ರೇಣುಕಾಸ್ವಾಮಿ ಹತ್ಯೆ: ಏಳು ಆರೋಪಿಗಳ ಜಾಮೀನು ಆದೇಶ ಕಾಯ್ದಿರಿಸಿದ ಹೈಕೋರ್ಟ್‌; ದರ್ಶನ್‌ ವೈದ್ಯಕೀಯ ಜಾಮೀನು ವಿಸ್ತರಣೆ

ದರ್ಶನ್‌ಗೆ ಡಿಸೆಂಬರ್‌ 11ರಂದು ಬೆನ್ನಿನ ಕೆಳಭಾಗದಲ್ಲಿನ ಬೆನ್ನುಹುರಿ ಮತ್ತು ನರಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ನಿರ್ಧರಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಹಿರಿಯ ವಕೀಲ ಸಿ ವಿ ನಾಗೇಶ್‌.
Actor Darshan, Pavitra Gowda & Karnataka HC
Actor Darshan, Pavitra Gowda & Karnataka HC
Published on

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌, ಪವಿತ್ರಾಗೌಡ, ಆರ್‌ ನಾಗರಾಜು, ಎಂ ಲಕ್ಷ್ಮಣ್, ಅನು ಕುಮಾರ್‌ ಅಲಿಯಾಸ್‌ ಅನು, ಜಗದೀಶ್‌ ಅಲಿಯಾಸ್‌ ಜಗ್ಗ, ಪ್ರದೋಷ್‌ ರಾವ್‌ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ಪೂರ್ಣಗೊಳಿಸಿದೆ. ಅಲ್ಲದೇ, ದರ್ಶನ್‌ ಜಾಮೀನು ಅರ್ಜಿ ಆದೇಶ ಪ್ರಕಟಿಸುವವರೆಗೆ ಅವರಿಗೆ ಅಕ್ಟೋಬರ್‌ 30ರಂದು ಮಂಜೂರು ಮಾಡಿರುವ ವೈದ್ಯಕೀಯ ಜಾಮೀನು ಆದೇಶ ಮುಂದುವರಿಯಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸರಿ ಸುಮಾರು ಎರಡು ತಾಸು ಪ್ರಾಸಿಕ್ಯೂಷನ್‌ ಮತ್ತು ಅರ್ಜಿದಾರರ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠವು ಜಾಮೀನು ಅರ್ಜಿಗಳ ಆದೇಶ ಕಾಯ್ದಿರಿಸಿತು.

ಕಳೆದ ವಿಚಾರಣೆಯಲ್ಲಿ ರಾಜ್ಯ ಸರ್ಕಾರದ ಪರವಾಗಿ ವಾದಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್‌ ಅವರು ದರ್ಶನ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿರುವುದಕ್ಕೆ ಆಕ್ಷೇಪಿಸಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ ದರ್ಶನ್‌ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ದರ್ಶನ್‌ ಎಂದು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ನಿರ್ಧರಿಸಬೇಕಾದವರು ವೈದ್ಯರೇ ವಿನಾ ದರ್ಶನ್‌ ಅಲ್ಲ. ಅದಾಗ್ಯೂ, ದರ್ಶನ್‌ಗೆ ಡಿಸೆಂಬರ್‌ 11ರಂದು ಬೆನ್ನಿನ ಕೆಳಭಾಗದಲ್ಲಿ ಬೆನ್ನುಹುರಿ ಮತ್ತು ನರಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ (Lumbar decompression & fusion) ಮಾಡಲು ನಿರ್ಧರಿಸಲಾಗಿದೆ” ಎಂದು ತಿಳಿಸಿರುವ ವೈದ್ಯರ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

