ನಟ ದರ್ಶನ್‌ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡಿರುವ ವಕೀಲ ಪ್ರಸನ್ನಕುಮಾರ್‌ ಯಾರು?

ಸಿಬಿಐ, ಎನ್‌ಐಎ, ಇ ಡಿ ಪರವಾಗಿ ರಾಷ್ಟ್ರೀಯ ಮಹತ್ವದ ಪ್ರಕರಣಗಳಲ್ಲಿ ಎಸ್‌ಪಿಪಿಯಾಗಿ ಕೆಲಸ ಮಾಡಿರುವ ಪ್ರಸನ್ನಕುಮಾರ್‌ ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ಹೈಕೋರ್ಟ್‌ ಮತ್ತು ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್‌ ಮಾಡುತ್ತಿದ್ದಾರೆ.
P Prasanna Kumar, Special Public Prosecutor
P Prasanna Kumar, Special Public Prosecutor

ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ನಟ ದರ್ಶನ್‌ ಮತ್ತು ಪವಿತ್ರಾ ಗೌಡ ಸೇರಿ 17 ಮಂದಿ ಭಾಗಿಯಾಗಿದ್ದಾರೆ ಎನ್ನಲಾದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅನುಭವಿ ವಕೀಲ ಪಿ ಪ್ರಸನ್ನ ಕುಮಾರ್‌ ಅವರನ್ನು ರಾಜ್ಯ ಸರ್ಕಾರವು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಕ ಮಾಡುವ ಮೂಲಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಂದೇಶ ರವಾನಿಸಿದೆ.

ಕ್ರಿಮಿನಲ್‌ ಪ್ರಕರಣಗಳನ್ನು ಉತ್ತಮವಾಗಿ ಮುನ್ನಡೆಸುವ ಛಾತಿ ಹೊಂದಿರುವ ಪ್ರಸನ್ನಕುಮಾರ್‌ ಅವರು ದೇಶ ಮತ್ತು ರಾಜ್ಯದ ಹಲವು ಮಹತ್ವದ ಪ್ರಕರಣಗಳಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇ ಡಿ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡು ಹಲವು ವರ್ಷಗಳಿಂದ ಕರ್ತವ್ಯನಿರ್ವಹಿಸುತ್ತಿದ್ದಾರೆ. 2016ರ ಜೂನ್‌ ಮತ್ತು 2016ರ ನವೆಂಬರ್‌ನಿಂದ ಕ್ರಮವಾಗಿ ಸತತವಾಗಿ ಸಿಬಿಐ ಮತ್ತು ಎನ್‌ಐಎ ವಿಶೇಷ ಸರ್ಕಾರಿ ಅಭಿಯೋಜಕರಾಗಿರುವ ಪ್ರಸನ್ನಕುಮಾರ್‌ ಅವರು ಪ್ರಕರಣಗಳಲ್ಲಿ ಪಡೆದಿರುವ ಯಶಸ್ಸಿನ ಸರಾಸರಿಯು ಕ್ರಮವಾಗಿ ಶೇ. 90 ಮತ್ತು ಶೇ. 100ರಷ್ಟಿದೆ. ಈ ನೆಲೆಯಲ್ಲಿ ಪ್ರಸನ್ನಕುಮಾರ್‌ ನೇಮಕಾತಿಗೆ ಹೆಚ್ಚಿನ ಮಹತ್ವವಿದೆ.

ವೃತ್ತಿಪರತೆಗೆ ಆದ್ಯತೆ ನೀಡುವ ಮೂಲಕ ರಾಜಕೀಯವನ್ನು ಬದಿಗಿಟ್ಟು ಪ್ರಸನ್ನಕುಮಾರ್‌ ಅವರನ್ನು ದರ್ಶನ್‌ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸಿರುವ ರಾಜ್ಯ ಸರ್ಕಾರದ ನಿಲುವೂ ಸಹ ಶ್ಲಾಘನೀಯ ಎಂಬ ಮಾತುಗಳು ಕಾನೂನು ವಲಯದಿಂದ ಕೇಳಿಬಂದಿವೆ.

ಹಿರಿಯ ವಕೀಲರಾದ ಸಿ ಎಚ್‌ ಜಾಧವ್‌ ಅವರ ಗರಡಿಯಲ್ಲಿ ವಕೀಲಿಕೆ ಆರಂಭಿಸಿದ ಪ್ರಸನ್ನ ಕುಮಾರ್‌ ಅವರು ಕೇಂದ್ರೀಯ ತನಿಖಾ ದಳದ (ಸಿಬಿಐ) ಪರವಾಗಿ ಹಾಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ವಿರುದ್ಧದ ಪ್ರಕರಣ ಮುನ್ನಡೆಸುತ್ತಿದ್ದಾರೆ. ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಅಕ್ರಮ ಗಣಿಗಾರಿಕೆ, ಕರೀಮ್‌ ಲಾಲ್‌ ತೆಲಗಿ ಭಾಗಿಯಾಗಿದ್ದ ಸ್ಟ್ಯಾಂಪ್‌ ಪೇಪರ್‌ ಹಗರಣ, ನೋಟು ಅಮಾನ್ಯೀಕರಣ ಪ್ರಕರಣಗಳು, ಐ-ಮಾನಿಟರಿ ಅಡ್ವೈಸರಿ (ಐಎಂಎ) ಹಗರಣ, ಮೈಸೂರು ಮಹರಾಜರ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣಗಳನ್ನು ಅವರು ಯಶಸ್ವಿಯಾಗಿ ನಡೆಸಿದ್ದಾರೆ.

