[ಮುಸ್ಲಿಮರ ಅವಹೇಳನ] ಬಿಜೆಪಿ ಎಂಎಲ್‌ಸಿ ಸಿ ಟಿ ರವಿ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಹೈಕೋರ್ಟ್‌ ನಿರ್ದೇಶನ

“ಯಾಕೆ ಈ ರೀತಿ ಹೇಳಿದಿರಿ? ಎದೆ ಸೀಳಿದರೆ ಎರಡಕ್ಷರ ಇಲ್ಲ? ಇದೆಲ್ಲ ಏಕೆ ಬೇಕು” ಎಂದು ಸಿ ಟಿ ರವಿ ಪರ ವಕೀಲರನ್ನು ಪ್ರಶ್ನಿಸಿದ ನ್ಯಾಯಾಲಯ.
[ಮುಸ್ಲಿಮರ ಅವಹೇಳನ] ಬಿಜೆಪಿ ಎಂಎಲ್‌ಸಿ ಸಿ ಟಿ ರವಿ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಹೈಕೋರ್ಟ್‌ ನಿರ್ದೇಶನ
Published on

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಮಾತನಾಡುತ್ತಾ ಕೋಮು ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ಬಲವಂತದ ಕ್ರಮ ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಸೋಮವಾರ ಮಧ್ಯಂತರ ಆದೇಶ ಮಾಡಿದೆ.

ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ಹಾಗೂ ಎಫ್‌ಐಆರ್ ರದ್ದು ಕೋರಿ ಸಿ ಟಿ ರವಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಮಧ್ಯಂತರ ಆದೇಶ ಮಾಡಿತು.

ಇದೇ ವೇಳೆ, ಅರ್ಜಿಯಲ್ಲಿ ಮೊದಲನೇ ಪ್ರತಿವಾದಿಯಾದ ಸರ್ಕಾರಕ್ಕೆ (ಚಿಕ್ಕಮಗಳೂರು ಟೌನ್ ಪೊಲೀಸರು) ನೋಟಿಸ್ ಜಾರಿಗೊಳಿಸಿದ ಪೀಠವು ವಿಚಾರಣೆಯನ್ನು ಜುಲೈ 31ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ, ಪ್ರಕರಣದ ಎಫ್‌ಐಆರ್ ಗಮನಿಸಿದ ಪೀಠವು “ಏಕೆ ಬೇಕು? ಯಾಕೆ ಈ ರೀತಿ ಹೇಳಿದಿರಿ? ಎದೆ ಸೀಳಿದರೆ ಎರಡಕ್ಷರ ಇಲ್ಲ? ಇದೆಲ್ಲ ಏಕೆ ಬೇಕು” ಎಂದು ಸಿ ಟಿ ರವಿ ಪರ ವಕೀಲರನ್ನು ಪ್ರಶ್ನಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ಸಿ ಟಿ ರವಿ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು “ಯಾರ ಭಾವನೆಗೂ ಧಕ್ಕೆ ತರುವ ಕೆಲಸವಾಗಿಲ್ಲ. ಮೂರನೇ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ” ಎಂದು ಪೀಠಕ್ಕೆ ತಿಳಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು, ಪೊಲೀಸರು ನೋಟಿಸ್ ನೀಡಲು ತೆರಳಿದ್ದಾಗ ಅರ್ಜಿದಾರರು ಸರಿಯಾಗಿ ಸ್ಪಂದಿಸಿಲ್ಲ. ತಮ್ಮ ಬೆಂಬಲಿಗರ ಜತೆ ಕುಳಿತು ಕಾಂಗರೂ ಕೋರ್ಟ್ ನಡೆಸಿ, ನೋಟಿಸ್ ನೀಡಲು ತೆರಳಿದ್ದ ಅಧಿಕಾರಿಗಳನ್ನೇ ‌ನಿಂದಿಸಿ, ಬೆದರಿಸಿದ್ದಾರೆ. ಇದಕ್ಕೆ ಸಂಬಂಧಿಸಿದ‌ ವಿಡಿಯೊ ಸಹ ನಮ್ಮ ಬಳಿ ಇದೆ ಎಂದರು.

ಇದನ್ನು ನಿರಾಕರಿಸಿದ ಅರುಣ್ ಶ್ಯಾಮ್, ಪೊಲೀಸರು ಎಫ್‌ಐಆರ್ ಪ್ರತಿ‌ ಒದಗಿಸದೆಯೇ ನೋಟಿಸ್ ನೀಡಲು ತೆರಳಿದ್ದರು. ಇದರಿಂದ ಅರ್ಜಿದಾರರು ಎಫ್‌ಐಆರ್ ಎಲ್ಲಿ, ಯಾವ ಪ್ರಕರಣ, ಏಕೆ ಇಲ್ಲಿಗೆ ಬಂದಿದ್ದೀರಿ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ. ತಮ್ಮ ಹಕ್ಕಿನ ಭಾಗವಾಗಿ ಎಫ್ಐಆರ್ ಪ್ರತಿಯನ್ನು ಕೇಳಿದ್ದಾರೆಯೇ ಹೊರತು ಬೇರೇನೂ ಅಲ್ಲ ಎಂದು ಹೇಳಿದರು.