“ರೇಣುಕಾಸ್ವಾಮಿಯ ವೃಷಣಕ್ಕೆ ತೀವ್ರ ಏಟು ಬಿದ್ದಿದ್ದರಿಂದ ರಕ್ತ ಸೋರಿಕೆಯಾಗಿದೆ. ಎಲ್ಲಾ 14 ಆರೋಪಿಗಳ ಬಟ್ಟೆಯಲ್ಲಿ ರಕ್ತ ಕಲೆ ಇದೆ ಎಂದು ಹೇಳಿರುವುದು, ಅಲ್ಲಿ ರಕ್ತದ ಕಾರಂಜಿ ಇತ್ತು ಎನ್ನುವಂತಿದೆ. ರೇಣುಕಾಸ್ವಾಮಿಯ ದೇಹದಲ್ಲಿ ಪತ್ತೆಯಾಗಿರುವುದು ಒಂದೇ ಒಂದು 2.5 ಸೆಂಟಿ ಮೀಟರ್‌ ಗಾಯ ಮಾತ್ರ. ಉಳಿದವು ತರಚಿದ ಮಾದರಿಯ ಗಾಯಗಳು. ಇದನ್ನು ವೈದ್ಯರು ತಮ್ಮ ಮರಣೋತ್ತರ ವರದಿಯಲ್ಲಿ ಉಲ್ಲೇಖಿಸಬೇಕಿತ್ತು. 10-15 ತರಚಿದ ಗಾಯಗಳಿಂದ ರಕ್ತ ಬಂದಿದೆ ಎಂದು ಹೇಳಬೇಕಿತ್ತು. ಆದರೆ, ತನಿಖಾಧಿಕಾರಿ ಪ್ರಶ್ನೆ ಎತ್ತಿದ ಮೇಲೆ ಆಗಸ್ಟ್‌ 23ರಂದು ರಕ್ತ ಸೋರಿಕೆಯಾಗಿದೆ ಎಂದು ವರದಿ ನೀಡಿದ್ದಾರೆ. ಇದಕ್ಕೆ ಆಧಾರವೇನು? ಇಲ್ಲಿ ಸಕಾರಣವಿರಬೇಕಿತ್ತು. ತನಿಖಾಧಿಕಾರಿಗೆ ನೆರವಾಗುವ ರೀತಿಯಲ್ಲಿ ವೈದ್ಯರು ಮರಣೋತ್ತರ ಪರೀಕ್ಷೆಯನ್ನು ರೂಪಿಸಿದ್ದಾರೆ. ಎಲ್ಲವನ್ನೂ ಸೃಷ್ಟಿಸಲಾಗಿದೆ” ಎಂದು ಆಕ್ಷೇಪಿಸಿದರು.

“76ನೇ ಸಾಕ್ಷಿ ಕಾವಲುಗಾರನ ಹೇಳಿಕೆ ದಾಖಲಿಸಿಲ್ಲ. ಹೇಳಿಕೆ ದಾಖಲಿಸಲು ಏಕೆ ತಡವಾಗಿದೆ ಎಂಬುದಕ್ಕೆ ತನಿಖಾಧಿಕಾರಿ ವಿವರಣೆ ನೀಡಿಲ್ಲ. 91ನೇ ಸಾಕ್ಷಿಯಾದ ಪುನೀತ್‌ ಎಂಬಾತ ಬೆಂಗಳೂರಿನಲ್ಲಿದ್ದ ಎಂಬುದಕ್ಕೆ ಪ್ರಾಸಿಕ್ಯೂಷನ್‌ ಎರಡು ಮೊಬೈಲ್‌ಗಳನ್ನು ಸೃಷ್ಟಿಸುವ ಮೂಲಕ ಸಾಕ್ಷ್ಯ ತಿರುಚಿದ್ದಾರೆ. ಒಂದು ಮೊಬೈಲ್‌ ಫೋನ್‌ ಅನ್ನು ಪುನೀತನ ಮನೆಯಲ್ಲಿ ಇಡಲಾಗಿತ್ತು. ಇನ್ನೊಂದನ್ನು ಪುನೀತ್‌ಗೆ ನೀಡಲಾಗಿದೆ. ಇಲ್ಲಿ ಪುನೀತ್‌ ತಿರುಪತಿ, ತಮಿಳುನಾಡಿಗೆ ಹೋಗಿರುವುದಕ್ಕೆ ಯಾವುದೇ ದಾಖಲೆ ಇಲ್ಲ. ಆತನ ಹೇಳಿಕೆಯನ್ನು ತಡವಾಗಿ ದಾಖಲಿಸಲಾಗಿದೆ ಎಂಬುಕ್ಕೆ ಸಬೂಬಿಗೆ ಉತ್ತರಿಸಲು ಈ ಕತೆ ಹೆಣೆಯಲಾಗಿದೆ. ಜೂನ್‌ 8ರಂದು ರೇಣುಕಾಸ್ವಾಮಿ ಸಾವನ್ನಪ್ಪುದಕ್ಕೂ ಮುನ್ನ ಎರಡು ತಾಸು ಮುಂಚಿತವಾಗಿ ಊಟ ಸೇವಿಸಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು ಹೇಳಿದ್ದಾರೆ. ಆದರೆ, ರೇಣುಕಾಸ್ವಾಮಿಗೆ ಊಟ ತಂದರು ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆಯೇ ವಿನಾ ಆತ ಅದನ್ನು ಸೇವಿಸಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಆದರೆ, ರೇಣುಕಾಸ್ವಾಮಿ ಕೊನೆಯ ಬಾರಿಗೆ ಊಟ ಮಾಡಿರುವುದು ಜೂನ್‌ 8ರ ಮಧ್ಯಾಹ್ನ 12ರ ಸುಮಾರಿಗೆ ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ದುರ್ಗಾ ರೆಸ್ಟೋರೆಂಟ್‌ನಲ್ಲಿ ಎಂಬುದಕ್ಕೆ ಸಾಕ್ಷಿ ಇದೆ. ಇದಕ್ಕೆ ರೇಣುಕಾಸ್ವಾಮಿಯೇ ಹಣ ಪಾವತಿಸಿದ್ದಾರೆ. ಒಟ್ಟಾರೆ ಪ್ರಾಸಿಕ್ಯೂಷನ್‌ ವಾದ ತರ್ಕಹೀನ” ಎಂದರು.

