ದಲಿತ ಸಮುದಾಯದವರ ಮನೆಗಳಿಗೆ ಬೆಂಕಿ ಹಚ್ಚಿದ ಆರೋಪದ ಮೇಲೆ ಕೊಪ್ಪಳದ ಗಂಗಾವತಿ ತಾಲ್ಲೂಕಿನ ಮರಕುಂಬಿ ಗ್ರಾಮದ ಮೇಲ್ಜಾತಿಯ 98 ಮಂದಿಗೆ ಕೊಪ್ಪಳ ಜಿಲ್ಲಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಬುಧವಾರ ಅಮಾನತುಗೊಳಿಸಿರುವ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು 97 ಮಂದಿಗೆ ಜಾಮೀನು ಮಂಜೂರು ಮಾಡುವ ಮೂಲಕ ಮಹತ್ವದ ಆದೇಶ ಮಾಡಿದೆ. ಇದಲ್ಲದೇ ಐದು ವರ್ಷ ಶಿಕ್ಷೆಗೆ ಗುರಿಯಾಗಿದ್ದವರಲ್ಲಿ ಇನ್ನಿಬ್ಬರಿಗೂ ಜಾಮೀನು ಮಂಜೂರಾಗಿದೆ. ಹೀಗಾಗಿ, ಒಟ್ಟಾರೆ 99 ಮಂದಿಗೆ ಜಾಮೀನು ಮಂಜೂರಾಗಿದೆ.
ಪ್ರಕರಣದಲ್ಲಿ 4ನೇ ಆರೋಪಿಯಾಗಿರುವ ಪಂಪಾವತಿ ಸೇರಿದಂತೆ ಇತರೆ ಆರೋಪಿಗಳ ಪರವಾಗಿ ಪ್ರತ್ಯೇಕವಾಗಿ ಸಲ್ಲಿಕೆಯಾಗಿದ್ದ10 ಕ್ರಿಮಿನಲ್ ಮೇಲ್ಮನವಿಗಳನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಟಿ ಜಿ ಶಿವಶಂಕರೇಗೌಡ ಅವರ ವಿಭಾಗೀಯ ಪೀಠ ಪುರಸ್ಕರಿಸಿದೆ.
ಎಲ್ಲಾ ಅರ್ಜಿದಾರರು ಒಂದು ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಭದ್ರತೆ ಒದಗಿಸಬೇಕು. ವಿಚಾರಣಾಧೀನ ನ್ಯಾಯಾಲಯ ವಿಧಿಸಿರುವ ದಂಡದ ಮೊತ್ತವನ್ನು ಪಾವತಿಸಬೇಕು ಎಂದು ಹೈಕೋರ್ಟ್ ಷರತ್ತು ವಿಧಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಅರ್ಜಿದಾರರ ಪರವಾಗಿ ವಕೀಲರಾದ ಸಂತೋಷ್ ಬಿ ಮಲಗೌಡರ್, ಎಸ್ ಕೆ ಹಿರೇಮಠ, ಆನಂದ್ ಆರ್. ಕೊಳ್ಳಿ, ಈರನಗೌಡ ಕೆ. ಕಬ್ಬೂರ್, ನೀಲೇಂದ್ರ ಡಿ.ಗುಂಡೆ, ಹನುಮೇಶ್ ಎಂ. ದೇಸಾಯಿ, ಅವಿನಾಶ್ ಎಂ. ಅಂಗಡಿ, ವಿನಯ್‌ಕುಮಾರ್ ಎಂ ಶೆಟ್ಟಿ, ಬಿ ಸಿ ಜ್ಞಾನಯ್ಯ ಸ್ವಾಮಿ, ವಿ ಎಂ ಶೀಲವಂತ ಮತ್ತು ಎ ಸಿ ಚಾಕಲಬ್ಬಿ ಅಸೋಸಿಯೇಟ್ಸ್ ವಕಾಲತ್ತು ಹಾಕಿದ್ದರು.
ಮೊದಲನೇ ಆರೋಪಿ ಮಂಜುನಾಥ್ ಹೊರತುಪಡಿಸಿ ಉಳಿದವರಿಗೆ ಜಾಮೀನು ಮಂಜೂರಾಗಿದೆ.
ಪ್ರಕರಣದ ಹಿನ್ನೆಲೆ: ಮರಕುಂಬಿಯ ಮೇಲ್ಜಾತಿಗೆ ಸೇರಿದ ಮಂಜುನಾಥ್ ಮತ್ತು ಇತರರು 'ಪವರ್' ಸಿನಿಮಾ ವೀಕ್ಷಿಸಲು ಗಂಗಾವತಿಯ ಶಿವ ಟಾಕೀಸ್‌ಗೆ ತೆರಳಿದ್ದರು. ಟಿಕೆಟ್ ಖರೀದಿಸುವ ವೇಳೆ ಬೇರೆಯವರೊಂದಿಗೆ ಕಲಹ ಉಂಟಾಗಿ ಉಭಯರು ಥಳಿಸಿಕೊಂಡಿದ್ದರು. ಈ ಘಟನೆಯ ಹಿಂದೆ ಮರಕುಂಬಿಯ ದಲಿತರು ಇದ್ದಾರೆ ಎಂದು ಭಾವಿಸಿದ ಮಂಜುನಾಥ್ ಊರಿಗೆ ತೆರಳಿ ವಿಚಾರ ತಿಳಿಸಿದ್ದನು. ಇದರಿಂದ ರೊಚ್ಚಿಗೆದ್ದ ಮಂಜುನಾಥ್ ಮತ್ತು ಇತರರು 28.08.2014ರಂದು ಮರಕುಂಬಿಯ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದವರನ್ನು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ, ಅವರ ಮನೆಗಳಿಗೆ ಬೆಂಕಿ ಹಚ್ಚಿ, ಅಲ್ಲಿನ ನಿವಾಸಿಗಳ ಮೇಲೆ ಕಲ್ಲು, ಇಟ್ಟಿಗೆ, ದೊಣ್ಣೆಯಿಂದ ಹಲ್ಲೆ ನಡೆಸಿದ್ದರು.
ಘಟನೆಯಲ್ಲಿ ಮಾದಿಗ ಸಮುದಾಯದ ಮಹಿಳೆಯರು, ಪುರುಷರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಭೀಮಯ್ಯ ಅವರು ಜಾತಿ ನಿಂದನೆ, ಮಹಿಳೆಯರ ಘನತೆಗೆ ಹಾನಿ, ಮನೆಗಳಿಗೆ ಬೆಂಕಿ ಹಚ್ಚಿರುವುದು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪದ ಮೇಲೆ 117 ಮಂದಿಯ ವಿರುದ್ಧ ದೂರು ದಾಖಲಿಸಿದ್ದರು. ಇದನ್ನು ಆಧರಿಸಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್‌ಸಿ, ಎಸ್‌ಟಿ, ದೌರ್ಜನ್ಯ ತಡೆ ಕಾಯಿದೆ ಅಡಿ ದಲಿತ ಸಮುದಾಯದವರ ಮನೆಗೆ ಬೆಂಕಿ ಹಚ್ಚಿರುವುದು ಸಾಬೀತಾಗಿದೆ ಎಂದು ಕೊಪ್ಪಳ ಜಿಲ್ಲಾ ನ್ಯಾಯಾಲಯವು 2024ರ ಅಕ್ಟೋಬರ್ 21ರಂದು 98 ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹5,000 ದಂಡ ವಿಧಿಸಿತ್ತು.