ಎನ್ಐಎ ಪರವಾಗಿ ಎಸ್‌ಪಿಪಿಯಾಗಿ ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣ, ಮೈಸೂರು ನ್ಯಾಯಾಲಯದಲ್ಲಿನ ಬಾಂಬ್‌ ಸ್ಫೋಟ, ಚರ್ಚ್ ಸ್ಟ್ರೀಟ್‌ನಲ್ಲಿನ ಬಾಂಬ್‌ ಸ್ಫೋಟ, ಆರ್‌ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್‌ ಹತ್ಯೆ, ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಪ್ರಕರಣಗಳನ್ನೂ ಪ್ರಸನ್ನ ಕುಮಾರ್‌ ನಡೆಸುತ್ತಿದ್ದಾರೆ.

ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಚೀನಾದ ತಂತ್ರಜ್ಞಾನ ಕಂಪೆನಿ ಶಓಮಿ ವಿರುದ್ಧ ಮತ್ತು ಅಮೆರಿಕಾ ಮೂಲದ ದೇವಾಸ್‌ ಮಲ್ಟಿಮೀಡಿಯಾ ವಿರುದ್ಧ ದಾಖಲಾಗಿದ್ದ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದ ನಿಲುವಿಗೆ ಯಶಸ್ಸು ಕೊಡಿಸುವಲ್ಲಿ ಪ್ರಸನ್ನ ಕುಮಾರ್‌ ಸಫಲರಾಗಿದ್ದಾರೆ.

ಇಷ್ಟು ಮಾತ್ರವಲ್ಲದೇ, ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ಅವರ ಲೈಂಗಿಕ ಹಗರಣದಲ್ಲಿ ರಾಜ್ಯ ಸರ್ಕಾರದ ಪರವಾಗಿ, ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ನೇಮಕಾತಿ ಹಗರಣ, ಬಿಟ್‌ ಕಾಯಿನ್‌ ಹಗರಣದಲ್ಲಿ ಸಿಸಿಬಿ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಕೆಲಸ ಮಾಡಿದ್ದಾರೆ.

ಎರಡು ದಶಕಗಳಿಗೂ ಮೀರಿದ ವೃತ್ತಿ ಬದುಕಿನಲ್ಲಿ ವೃತ್ತಿಪರವಾಗಿ ಕಾನೂನು ವಲಯದಲ್ಲಿ ಹೆಸರು ಮಾಡಿರುವ ಪ್ರಸನ್ನ ಕುಮಾರ್‌ ವಾದಿಸಿರುವ 484ಕ್ಕೂ ಅಧಿಕ ಪ್ರಕರಣಗಳ ತೀರ್ಪುಗಳು ಇಂಡಿಯನ್‌ ಲಾ ರಿಪೋರ್ಟರ್‌, ಕರ್ನಾಟಕ ಲಾ ಜರ್ನಲ್‌, ಸುಪ್ರೀಂ ಕೋರ್ಟ್‌ ಕೇಸ್‌ ಆನ್‌ಲೈನ್‌-ಕರ್ನಾಟಕ, ಕರ್ನಾಟಕ ಸಿವಿಲ್‌ ಮತ್ತು ಕ್ರಿಮಿನಲ್‌ ರಿಪೋರ್ಟರ್‌, ಮನುಪತ್ರ ಸೇರಿದಂತೆ ಹಲವು ಜರ್ನಲ್‌ಗಳಲ್ಲಿ ವರದಿಯಾಗಿವೆ.

1979ರ ಮೇ 2ರಂದು ಜನಿಸಿದ ಪ್ರಸನ್ನಕುಮಾರ್‌ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ಬಿ ಎ, ಎಲ್‌ಎಲ್‌ಬಿ ಪೂರೈಸಿದರು. ಹೈದರಾಬಾದ್‌ನ ಎನ್‌ಎಎಲ್‌ಎಸ್‌ಎಆರ್‌ ವಿಶ್ವವಿದ್ಯಾಲಯದಿಂದ ಪಿಜಿಡಿ-ಎಡಿಆರ್‌ ಪದವಿ ಪಡೆದರು. 2001ರ ಆಗಸ್ಟ್‌ 25ರಂದು ವಕೀಲರಾಗಿ ನೋಂದಾಯಿಸಿಕೊಂಡರು.

ರಾಜ್ಯದ ವಿಚಾರಣಾಧೀನ ನ್ಯಾಯಾಲಯ ಮತ್ತು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡುತ್ತಿರುವ ಪ್ರಸನ್ನ ಕುಮಾರ್‌ ಅವರು ಸಾಂವಿಧಾನಿಕ, ಕ್ರಿಮಿನಲ್‌, ಸಿವಿಲ್‌ ಮತ್ತು ಸರ್ವೀಸ್‌ ಪ್ರಕರಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

Kannada Bar & Bench
kannada.barandbench.com