ಆಗ ಮಧ್ಯಪ್ರವೇಶಿಸಿದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್‌ ಅವರು “ನಾಗೇಶ್‌ ಅವರ ವಾದವನ್ನು ನೋಡಿದರೆ ರೇಣುಕಾಸ್ವಾಮಿಯ ಕೊಲೆಯೇ ಆಗಿಲ್ಲ ಎನ್ನುವಂತಿದೆ ಇವರ ವಾದ. ರೇಣುಕಾಸ್ವಾಮಿ ಏನಾದರೂ ನ್ಯಾಯಾಲಯಕ್ಕೆ ಬಂದಿದ್ದಾರಾ ಎನಿಸುತ್ತಿದೆ” ಎಂದರು.

ದರ್ಶನ್‌ ವ್ಯವಸ್ಥಾಪಕ, 11ನೇ ಆರೋಪಿಯಾಗಿರುವ ಆರ್‌ ನಾಗರಾಜು ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಎಲ್ಲಾ ಆರೋಪಿಗಳಿಗೆ ಬಂಧನ ಆಧಾರ ತಿಳಿಸಲಾಗಿದೆ. ಆದರೆ, ಆದೇಶದಲ್ಲಿ ಬಂಧನದ ಆಧಾರ ತಿಳಿಸಬೇಕಿಲ್ಲ ಎಂದು ಪ್ರಾಸಿಕ್ಯೂಷನ್‌ ಹೇಳಿರುವುದು ಸಂಪೂರ್ಣ ಸರಿಯಾದ ವಾದವಲ್ಲ. 2023ರ ಅಕ್ಟೋಬರ್‌ 23ರ ಸುಪ್ರೀಂ ಕೋರ್ಟ್‌ ಆದೇಶ ಚಾಲ್ತಿಯಲ್ಲಿರುವ ಕಾನೂನು. ಬಂಧನ ಆಧಾರವು ಆರೋಪಿಗಳನ್ನು ರಕ್ಷಿಸಿಕೊಳ್ಳಲು ಇರುವ ತೀರ ಅಗತ್ಯವಾದ ಸಾಮಾನ್ಯ ದಾಖಲೆಯಾಗಿದೆ. ಇದು ಪಿಎಂಎಲ್‌ ಕಾಯಿದೆ ಅಥವಾ ಬೇರಾವುದೇ ಅಪರಾಧವಾದರೂ ಅನ್ವಯಿಸುತ್ತದೆ. ಹೀಗಾಗಿ, ಬಂಧನಕ್ಕೆ ಆಧಾರ ಒದಗಿಸದಿರುವುದೂ ಅವರು ಜಾಮೀನು ಪಡೆಯಲು ಅರ್ಹರನ್ನಾಗಿಸುತ್ತದೆ. ಪರಿಸ್ಥಿತಿ ಹೀಗಿದ್ದಾಗ ಪ್ರಕರಣದ ಮೆರಿಟ್‌ ಪರಿಗಣಿಸುವ ಅಗತ್ಯವೇ ಉದ್ಭವಿಸುವುದಿಲ್ಲ” ಎಂದರು.

