ಕೋವಿಡ್ ಪ್ರಕರಣಗಳು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಎನ್-95 ಮಾಸ್ಕ್ ಗಳು, ಹ್ಯಾಂಡ್ ಸ್ಯಾನಿಟೈಸರ್ ಬೆಲೆ ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಕ್ರಮವಹಿಸಬೇಕು ಎಂದು ಶುಕ್ರವಾರ ಹೈಕೋರ್ಟ್ ನಿರ್ದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಮತ್ತು ನ್ಯಾ. ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಆದೇಶ ಹೊರಡಿಸಿದ್ದು, ಹೀಗೆ ಹೇಳಿದೆ,
ವಿಚಾರಣೆಯ ಸಂದರ್ಭದಲ್ಲಿ ಎನ್-95 ಮಾಸ್ಕ್ ಗಳಿಗೆ 60ರಿಂದ 300 ರೂಪಾಯಿ ಬೆಲೆ ಇದೆ ಎಂದು ನ್ಯಾಯಪೀಠಕ್ಕೆ ತಿಳಿಸಲಾಯಿತು. ಹ್ಯಾಂಡ್ ಸ್ಯಾನಿಟೈಸರ್ ಬೆಲೆಯಲ್ಲಿಯೂ ಇದೇ ರೀತಿಯ ವ್ಯತ್ಯಾಸವಿದೆ ಎಂದು ನ್ಯಾಯಪೀಠ ಹೇಳಿತು.
”ಮಾರುಕಟ್ಟೆಯಲ್ಲಿನ ಚಲನೆ”ಯ ಆಧಾರದಲ್ಲಿ ಎನ್-95 ಮಾಸ್ಕ್ ಗಳ ಬೆಲೆ ನಿಗದಿಗೊಳಿಸಬೇಕಾಗುತ್ತದೆ ಎಂದು ಹಿಂದೆ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ಹೇಳಿತ್ತು. ಈ ಹಿನ್ನೆಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯವು ಕೇಂದ್ರ ಸರ್ಕಾರ ಇದೇ ನಿಲುವು ತಳೆದರೆ ಹೆಚ್ಚಿನ ಜನರು ಇದರಿಂದ ಸಮಸ್ಯೆಗೆ ತುತ್ತಾಗುತ್ತಾರೆ ಎಂದು ಹೇಳಿತು.
“ಎನ್-95 ಮಾಸ್ಕ್ ಗಳ ನಿಯಂತ್ರಿಸುವುದು ಮತ್ತು ಅವುಗಳ ಪೂರೈಕೆಯಲ್ಲಿ ವ್ಯತ್ಯಾಸವಾಗದಂತ ನೋಡಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಅಸಹಾಯಕವೇನಲ್ಲ” ಎಂದು ನ್ಯಾಯಪೀಠ ಹೇಳಿತು.
ಇವುಗಳಲ್ಲದೇ ನ್ಯಾಯಪೀಠವು ಕೆಲವು ಅವಲೋಕನ ಮಾಡಿದ್ದು, ಆಡಳಿತಗಾರರಿಗೆ ನಿರ್ದೇಶನಗಳನ್ನು ನೀಡಿದೆ:
ವಿಮಾ ಮೊತ್ತವನ್ನು 30 ಲಕ್ಷ ರೂಪಾಯಿಗಳಿಂದ 50 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವುದು ಸಾಧ್ಯವಿಲ್ಲ ಎಂಬ ರಾಜ್ಯ ಸರ್ಕಾರದ ನಿರ್ಧಾರವನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ಅರ್ಹತೆಯ ಬಗ್ಗೆ ತಿಳಿಯುವುದು ಕೋರ್ಟ್‌ಗೆ ಅನವಶ್ಯಕ. ಆದರೆ, ಇದು ಅವಶ್ಯ ಎಂದಾದರೆ ನಿರ್ದಿಷ್ಟ ವ್ಯಕ್ತಿಗಳನ್ನು ಅದನ್ನು ಪ್ರಶ್ನಿಸಬಹುದು.
ಇಲ್ಲಿಯವರೆಗೆ ವಿಮಾ ಯೋಜನೆಯಡಿ ಪೌರಕಾರ್ಮಿಕರಿಗೆ ಪಾವತಿಸಲಾಗಿರುವ ಮೊತ್ತವನ್ನು ರಾಜ್ಯ ಸರ್ಕಾರವು ದಾಖಲೆಯಲ್ಲಿ ಸಲ್ಲಿಸಬೇಕಿದೆ.
ಪೌರಕಾರ್ಮಿಕರಿಗೆ ಪಿಪಿಇ ಕಿಟ್ ಭತ್ಯೆ ರೂಪದಲ್ಲಿ ನೀಡಲಾಗುವ 10 ಸಾವಿರ ರೂಪಾಯಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ತ್ವರಿತವಾಗಿ ನಿರ್ಧಾರ ಕೈಗೊಳ್ಳಬೇಕು.
ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳಲ್ಲಿರುವ ಪೌರ ಕಾರ್ಮಿಕರಿಗೆ, ಹಿಂದೆ ವೇತನ ಪಾವತಿಯಾಗದವರು ಸೇರಿದಂತೆ ಎಲ್ಲರಿಗೂ ಹಣ ಪಾವತಿಯಾಗುವುದನ್ನು ರಾಜ್ಯ ಸರ್ಕಾರ ಖಾತರಿಪಡಿಸಬೇಕು. ಆಗಸ್ಟ್ 31ರ ವರೆಗೆ ಸ್ವಚ್ಛತಾಕರ್ಮಿಗಳಿಗೆ ಪಾವತಿಸಲಾಗಿರುವ ವೇತನದ ದತ್ತಾಂಶವನ್ನು ಸಂಗ್ರಹಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ.