ಮಾತೃತ್ವ ರಜೆಯನ್ನು ದೀರ್ಘಕಾಲದ ಅನಧಿಕೃತ ಗೈರಿಗೆ ಗುರಾಣಿಯಾಗಿಸಿಕೊಳ್ಳುವಂತಿಲ್ಲ: ಹೈಕೋರ್ಟ್

ಮಾತೃತ್ವ ರಜೆಯ ಅವಧಿ ಪೂರ್ಣಗೊಂಡ ಬಳಿಕವೂ ಅನುಮತಿಯಿಲ್ಲದೆ ದೀರ್ಘಕಾಲ ಕರ್ತವ್ಯಕ್ಕೆ ಗೈರಾಗಿದ್ದ ಉದ್ಯೋಗಿಗೆ ಮರುನೇಮಕದ ಪರಿಹಾರ ನೀಡಲಾಗದು ಎಂದು ಪೀಠ ಹೇಳಿದೆ.
Justice M Nagaprasanna and Karnataka HC
Justice M Nagaprasanna and Karnataka HC
Published on: 

ಮಾತೃತ್ವ ರಜೆಯನ್ನು ದೀರ್ಘಕಾಲದ ಅನಧಿಕೃತ ಗೈರುಹಾಜರಿಗೆ 'ಅನುಕೂಲಕರ ಗುರಾಣಿ'ಯಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದು ಈಚೆಗೆ ಸ್ಪಷ್ಟಪಡಿಸಿರುವ ಕರ್ನಾಟಕ ಹೈಕೋರ್ಟ್, ಕರ್ತವ್ಯಕ್ಕೆ ನಿರಂತರವಾಗಿ ಗೈರಾಗಿದ್ದ ಮಹಿಳಾ ಸಾಫ್ಟ್‌ವೇರ್ ತಂತ್ರಜ್ಞೆಯೊಬ್ಬರನ್ನು ಸೇವೆಯಿಂದ ಬಿಡುಗಡೆಗೊಳಿಸಿದ ಕ್ರಮವನ್ನು ಎತ್ತಿಹಿಡಿದಿದೆ.

ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಅಕ್ಟೋಬರ್ 16ರಂದು ಈ ಆದೇಶ ನೀಡಿದ್ದು, ಸೇವೆಯಿಂದ ಬಿಡುಗಡೆಗೊಳಿಸಿದ ಕ್ರಮ ಪ್ರಶ್ನಿಸಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

“ಮಾತೃತ್ವ ರಜೆಯು ಘನತೆ, ಮಾತೃತ್ವ ಮತ್ತು ಸಾಮಾಜಿಕ ಸಮಾನತೆಯ ಕುರಿತಾದ ಸಾಂವಿಧಾನಿಕ ಬದ್ಧತೆಯಾಗಿದೆ. ಆದರೆ, ಯಾವುದೇ ಹಕ್ಕು ಪವಿತ್ರವಾಗಿದ್ದರೂ, ಅದು ಅನಧಿಕೃತ ಗೈರುಹಾಜರಿಗೆ ಅಕ್ಷಯ ಪಾತ್ರೆಯಾಗುವಂತೆ ಅದರ ಕಾನೂನುಬದ್ಧ ಮಿತಿಗಳನ್ನು ಮೀರಿ ವಿಸ್ತರಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರು ಕಾನೂನುಬದ್ಧವಾಗಿ ಪಡೆಯಬೇಕಿದ್ದ ಮಾತೃತ್ವ ರಜೆಯನ್ನು ಪೂರ್ಣವಾಗಿ ಬಳಸಿಕೊಂಡಿದ್ದರು. ಆ ಬಳಿಕ ಇತರ ವರ್ಗಗಳ ರಜೆಗಳನ್ನೂ ಪಡೆದಿದ್ದರು. ಆ ರಜೆಗಳ ಅವಧಿ ಮುಗಿದ ನಂತರವೂ ಯಾವುದೇ ಅಧಿಕೃತ ಅನುಮತಿಯಿಲ್ಲದೆ ದೀರ್ಘಕಾಲ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂಬುದು ದಾಖಲೆಗಳಿಂದ ಸ್ಪಷ್ಟವಾಗುತ್ತದೆ ಎಂದು ಪೀಠ ತಿಳಿಸಿದೆ.

ಸರ್ಕಾರಿ ಉದ್ಯೋಗವು ಜವಾಬ್ದಾರಿಯುತ ಸ್ಥಾನವಾಗಿದ್ದು, ಕರ್ತವ್ಯನಿಷ್ಠೆ ಮತ್ತು ಶಿಸ್ತನ್ನು ನಿರೀಕ್ಷಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

“ಅರ್ಹರಾದ ಅಸಂಖ್ಯಾತ ಯುವಕರು ಸರ್ಕಾರಿ ಉದ್ಯೋಗಕ್ಕಾಗಿ ಹಾತೊರೆಯುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ದೊರೆತ ಅವಕಾಶವನ್ನು ಯಾರೂ ಉದಾಸೀನದಿಂದ ಪರಿಗಣಿಸಬಾರದು. ಮಗುವಿನ ಜನನವನ್ನು ಕಾರಣವಾಗಿಟ್ಟುಕೊಂಡು ಸರ್ಕಾರಿ ಉದ್ಯೋಗದ ಜವಾಬ್ದಾರಿಗಳಿಂದ ಶಾಶ್ವತವಾಗಿ ದೂರ ಉಳಿಯಲು ಅವಕಾಶವಿಲ್ಲ” ಎಂದು ಪೀಠ ಅಭಿಪ್ರಾಯಪಟ್ಟಿದೆ.

ಅರ್ಜಿದಾರರಿಗೆ ಕಾನೂನುಬದ್ಧವಾಗಿ ದೊರೆಯಬೇಕಿದ್ದ ಮಾತೃತ್ವ ರಜೆಯನ್ನು ನಿರಾಕರಿಸಲಾಗಿರಲಿಲ್ಲ. ಆದರೆ, ಆ ರಜೆಗಳ ಅವಧಿ ಮುಗಿದ ಬಳಿಕದ ಅನಧಿಕೃತ ಗೈರುಹಾಜರಿಯನ್ನು ಸಮರ್ಥಿಸಿಕೊಳ್ಳಲು ಮಾತೃತ್ವ ರಜೆಯನ್ನು ಅಸ್ತ್ರವನ್ನಾಗಿ ಬಳಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರು 2019ರ ಜೂನ್ 6ರಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಸಾಫ್ಟ್‌ವೇರ್ ತಂತ್ರಜ್ಞೆಯಾಗಿ ಪ್ರೊಬೇಷನರಿ ಆಧಾರದ ಮೇಲೆ ನೇಮಕಗೊಂಡಿದ್ದರು. 2023ರ ಜುಲೈ 1ರಂದು ಮಾತೃತ್ವ ರಜೆ ಪಡೆದಿದ್ದ ಅವರು, ವಿವಿಧ ಕಾರಣಗಳನ್ನು ಮುಂದಿಟ್ಟು ರಜೆಯನ್ನು ವಿಸ್ತರಿಸಿಕೊಳ್ಳುತ್ತಾ 2024ರ ಆಗಸ್ಟ್ 14ರವರೆಗೆ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ.

2024ರ ಸೆಪ್ಟೆಂಬರ್ 25ರಂದು ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಕೆಲಸಕ್ಕೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಅರ್ಜಿದಾರರು, ಮಗುವಿನ ಆರೈಕೆ ಮಾಡಲು ಕುಟುಂಬದಲ್ಲಿ ಬೇರೆ ಯಾರೂ ಇಲ್ಲದಿರುವುದು ಹಾಗೂ ಪದೇಪದೇ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರುವುದರಿಂದ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು. ಅಲ್ಲದೆ, ರಜೆಯನ್ನು ಮತ್ತಷ್ಟು ವಿಸ್ತರಿಸುವಂತೆ ಮನವಿ ಮಾಡಿದ್ದರು.

