಎಸ್‌ಸಿ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವುದರ ಕುರಿತು ವಾದ-ಪ್ರತಿವಾದ ನಡೆಯುತ್ತಿತ್ತು. ಪ್ರಕರಣವನ್ನು ಸಿಬಿಐಗೆ ನೀಡುವುದು ಬೇಡ, ಸಿಐಡಿ ಹೆಚ್ಚು ಸಮರ್ಥವಾಗಿದೆ ಎಂದು ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಬಲವಾಗಿ ಸಮರ್ಥಿಸಿದರು. ಒಂದು ಹಂತದಲ್ಲಿ ಎಜಿ ಅವರು “ಸಿಐಡಿ ಬಗ್ಗೆ ಸರ್ಟಿಫಿಕೇಟ್ ನೀಡಬೇಕಿರುವುದು ಪ್ರಸನ್ನಕುಮಾರ್. ಏಕೆಂದರೆ ನನಗಿಂತ ಸಿಐಡಿ ಅಧಿಕಾರಿಗಳ ಜೊತೆ ಹೆಚ್ಚು ಸಮಾಲೋಚನೆ ನಡೆಸಿರುವವರು ಪ್ರಸನ್ನಕುಮಾರ್” ಎಂದರು.
ಅದಕ್ಕೆ ನ್ಯಾ. ದೀಕ್ಷಿತ್ “ನಾವು ಅವರನ್ನು ಕರ್ನಾಟಕದ ರಾಮ್ ಜೇಠ್ಮಲಾನಿ ಎನ್ನುತ್ತೇವೆ” ಎಂದು ನಕ್ಕರು.
ಆಗ ಎಜಿ ಅವರು “ಕೆಲವು ಪ್ರಕರಣಗಳನ್ನು ಮುನ್ನಡೆಸಲು ಇಚ್ಛೆಯಿಲ್ಲದೇ ಪ್ರಸನ್ನಕುಮಾರ್ ಅವರು ರಾಜೀನಾಮೆ ನೀಡಲು ಬಯಸಿದ್ದರಂತೆ. ಆದರೆ, ಸಿಐಡಿ ಅಧಿಕಾರಿಗಳು ಪ್ರಸನ್ನಕುಮಾರ್ ರಾಜೀನಾಮೆ ನೀಡದಂತೆ ಮನವಿ ಮಾಡಿದ್ದಾರೆ” ಎಂದರು. ಈ ಸಂದರ್ಭದಲ್ಲಿ ಪ್ರಸನ್ನಕುಮಾರ್ ಅವರು ನ್ಯಾಯಾಲಯದಲ್ಲಿ ಹಾಜರಿದ್ದರು.
ಬಿಟ್ ಕಾಯಿನ್, ಪಿಎಸ್‌ಐ ನೇಮಕಾತಿ, ಐ ಮಾನಟರಿ ಅಡ್ವೈಸರಿ, ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ನಟ ದರ್ಶನ ಭಾಗಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣ ಸೇರಿದಂತೆ ಹಲವು ಮಹತ್ವದ ಪ್ರಕರಣಗಳಲ್ಲಿ ಸಿಐಡಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಪ್ರಸನ್ನಕುಮಾರ್ ಇಂದಿಗೂ ಕರ್ತವ್ಯದಲ್ಲಿದ್ದಾರೆ. ಇದರ ಜೊತೆಗೆ 2016ರಿಂದ ಸಿಬಿಐ ಮತ್ತು ಎನ್‌ಐಎ ಎಸ್‌ಪಿಪಿಯಾಗಿ, 2018ರಿಂದ ಜಾರಿ ನಿರ್ದೇಶನಾಲಯದ ಎಸ್‌ಪಿಪಿಯಾಗಿ ಹಲವು ಅತ್ಯಂತ ಮಹತ್ವದ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದಾರೆ.
ಬೆಂಗಳೂರಿನ ವಿಶ್ವವಿದ್ಯಾಲಯ ಕಾನೂನು ಕಾಲೇಜಿನಲ್ಲಿ ಪ್ರಸನ್ನಕುಮಾರ್ ಅವರು ಬಿ.ಎ., ಎಲ್‌ಎಲ್‌ಬಿ ಪದವಿ ಪಡೆದಿದ್ದು, ಹೈದರಾಬಾದ್‌ನ ಎನ್‌ಎಎಲ್‌ಎಸ್‌ಎಆರ್ ವಿಶ್ವವಿದ್ಯಾಲಯದಲ್ಲಿ ಪರ್ಯಾಯ ವಿವಾದ ನಿರ್ಣಯ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ದಾರೆ. 2001ರ ಆಗಸ್ಟ್ 25ರಂದು ವಕೀಲರಾಗಿ ನೋಂದಣಿ ಮಾಡಿಸಿರುವ ಪ್ರಸನ್ನಕುಮಾರ್ ಅವರು ಹಿರಿಯ ವಕೀಲ ಸಿ ಎಚ್ ಜಾಧವ್ ಅವರ ಬಳಿ ಪ್ರಾಕ್ಟೀಸ್ ಆರಂಭಿಸಿದ್ದರು.
ಭಾರತದ ಕಾನೂನು ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾದ ದಿವಂಗತ ರಾಮ್ ಜೇಠ್ಮಲಾನಿ ಅವರು ದೇಶ ಕಂಡ ಹಲವು ಮಹತ್ವದ ಪ್ರಕರಣಗಳಲ್ಲಿ ವಾದ ಮಂಡಿಸಿದ್ದರು. ಹವಾಲಾ ಪ್ರಕರಣದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾನಿ ಪರ, ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಹಾಲಿ ಗೃಹ ಸಚಿವ ಅಮಿತ್ ಶಾ, ಹರ್ಷದ್ ಮೆಹ್ತಾ ಮತ್ತು ಕೇತನ್ ಪಾರೇಖ್ ಭಾಗಿಯಾಗಿದ್ದ ಸ್ಟಾಕ್ ಮಾರ್ಕೆಟ್ ಹಗರಣ, ಜೆಸ್ಸಿಕಾ ಲಾಲ್ ಕೊಲೆ ಪ್ರಕರಣದಲ್ಲಿ ಆರೋಪಿ ಮನು ಶರ್ಮಾ, ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ರಾಜೀವ್ ಗಾಂಧಿ ಕೊಲೆ ಪ್ರಕರಣದ ಆರೋಪಿಗಳು, ಆದಾಯ ಮೀರಿದ ಆಸ್ತಿ ಸಂಪಾದನೆ ಪ್ರಕರಣದಲ್ಲಿ ತಮಿಳುನಾಡು ಮಾಜಿ ಸಿಎಂ ಜೆ ಜಯಲಲಿತಾ, ಬಿಜೆಪಿ ನಾಯಕ ಅರುಣ್ ಜೇಟ್ಲಿಯವರು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಹೂಡಿದ್ದ ಮಾನಹಾನಿ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಜೇಠ್ಮಲಾನಿ ವಾದಿಸಿದ್ದರು. ಕೇಂದ್ರ ಕಾನೂನು ಸಚಿವರಾಗಿಯೂ ಜೇಠ್ಮಲಾನಿ ಗಮನಾರ್ಹ ಕೆಲಸ ಮಾಡಿದ್ದರು.