[ಕನ್ನಡ ಕಡ್ಡಾಯ] ಮುಂದಿನ ವಿಚಾರಣೆಯವರೆಗೆ ಒತ್ತಾಯಪೂರ್ವಕ ಕ್ರಮಕ್ಕೆ ಮುಂದಾಗದಿರಲು ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ವಿದ್ಯಾರ್ಥಿಗಳ ದಾಖಲಾತಿ ಮಾಹಿತಿ ಸಲ್ಲಿಸಲು ವಿವಿಧ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯಗಳಿಂದ ಸೂಚನೆ. ಕನ್ನಡೇತರ ಭಾಷಾ ವಿಷಯ ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ದಾಖಲಾತಿ ಸಲ್ಲಿಕೆಯ ಬಗ್ಗೆ ಗೊಂದಲದಲ್ಲಿರುವ ಶಿಕ್ಷಣ ಸಂಸ್ಥೆಗಳು.
Kannada and Karnataka High Court
Kannada and Karnataka High Court

ಕನ್ನಡವನ್ನು ಒಂದು ಭಾಷೆಯಾಗಿ ಪದವಿ ಹಂತದಲ್ಲಿ ಕಡ್ಡಾಯವಾಗಿ ಕಲಿಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಅನ್ವಯ ಮುಂದಿನ ವಿಚಾರಣೆಯವರೆಗೆ ಯಾವುದೇ ಒತ್ತಾಯಪೂರ್ವಕ ಕ್ರಮವನ್ನು ಅನುಸರಿಸದಂತೆ ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳಿಗೆ ಸೋಮವಾರ ಸೂಚಿಸಿದೆ.

ಪದವಿ ಹಂತದಲ್ಲಿ ಭಾಷೆಯಾಗಿ ಕನ್ನಡ ಕಡ್ಡಾಯ ಕಲಿಕೆಯ ಆದೇಶವನ್ನು ವಿರೋಧಿಸಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್‌, ಮಹಾವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕ ಸಂಘ, ಶ್ರೀ ಹಯಗ್ರೀವಾ ಟ್ರಸ್ಟ್‌, ವ್ಯೋಮಾ ಲಿಂಗ್ವಿಸ್ಟಿಕ್‌ ಲ್ಯಾಬ್ಸ್‌ ಫೌಂಡೇಶನ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಮನವಿಯು ಮುಖ್ಯ ನ್ಯಾಯಮೂರ್ತಿ ರಿತು ರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಈ ಹಿಂದಿನ ವಿಚಾರಣೆ ವೇಳೆ ಪೀಠವು, ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿರುವ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ತನ್ನ ನಿಲುವು ಸ್ಪಷ್ಟಪಡಿಸಿ ಅಫಿಡವಿಟ್‌ ಸಲ್ಲಿಸಬೇಕು ಎಂದು ಸೂಚಿಸಿತ್ತು. ಆದರೆ, ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (ಎಎಸ್‌ಜಿ) ಎಂ ಬಿ ನರಗುಂದ್ ಅವರು ಕೇಂದ್ರ ಸರ್ಕಾರದಿಂದ ಸೂಚನೆ ಪಡೆದು ಮಾಹಿತಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶದ ಅಗತ್ಯವನ್ನು ಕೋರಿದರು.

Also Read
[ಕನ್ನಡ ಕಡ್ಡಾಯ] ರಾತ್ರೋರಾತ್ರಿ ನಿರ್ಧಾರವಲ್ಲ, ಬಹುದಿನಗಳ ಬೇಡಿಕೆ: ಎ ಜಿ ಪ್ರಭುಲಿಂಗ ನಾವದಗಿ ಸಮರ್ಥನೆ

