ಶಾಲೆಯಲ್ಲಿ ಆರೋಗ್ಯ ಕೇಂದ್ರ, ಮಹಿಳಾ-ಪುರುಷರಿಬ್ಬರಿಗೂ ಏಕ ಶೌಚಾಲಯ: ಕೆಎಸ್‌ಎಲ್‌ಎಸ್‌ಎ ವರದಿ ಹೊರಹಾಕಿದ ವಾಸ್ತವ ಚಿತ್ರಣ

ಎಲ್ಲಾ ಪಿಎಚ್‌ಸಿಗಳಲ್ಲಿ ಐಪಿಎಚ್‌ಸಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಶಿಫಾರಸ್ಸು ಮಾಡಿದೆ.
Karnataka High Court
Karnataka High Court

ಬೆಂಗಳೂರಿನ ಸಿದ್ದಾಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವು (ಪಿಎಚ್‌ಸಿ) ಪುರುಷ ಮತ್ತು ಮಹಿಳೆಯರಿಬ್ಬರಿಗೂ ಒಂದೇ ಒಂದು ಶೌಚಾಲಯವನ್ನು ಹೊಂದಿದೆ. ಮಂಡ್ಯ ಜಿಲ್ಲೆಯ ಶಂಕರಾಪುರ ಗ್ರಾಮದಲ್ಲಿರುವ ಪಿಎಚ್‌ಸಿಯು ಶಾಲೆಯೊಂದರ ಎರಡು ತರಗತಿಗಳಲ್ಲಿ ನಡೆಯುತ್ತಿದೆ. ಇದು ರಾಜ್ಯದ ಪಿಎಚ್‌ಸಿಗಳ ಪರಿಶೀಲನೆಯ ಸಂದರ್ಭದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಕೆಎಸ್‌ಎಲ್‌ಎಸ್‌ಎ) ಕಂಡಿರುವ ವಾಸ್ತವ ಸಂಗತಿಗಳು.

ಕರ್ನಾಟಕ ಹೈಕೋರ್ಟ್‌ ನಿರ್ದೇಶನದಂತೆ ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿಗಳು ರಾಜ್ಯದಾದ್ಯಂತ 100 ಪಿಎಚ್‌ಸಿಗಳು ಮತ್ತು ಒಂದು ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಕುರಿತು ವರದಿ ಸಲ್ಲಿಸಿದ್ದಾರೆ. ಇದರ ಸಮಗ್ರ ವರದಿಯನ್ನು ಕೆಎಸ್‌ಎಲ್‌ಎಸ್‌ಎ ಈಚೆಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠಕ್ಕೆ ಸಲ್ಲಿಸಲಾಗಿದೆ. ಗ್ರಾಮೀಣ ಭಾಗದ ಪಿಎಚ್‌ಸಿಗಳಲ್ಲಿ ಸೌಲಭ್ಯದ ಕೊರತೆ ಇದೆ ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಗೆ (ಪಿಐಎಲ್‌) ಸಂಬಂಧಿಸಿದಂತೆ ಹೈಕೋರ್ಟ್‌ ಕೆಎಸ್‌ಎಲ್‌ಎಸ್‌ಎಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ನಿರ್ದೇಶನ ನೀಡಿತ್ತು. ಕೆಎಸ್‌ಎಲ್‌ಎಸ್‌ಎ ವರದಿಯಲ್ಲಿ ಸಲ್ಲಿಸಿರುವ ಪ್ರಮುಖ ಅಂಶಗಳು ಇಂತಿವೆ:

  • ಧಾರವಾಡದ ಪೊಲೀಸ್‌ ಪ್ರಧಾನ ಕಚೇರಿ, ಮೈಸೂರಿನ ದೂರ ಗ್ರಾಮ, ತುಮಕೂರಿನ ಬೆಳ್ಳಾವಿ, ಚಿಕ್ಕಮಗಳೂರಿನ ಹಿರೇಮಗಳೂರಿನಲ್ಲಿರುವ ಪಿಎಚ್‌ಸಿಗಳಲ್ಲಿ ಪರಿಸ್ಥಿತಿ ಅತ್ಯಂತ ಹೀನಾಯವಾಗಿದ್ದು, ತಕ್ಷಣ ಅತ್ತ ಗಮನಹರಿಸಬೇಕಿದೆ.