ಅರುಣ್‌ ಶ್ಯಾಮ್‌ ಅವರನ್ನು ಕುರಿತು ಪೀಠವು ಮೆಲು ಧ್ವನಿಯಲ್ಲಿ ಕೇಳಿದರಾ ಅಥವಾ ಮೇಲು ಧ್ವನಿಯಲ್ಲಿ ಕೇಳಿದರಾ? ಎಂದು ಪ್ರಶ್ನಿಸಿತು. ಅರುಣ್ ಶ್ಯಾಮ್ ಅವರು, ಮೆಲು ಧ್ವನಿಯಲ್ಲೇ ಕೇಳಿದ್ದಾರೆ. ನಾನು ಸಹ ವಿಡಿಯೊ ನೋಡಿದ್ದೇನೆ. ಅದರಲ್ಲಿ ಏನೂ ಇಲ್ಲ ಎಂದರು. ಆಗ ಪೀಠ, ನೀವು ಹೇಳಿದ ವಿಡಿಯೊ ಎಲ್ಲಿದೆ ಎಂದು ಎಸ್‌ಪಿಪಿ ಅವರನ್ನು ಪ್ರಶ್ನಿಸಿತು. ವಿಡಿಯೊ ಪಡೆದುಕೊಂಡು ನ್ಯಾಯಾಲಯಕ್ಕೆ ಒದಗಿಸುವುದಾಗಿ ಎಸ್‌ಪಿಪಿ ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ಪೀಠವು ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತಲ್ಲದೆ, ಅಲ್ಲಿಯವರೆಗೆ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಪೊಲೀಸರಿಗೆ ನಿರ್ದೇಶಿಸಿತು.

ಪ್ರಕರಣದ ಹಿನ್ನೆಲೆ: ಮುದಾಸಿರ್ ಪಾಷಾ ಎಂಬುವರು 2026ರ ಜುಲೈ 24ರ ರಾತ್ರಿ ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಜುಲೈ 23ರಂದು ಸಂಜೆ 6 ಗಂಟೆ ಸಮಯದಲ್ಲಿ 'ಯೂತ್ ಫಾರ್ ನೇಷನ್ ಚಿಕ್ಕಮಗಳೂರು' ವತಿಯಿಂದ ಚಿಕ್ಕಮಗಳೂರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ನಂತರ ಆಜಾದ್ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿ ಟಿ ರವಿ ಅವರು ಭಾಷಣ ಮಾಡುತ್ತಾ, "ಮುಲ್ಲಾನಿಗೂ ನೀಟ್ ಎಕ್ಸಾಮ್‌ಗೂ ಏನು ಸಂಬಂಧ? ಮುಲ್ಲಾಗಳ ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಆತ ಬಂದು ನೀಟ್ ವಿರುದ್ಧ ಹೋರಾಟ ಅಂತೆ? ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಬೇಕಂತೆ, ಮೋದಿ ಹಠಾವೋ ಅಂತೆ, ಎದೆ ಸೀಳಿದರೆ ಮೂರು ಅಕ್ಷರ ಇಲ್ಲ ನೀಟ್ ಬಗ್ಗೆ ಮಾತಾಡ್ತೀಯಾ. ಸಿಎಎ, ಎನ್‌ಆರ್‌ಸಿಗೂ ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದಕ್ಕೂ ಏನು ಸಂಬಂಧ? ಸಿಎಎ ವಿರೋಧಿಗಳು, ತುಕ್ಡೆ ಗ್ಯಾಂಗ್‌ಗಳು ಅಲ್ಲಿ ಬಂದು ಮಾತಾಡ್ತಾರೆ, ತುಕ್ಡೆ ಗ್ಯಾಂಗ್ ಯಾರು ಅಂತ ಗೊತ್ತಾ ನಿಮಗೆ, ಭಾರತ್ ತೇರೇ ತುಕ್ಡೆ ಹೊಂಗೆ, ಇನ್ಶಾ ಅಲ್ಲಾಃ ಇನ್ಶಾ ಅಲ್ಲಾಃ ಘೋಷಣೆ ಕೂಗಿದಂತೆ ತುಕ್ಡೆ ಗ್ಯಾಂಗ್‌ಗಳು ಆ ಒಂದು ಹೋರಾಟದಲ್ಲಿ ಭಾಗವಹಿಸುತ್ತಾರೆ" ಎಂದು ಹೇಳಿದ್ದು, ಈ ಕುರಿತ ವಿಡಿಯೊ ಸಮಾಜಿಕ ಜಾಲತಾಣದಲ್ಲಿ ಹರಿದಾಡಿದೆ ಎಂದು ದೂರಿನಲ್ಲಿ ಆರೋಪಿಸಿದ್ದರು.

ಸಿ ಟಿ ರವಿ ಅವರ ಈ ಹೇಳಿಕೆಯ ವಿಡಿಯೊ ಅನ್ನು ಜುಲೈ 24ರಂದು ನನ್ನ ಮೊಬೈಲ್‌ನಲ್ಲಿ ಗಮನಿಸಿದ್ದೇನೆ. ಸಿ ಟಿ ರವಿ ಅವರು ತಮ್ಮ ಭಾಷಣದ ವೇಳೆಯಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿ ಧರ್ಮ ಹಾಗೂ ಸಮುದಾಯದ ಆಧಾರದ ಮೇಲೆ ಪ್ರಚೋದನಕಾರಿ ಹೇಳಿಕೆ ನೀಡಿ, ಎರಡು ಸಮುದಾಯ ನಡುವೆ ಸಂಘರ್ಷ ಉಂಟು ಮಾಡಿ ಸಮಾಜದಲ್ಲಿ ಆಶಾಂತಿ ಹಬ್ಬಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಮಾತನಾಡಿರುವ ಸಿ ಟಿ ರವಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದರು. ಈ ದೂರು ಆಧರಿಸಿ, ಪೊಲೀಸರು ಸಿ ಟಿ ರವಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್  353(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Kannada Bar & Bench
kannada.barandbench.com