ಈ ನಡುವೆ ಸಂಸ್ಕೃತ ಹಾಗೂ ಆಂಗ್ಲ ಭಾಷೆಗಳನ್ನು ಪದವಿಯಲ್ಲಿ ಭಾಷಾ ವಿಷಯವಾಗಿ ಆರಿಸಿಕೊಳ್ಳಲು ಬಯಸಿರುವ ಬಸವನಗುಡಿಯ ವಿಜಯಾ ಕಾಲೇಜಿನ ಕೆಲ ವಿದ್ಯಾರ್ಥಿಗಳು ಸರ್ಕಾರದ ಆದೇಶದಿಂದಾಗಿ ಎದುರಿಸುತ್ತಿರುವ ತೊಂದರೆಯನ್ನು ಈ ವಿದ್ಯಾರ್ಥಿಗಳ ಪರ ಹಾಜರಿದ್ದ ವಕೀಲ ಶ್ರೀಧರ ಪ್ರಭು ಅವರು ಪೀಠದ ಗಮನಕ್ಕೆ ತಂದರು. ಸರ್ಕಾರದ ಆದೇಶದ ಅನ್ವಯ ವಿದ್ಯಾರ್ಥಿಗಳು ಬಲವಂತವಾಗಿ ಕನ್ನಡವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಎನ್ನುವ ಅಂಶವನ್ನು ಮಂಡಿಸಿದರು.

ಇನ್ನು ಸಂಸ್ಕೃತ ಭಾರತಿ ಟ್ರಸ್ಟ್‌ ಮತ್ತಿತರ ಅರ್ಜಿದಾರರ ಪರ ಹಾಜರಾದ ವಕೀಲ ಎ ಎಸ್‌ ನಾಗಾನಂದ್ ಅವರು ವಿವಿಧ ವಿಶ್ವವಿದ್ಯಾಲಯಗಳು ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಪ್ರವೇಶದ ದಾಖಲಾತಿಯನ್ನು ಅಂತಿಮಗೊಳಿಸುತ್ತಿದ್ದು ಇದಕ್ಕಾಗಿ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಗಳ ದಾಖಲಾತಿ ಪತ್ರವನ್ನು ಸಲ್ಲಿಸುವಂತೆ ಸೂಚಿಸಿವೆ. ಕನ್ನಡ ಭಾಷೆಯ ಹೊರತಾಗಿ ಬೇರೆ ಭಾಷೆಯನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ದಾಖಲಾತಿಯನ್ನು ಸಲ್ಲಿಸುವಲ್ಲಿ ಸಮಸ್ಯೆ ಎದುರಾಗಿದೆ ಎಂದು ಪೀಠಕ್ಕೆ ತಿಳಿಸಿದರು.

Also Read
ಕನ್ನಡ ಕಡ್ಡಾಯಕ್ಕೆ ಎದುರಾಗಿರುವ ಆಕ್ಷೇಪಣೆಗಳು ಅಸಮರ್ಥನೀಯವೆಂದ ರಾಜ್ಯ ಸರ್ಕಾರ; ಇಲ್ಲಿದೆ ವಾದದ ಪ್ರಮುಖಾಂಶಗಳು

ಈ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯವರೆಗೆ ಕನ್ನಡ ಕಲಿಕೆಗೆ ಸಂಬಂಧಿಸಿದಂತೆ ಯಾವುದೇ ಒತ್ತಾಯಪೂರ್ವಕ ಕ್ರಮಕ್ಕೆ ಮುಂದಾಗದಂತೆ ರಾಜ್ಯ ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳಿಗೆ ನಿರ್ದೇಶಿಸಿದ ಪೀಠವು ಪ್ರಕರಣವನ್ನು ಡಿ.16ಕ್ಕೆ ಮುಂದೂಡಿತು. ಮುಂದಿನ ವಿಚಾರಣೆ ವೇಳೆಗೆ ಕೇಂದ್ರದಿಂದ ಮಾಹಿತಿ ಪಡೆದು ಅಫಿಡವಿಟ್‌ ಸಲ್ಲಿಸುವಂತೆ ಎಎಸ್‌ಜಿ ಅವರಿಗೆ ಸೂಚಿಸಿತು.

Related Stories

No stories found.
Kannada Bar & Bench
kannada.barandbench.com