ಗುಮಾಸ್ತರ ಕಲ್ಯಾಣ ನಿಧಿ ಆರಂಭ ಹಾಗೂ ಪರಿಹಾರದ ಮೊತ್ತ ಪಾವತಿ ಕುರಿತು ಪ್ರತಿಕ್ರಿಯಿಸಲು ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ವಕೀಲರ ಗುಮಾಸ್ತರ ಕಲ್ಯಾಣ ನಿಧಿ ಖಾತೆ ತೆರೆಯುವ ಸಂಬಂಧ ರಚಿಸಲಾಗಿರುವ ಸಮಿತಿ ಕುರಿತ ಅಧಿಸೂಚನೆಯನ್ನು ಅಧಿಕೃತವಾಗಿ ಸಲ್ಲಿಸಿಲ್ಲ. ಹೀಗಾಗಿ, ಮೂರು ದಿನಗಳ ಒಳಗಾಗಿ ಸಮಿತಿ ರಚನೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಅಧಿಕೃತವಾಗಿ ಸಲ್ಲಿಸಬೇಕು ಎಂದ ಪೀಠ.
KSBC and Karnataka HC
KSBC and Karnataka HC

ರಾಜ್ಯ ನೋಂದಾಯಿತ ವಕೀಲ ಗುಮಾಸ್ತರ ಕಲ್ಯಾಣ ನಿಧಿಯ ಖಾತೆ ತೆರೆಯುವುದು ಮತ್ತು ಕೋವಿಡ್‌ನಿಂದ ಬಾಧಿತರಾದ ವಕೀಲರಿಗೆ ಐದು ಕೋಟಿ ರೂಪಾಯಿ ನೆರವು ಘೋಷಿಸಿರುವುದನ್ನು ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವಂತೆ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ರಿಟ್‌ ಮನವಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠವು ಮೂರು ದಿನಗಳ ಒಳಗಾಗಿ ರಾಜ್ಯ ನೋಂದಾಯಿತ ವಕೀಲ ಗುಮಾಸ್ತರ ಕಲ್ಯಾಣ ನಿಧಿಯ ಖಾತೆ ತೆರೆಯುವ ಸಂಬಂಧ ರಚಿಸಲಾಗಿರುವ ಸಮಿತಿಯ ಅಧಿಸೂಚನೆಯನ್ನು ಅಧಿಕೃತವಾಗಿ ಸಲ್ಲಿಸುವಂತೆ ಆದೇಶಿಸಿದೆ.

“ಕರ್ನಾಟಕ ನೋಂದಾಯಿತ ವಕೀಲರ ಗುಮಾಸ್ತರ ಕಲ್ಯಾಣ ನಿಯಮಗಳು 2019ರ ಅಡಿ ಬ್ಯಾಂಕ್‌ ಖಾತೆ ತೆರೆಯುವ ಸಂಬಂಧ ರಾಜ್ಯ ಸರ್ಕಾರ ಹಾಗೂ ರಾಜ್ಯ ವಕೀಲರ ಪರಿಷತ್‌ನ (ಕೆಎಸ್‌ಬಿಸಿ) ತಲಾ ಇಬ್ಬರು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ ಎಂದು ಪೀಠದ ಗಮನಕ್ಕೆ ತರಲಾಗಿದೆ. ಆದರೆ, ಸಮಿತಿ ರಚಿಸಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ತೆರನಾದ ಅಧಿಸೂಚನೆಯನ್ನು ಅಧಿಕೃತವಾಗಿ ಸಲ್ಲಿಸಲಾಗಿಲ್ಲ. ಹೀಗಾಗಿ, ಮೂರು ದಿನಗಳ ಒಳಗಾಗಿ ಸಮಿತಿ ರಚನೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಅಧಿಕೃತವಾಗಿ ಸಲ್ಲಿಸಬೇಕು. ಅಲ್ಲದೇ ಕಳೆದ ಜೂನ್‌ 18ರಂದು ಹೇಳಿರುವಂತೆ ಕೋವಿಡ್‌ನಿಂದ ಬಾಧಿತರಾಗಿರುವ ವಕೀಲರಿಗೆ ನೆರವಾಗುವ ಸಂಬಂಧ ರಾಜ್ಯ ವಕೀಲರ ಪರಿಷತ್‌ಗೆ ಐದು ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಸರ್ಕಾರ ಹೇಳಿದೆ. ಈ ಸಂಬಂಧ ಹಣ ಬಿಡುಗಡೆ ಮಾಡಲಾಗಿದೆಯೇ ಎಂಬುದರ ಕುರಿತು ಮಾಹಿತಿ ನೀಡಬೇಕು. ರಾಜ್ಯ ಸರ್ಕಾರದ ಉತ್ತರವು ಸಕಾರಾತ್ಮಕವಾಗಿರಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ವಕೀಲರ ಗುಮಾಸ್ತರನ್ನು ಪ್ರತಿನಿಧಿಸಿದ್ದ ವಕೀಲ ಮೂರ್ತಿ ನಾಯ್ಕ್‌ ಅವರು “ವಕೀಲರ ಗುಮಾಸ್ತರ ಕಲ್ಯಾಣ ನಿಧಿಯ ಖಾತೆ ತೆರೆಯುವ ಸಂಬಂಧ ಸರ್ಕಾರವು ಪ್ರತಿ ಬಾರಿಯೂ ಮೌಖಿಕವಾಗಿ ಹೇಳುತ್ತದೆ. ಯಾವುದನ್ನೂ ಜಾರಿಗೊಳಿಸಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪೀಠವು “ಈ ಸಂಬಂಧ ನಿರ್ದಿಷ್ಟ ಆದೇಶ ಹೊರಡಿಸಲಾಗುವುದು” ಎಂದು ಭರವಸೆ ನೀಡಿತು.