ಅರ್ಜಿದಾರರು ಇನ್ನೂ ಪ್ರೊಬೇಷನರಿ ಅವಧಿಯಲ್ಲಿದ್ದು, ಪದೇಪದೇ ರಜೆ ವಿಸ್ತರಣೆಗೆ ಕೋರಿಕೆ ಸಲ್ಲಿಸುತ್ತಿರುವುದರ ಜತೆಗೆ ಕರ್ತವ್ಯಕ್ಕೂ ಹಾಜರಾಗುತ್ತಿಲ್ಲ ಎಂಬ ಕಾರಣಕ್ಕೆ ಅವರು ಹುದ್ದೆಗೆ ಸೂಕ್ತರಲ್ಲ ಎಂದು ಪರಿಗಣಿಸಲಾಯಿತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ 2025ರ ಏಪ್ರಿಲ್ 15ರಂದು ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮಾತೃತ್ವ ರಜೆಯ ಅವಧಿಯಲ್ಲಿ ತಮ್ಮ ಕಕ್ಷಿದಾರರನ್ನು ಸೇವೆಯಿಂದ ಬಿಡುಗಡೆಗೊಳಿಸಿರುವುದು ಕಾನೂನುಬಾಹಿರ ಎಂದು ವಾದಿಸಿದ್ದರು.

ಪ್ರೊಬೇಷನ್ ನಿಯಮಗಳ ಪ್ರಕಾರ, ಅನಧಿಕೃತ ಗೈರುಹಾಜರಿಯ ಆರೋಪವಿದ್ದರೂ ಸಂಬಂಧಪಟ್ಟ ಉದ್ಯೋಗಿಯ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕಾಗುತ್ತದೆ. ಮಾತೃತ್ವ ರಜೆಯಲ್ಲಿದ್ದ ಕಾರಣದಿಂದಲೇ ಅರ್ಜಿದಾರರಿಗೆ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಪ್ರಕರಣವನ್ನು ಸಹಾನುಭೂತಿಯಿಂದ ಪರಿಗಣಿಸಿ ಅವರನ್ನು ಸೇವೆಯಲ್ಲಿ ಮುಂದುವರಿಸಲು ನಿರ್ದೇಶನ ನೀಡಬೇಕು ಎಂದು ಕೋರಿದ್ದರು.

ಇದಕ್ಕೆ ಆಕ್ಷೇಪಿಸಿದ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಪರ ವಕೀಲರು, ಅರ್ಜಿದಾರರು ಸರ್ಕಾರಿ ಉದ್ಯೋಗವನ್ನು ಹಗುರವಾಗಿ ಪರಿಗಣಿಸಬಾರದು ಎಂದು ವಾದಿಸಿದ್ದರು.

ಅರ್ಜಿದಾರರಿಗೆ ಒಟ್ಟು 13 ತಿಂಗಳ ಕಾಲ ಮಾತೃತ್ವ ರಜೆ ಮಂಜೂರು ಮಾಡಲಾಗಿತ್ತು. ರಜೆಯ ಅವಧಿ ಮುಗಿದ ಬಳಿಕವೂ ಅವರು ಸೇವೆಗೆ ಮರಳಿರಲಿಲ್ಲ. ಕರ್ತವ್ಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಿದರೂ ಅದನ್ನು ಪಾಲಿಸಿರಲಿಲ್ಲ. ಅವರು ಪ್ರೊಬೇಷನರಿ ಉದ್ಯೋಗಿಯಾಗಿದ್ದ ಹಿನ್ನೆಲೆಯಲ್ಲಿ, ಹುದ್ದೆಯಲ್ಲಿ ಮುಂದುವರಿಯಲು ಸೂಕ್ತರಲ್ಲ ಎಂದು ಪರಿಗಣಿಸಿ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ವಾದಗಳನ್ನು ಪರಿಗಣಿಸಿದ ನ್ಯಾಯಾಲಯವು, ಮಾತೃತ್ವ ರಜೆಯ ಹಕ್ಕು ಮತ್ತು ಆ ರಜೆಯ ಅವಧಿ ಮುಗಿದ ನಂತರ ಕರ್ತವ್ಯಕ್ಕೆ ಹಾಜರಾಗುವ ಜವಾಬ್ದಾರಿಯನ್ನು ಪ್ರತ್ಯೇಕವಾಗಿ ನೋಡಬೇಕು ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.

Attachment
PDF
Monika Vs Registrar General of HCK
Preview
Kannada Bar & Bench
kannada.barandbench.com