Also Read
ನ್ಯಾಯಾಲಯದ ಅನುಕಂಪ ದುರ್ಬಳಕೆ; 5 ವಾರ ಕಳೆದರೂ ಶಸ್ತ್ರಚಿಕಿತ್ಸೆಗೊಳಗಾಗದ ದರ್ಶನ್: ಮಧ್ಯಂತರ ಜಾಮೀನಿಗೆ ಸರ್ಕಾರ ವಿರೋಧ

ಇದಕ್ಕೂ ಮುನ್ನ, ಸುಮಾರು ಒಂದು ತಾಸು ವಾದಿಸಿದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್‌ ಅವರು “ಪ್ರಕರಣದ ಎಲ್ಲಾ ಆರೋಪಿಗಳ ಡಿಜಿಟಲ್‌ ಹೆಜ್ಜೆ ಗುರುತುಗಳು ಘಟನೆಯಲ್ಲಿ ಅವರ ಪಾತ್ರವನ್ನು ನಿರೂಪಿಸುತ್ತದೆ. ಆರೋಪಿಗಳೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ದರ್ಶನ್‌ ಜೊತೆ ಕೆಲಸ ಮಾಡುತ್ತಿದ್ದವರೇ ಆಗಿದ್ದಾರೆ. ಇಡೀ ಪ್ರಕರಣ ಪಿತೂರಿಯ ಭಾಗವಾಗಿ ನಡೆದಿದೆ. ಮೃತ ರೇಣುಕಾಸ್ವಾಮಿ ದೇಹದಲ್ಲಿ 17 ಮೂಳೆ ಮುರಿತ ಮತ್ತು 39 ಗಾಯಗಳು ಪತ್ತೆಯಾಗಿವೆ. ದರ್ಶನ್‌ ಹಲ್ಲೆಯಿಂದ ರೇಣುಕಾಸ್ವಾಮಿ ವೃಷಣಕ್ಕೆ ತೀವ್ರ ಹಾನಿಯಾಗಿದೆ” ಎಂದರು.

“ಮೊದಲನೇ ಆರೋಪಿಯಾಗಿರುವ ಪವಿತ್ರಾಗೌಡ ಅವರು ರೇಣುಕಾಸ್ವಾಮಿಯನ್ನು ದರ್ಶನ್‌ ಬೆಂಗಳೂರಿಗೆ ಕರೆಸಿರುವ ವಿಚಾರವನ್ನು ತನ್ನ ಗೆಳತಿಗೆ ವಾಟ್ಸಾಪ್‌ ಕರೆ ಮಾಡಿ ತಿಳಿಸಿದ್ದಾರೆ. ರೇಣುಕಾಸ್ವಾಮಿಯ ಕೊಲೆ ಮುಚ್ಚಿಹಾಕುವುದಕ್ಕೆ ದರ್ಶನ್‌ 30 ಲಕ್ಷ ರೂಪಾಯಿ ಹಣ ನೀಡಿರುವುದು ಮತ್ತು ಆನಂತರ ಬೇರೆ ಬೇರೆ ಆರೋಪಿಗಳಿಂದ ನಿರ್ದಿಷ್ಟ ಮೊತ್ತವನ್ನು ತನಿಖಾಧಿಕಾರಿಗಳು ಜಫ್ತಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ದರ್ಶನ್‌, ಪವಿತ್ರಾಗೌಡ ಮತ್ತಿತರರು ಕಾರಿನಲ್ಲಿ ಬಂದಿರುವುದಕ್ಕೆ ಸಿಸಿಟಿವಿ ದೃಶ್ಯಾವಳಿ, ಕರೆ ದಾಖಲೆಗಳಿವೆ. ರೇಣುಕಾಸ್ವಾಮಿ ಹತ್ಯೆಯು ಐಪಿಸಿ ಸೆಕ್ಷನ್‌ 302 ಅಡಿ ವ್ಯವಸ್ಥಿತ ಕೊಲೆಯೇ ವಿನಾ ಐಪಿಸಿ ಸೆಕ್ಷನ್‌ 304ರ ಅಡಿಯ ನರಹತ್ಯೆ ಅಪರಾಧವಾಗುವುದಿಲ್ಲ” ಎಂದು ವಾದಿಸಿದರು.

ಪ್ರಕರಣದಲ್ಲಿ 10ನೇ ಆರೋಪಿಯಾಗಿರುವ ಪಟ್ಟಣಗೆರೆ ಷೆಡ್‌ ಮಾಲೀಕರಾದ ಜಯಣ್ಣ ಅವರ ಸಂಬಂಧಿ ವಿ ವಿನಯ್‌ ಅವರು ತಮ್ಮ ಜಾಮೀನು ಅರ್ಜಿಯನ್ನು ಹಿಂಪಡೆದರು.

Kannada Bar & Bench
kannada.barandbench.com