ಕೆಎಸ್‌ಬಿಸಿ ಪ್ರತಿನಿಧಿಸಿದ್ದ ವಕೀಲ ಜಿ ನಟರಾಜ್‌ ಅವರು “ರಾಜ್ಯ ಸರ್ಕಾರವು ಕೋವಿಡ್‌ನಿಂದ ಬಾಧಿತರಾದ ವಕೀಲರಿಗೆ ನೀಡಲು ಕೆಎಸ್‌ಬಿಸಿಗೆ ಐದು ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದೆ. ಈ ಪೈಕಿ, ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ 10 ಲಕ್ಷ ರೂಪಾಯಿ ವರ್ಗಾಯಿಸಲಾಗುವುದು. ನ್ಯಾಯಾಲಯದ ನಿರ್ದೇಶನದಂತೆ ಗುಮಾಸ್ತರ ಕಲ್ಯಾಣ ನಿಧಿಯ ಬ್ಯಾಂಕ್‌ ಖಾತೆ ತೆರೆಯುವ ಸಂಬಂಧ ಕೆಎಸ್‌ಬಿಸಿಯ ಇಬ್ಬರು ಮತ್ತು ರಾಜ್ಯ ಸರ್ಕಾರದ ಇಬ್ಬರು ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಖಾತೆ ತೆರೆದ ತಕ್ಷಣ 10 ಲಕ್ಷ ರೂಪಾಯಿ ವರ್ಗಾಯಿಸಲಾಗುವುದು. ಈ ಅನುದಾನವನ್ನು ಕೋವಿಡ್‌ನಿಂದ ಬಾಧಿತವಾಗಿರುವುದಕ್ಕೆ ಸೀಮಿತವಾಗಿ ಬಳಸಬೇಕೆ ವಿನಾ ಬೇರಾವುದಕ್ಕೂ ಅಲ್ಲ” ಎಂದರು.

Also Read
ವಕೀಲ ಗುಮಾಸ್ತರಿಗೆ ಹಣಕಾಸು ನೆರವು: ನೂತನ ಸಮಿತಿ ಖಾತೆ ತೆರೆಯುವುದನ್ನು ಖಾತ್ರಿಪಡಿಸಿಕೊಳ್ಳಿ ಎಂದ ಕರ್ನಾಟಕ ಹೈಕೋರ್ಟ್

“ಕಲ್ಯಾಣ ನಿಧಿಯ ಖಾತೆಯನ್ನು ನಿರ್ವಹಿಸುವವರು ಯಾರು” ಎಂದು ಪೀಠ ಪ್ರಶ್ನಿಸಿತು. ಆಗ ವಕೀಲ ನಟರಾಜ್‌ ಅವರು “ಕಲ್ಯಾಣ ನಿಧಿಯ ಖಾತೆಯನ್ನು ರಾಜ್ಯ ಸರ್ಕಾರ, ಅಡ್ವೊಕೇಟ್‌ ಜನರಲ್‌, ಕೆಎಸ್‌ಬಿಸಿ ಮತ್ತು ವಕೀಲರ ಗುಮಾಸ್ತರ ಕಲ್ಯಾಣ ಸಂಘಟನೆಯ ಪ್ರತಿನಿಧಿಗಳು ನಿರ್ವಹಿಸಲಿದ್ದಾರೆ” ಎಂದು ಹೇಳಿದರು.

ಬೆಂಗಳೂರು ವಕೀಲರ ಸಂಘವನ್ನು ಪ್ರತಿನಿಧಿಸಿದ್ದ ವಕೀಲ ಅನಿಲ್‌ ಕುಮಾರ್‌ ಅವರು “ಕೋವಿಡ್‌ನಿಂದ ಬಾಧಿತರಾದ ವಕೀಲರಿಗೆ ನೆರವಾಗುವ ದೃಷ್ಟಿಯಿಂದ ಜೂನ್‌ 18ರಂದು ಐದು ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಹಣ ಬಿಡುಗಡೆ ಮಾಡಲಾಗಿದೆಯೋ, ಇಲ್ಲವೋ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ” ಎಂದರು. ಈ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದ ಪೀಠವು ಮುಂದಿನ ವಿಚಾರಣೆಯ ಒಳಗೆ ಸಕಾರತ್ಮಕ ಉತ್ತರ ನೀಡುವಂತೆ ನಿರ್ದೇಶಿಸಿತು.

Related Stories

No stories found.
Kannada Bar & Bench
kannada.barandbench.com