ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸುಧಾರಣೆ: ಕೆಎಸ್‌ಎಲ್‌ಎಸ್‌ಎ ಶಿಫಾರಸ್ಸು ಜಾರಿಗೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಹೈಕೋರ್ಟ್‌ ನಿರ್ದೇಶದ ಹಿನ್ನೆಲೆಯಲ್ಲಿ 100 ಪಿಎಚ್‌ಸಿ ಮತ್ತು ಒಂದು ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸಿಎಚ್‌ಸಿ) ಭೇಟಿ ನೀಡಿದ್ದ ಕೆಎಸ್‌ಎಲ್‌ಎಸ್‌ಎ ವರದಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು.
Karnataka High Court
Karnataka High Court

ರಾಜ್ಯದಾದ್ಯಂತ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ (ಪಿಎಚ್‌ಸಿ) ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಮಾಡಿರುವ ಶಿಫಾರಸ್ಸುಗಳನ್ನು ಜಾರಿ ಮಾಡುವಂತೆ ಬುಧವಾರ ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದು, ಮನವಿಯನ್ನು ವಿಲೇವಾರಿ ಮಾಡಿದೆ.

ಗುರುನಾಥ್‌ ವಡ್ಡೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಹೈಕೋರ್ಟ್‌ ನಿರ್ದೇಶದ ಹಿನ್ನೆಲೆಯಲ್ಲಿ 100 ಪಿಎಚ್‌ಸಿ ಮತ್ತು ಒಂದು ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ) ಭೇಟಿ ನೀಡಿದ್ದ ಕೆಎಸ್‌ಎಲ್‌ಎಸ್‌ಎ ತಂಡ ವರದಿ ಸಿದ್ಧಪಡಿಸಿ ಸಲ್ಲಿಸಿತ್ತು. ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡದ (ಐಪಿಎಚ್‌ಎಸ್‌) ಮಾರ್ಗಸೂಚಿ ಪ್ರಕಾರ 30,000 ಸಾವಿರ ಜನರಿಗೆ ಒಂದು ಪಿಎಚ್‌ಸಿ ಇರಬೇಕು. ಇದರ ಪ್ರಕಾರ ರಾಜ್ಯದಲ್ಲಿ 822 ಪಿಎಚ್‌ಸಿಗಳಿಗೆ ಬದಲಾಗಿ 2,359 ಪಿಎಚ್‌ಸಿಗಳನ್ನು ಆರಂಭಿಸಲಾಗಿದೆ ಎಂದು ರಾಜ್ಯ ಸರ್ಕಾರವು ಪೀಠಕ್ಕೆ ತಿಳಿಸಿತು.

Also Read
ಶಾಲೆಯಲ್ಲಿ ಆರೋಗ್ಯ ಕೇಂದ್ರ, ಮಹಿಳಾ-ಪುರುಷರಿಬ್ಬರಿಗೂ ಏಕ ಶೌಚಾಲಯ: ಕೆಎಸ್‌ಎಲ್‌ಎಸ್‌ಎ ವರದಿ ಹೊರಹಾಕಿದ ವಾಸ್ತವ ಚಿತ್ರಣ

ಎಂಬಿಬಿಎಸ್‌ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳನ್ನು ಗ್ರಾಮೀಣ ಪ್ರದೇಶದಲ್ಲಿ ಇಂಟರ್ನ್‌ಗಳಾಗಿ ನೇಮಕ ಮಾಡಬೇಕು. ಗುಣಮಟ್ಟ ಪರಿಶೀಲನೆಯ ಭಾಗವಾಗಿ ರಾಜ್ಯ ಸರ್ಕಾರ ಅಥವಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಜ್ಯದ ಎಲ್ಲಾ ಪಿಎಚ್‌ಸಿಗಳಲ್ಲಿ ವಿಸ್ತೃತ ಸಮೀಕ್ಷೆ ನಡೆಸಬೇಕು. ಸಾರ್ವಜನಿಕರ ಭದ್ರತೆಯ ದೃಷ್ಟಿಯಿಂದ ಪಿಎಚ್‌ಸಿಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಬೇಕು. ಪಿಎಚ್‌ಸಿಯ ಸಿಬ್ಬಂದಿಗೆ ನಿರಂತರವಾಗಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಬೇಕು. ಆರೋಗ್ಯ ದಾಖಲೆಗಳು ಮತ್ತು ಹಣಕಾಸು ದತ್ತಾಂಶವನ್ನು ಡಿಜಿಟಲ್‌ ರೂಪಕ್ಕೆ ತರಬೇಕು. ಕೋವಿಡ್‌ ಮೂರನೇ ಅಲೆ ಪರಿಸ್ಥಿತಿ ನಿರ್ಮಾಣವಾದರೆ ಸೋಂಕಿತರಿಗೆ ಚಿಕಿತ್ಸೆ ನೀಡುವ ಮಟ್ಟಿಗೆ ಪಿಎಚ್‌ಸಿಗಳನ್ನು ಸಿದ್ಧಗೊಳಿಸಬೇಕು ಎಂಬುದು ಸೇರಿದಂತೆ ಹಲವು ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು ಕೆಎಸ್‌ಎಲ್‌ಎಸ್‌ಎ ಸೆಪ್ಟೆಂಬರ್‌ 21ರಂದು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇವುಗಳನ್ನು ಜಾರಿಗೊಳಿಸುವಂತೆ ಪೀಠ ಆದೇಶ ಮಾಡಿದೆ.

Related Stories

No stories found.
Kannada Bar & Bench
kannada.barandbench.com