  • ಅತ್ಯಂತ ಪ್ರಮುಖ ಸಮಯದಲ್ಲಿ ಕರ್ತವ್ಯ ನಿರತ ವೈದ್ಯರು ಗೈರಾಗಿರುವುದರ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ. 100 ಪಿಎಚ್‌ಸಿಗಳ ಪೈಕಿ 67 ಪಿಎಚ್‌ಸಿಗಳಲ್ಲಿ ವೈದ್ಯರು ಮತ್ತು ಪ್ಯಾರಾ ಮೆಡಿಕಲ್‌ ಸಿಬ್ಬಂದಿಗೆ ವಸತಿ ವ್ಯವಸ್ಥೆ ಇಲ್ಲ. ಎಲ್ಲಾ ಪಿಎಚ್‌ಸಿಗಳಲ್ಲೂ ಸಿಬ್ಬಂದಿ ಮಾದರಿ ಕೂಡ ಏಕರೂಪದಲ್ಲಿಲ್ಲ. ಭಾರತೀಯ ಪ್ರಾಥಮಿಕ ಆರೋಗ್ಯ ಮಾನದಂಡದ (ಐಪಿಎಚ್‌ಎಸ್‌) ಮಾರ್ಗಸೂಚಿಯ ಅನ್ವಯ ʼಎʼ ವಿಧದ ಪಿಎಚ್‌ಸಿಗಳಲ್ಲಿ 13 ಸಿಬ್ಬಂದಿ, ʼಬಿʼ ವಿಧದ ಪಿಎಚ್‌ಸಿಗಳಲ್ಲಿ 14 ಸಿಬ್ಬಂದಿ ಇರಬೇಕು.

  • ಬಹುತೇಕ ಪಿಎಚ್‌ಸಿಗಳು ಐಪಿಎಚ್‌ಎಸ್‌ ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ. ಹೊರ ರೋಗಿಗಳ ತಪಾಸಣೆ ವ್ಯವಸ್ಥೆ, 24 X 7 ತುರ್ತು ಸೇವೆಗಳು, ಹೆರಿಗೆ ಕೊಠಡಿ, ಆಯುಷ್‌ ಮೂಲಸೌಲಭ್ಯ, ವೈದ್ಯರು ಹಾಗೂ ಪ್ಯಾರಾ ಮೆಡಿಕಲ್‌ ಸಿಬ್ಬಂದಿಗೆ ಏಕರೂಪದಲ್ಲಿ ವಸತಿ ವ್ಯವಸ್ಥೆ ಇಲ್ಲ.

  • ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲು ಏಕರೂಪತೆ ಇಲ್ಲ ಎಂಬುದು ಪರಿಶೀಲನೆಯ ವೇಳೆ ಪತ್ತೆಯಾಗಿದೆ. 100 ಪಿಎಚ್‌ಸಿಗಳ ಪೈಕಿ 60 ಪಿಎಚ್‌ಸಿಗಳಲ್ಲಿ ಮಾತ್ರ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ. “ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಮಟ್ಟಿಗೆ ಪಿಎಚ್‌ಸಿಗಳನ್ನು ಸಜ್ಜುಗೊಳಿಸಿದ್ದರೆ ಕೋವಿಡ್‌ ಕೇರ್‌ ಕೇಂದ್ರಗಳು ಮತ್ತು ಇತರೆ ಆಸ್ಪತ್ರೆಗಳ ಮೇಲಿನ ಒತ್ತಡ ತಗ್ಗಿಸಬಹುದಿತ್ತು” ಎಂದು ವರದಿಯಲ್ಲಿ ಹೇಳಲಾಗಿದೆ.

Also Read
“ಆರೋಗ್ಯ ತುರ್ತು ಪರಿಸ್ಥಿತಿಯೆಡೆಗೆ ಗುಜರಾತ್‌:” ಕೋವಿಡ್‌ ಹೆಚ್ಚಳ - ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಹೈಕೋರ್ಟ್‌

ಕೆಎಸ್‌ಎಲ್‌ಎಸ್‌ಎ ಶಿಫಾರಸ್ಸುಗಳು

  • ಎಲ್ಲಾ ಪಿಎಚ್‌ಸಿಗಳಲ್ಲಿ ಐಪಿಎಚ್‌ಸಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು.

  • ಐಪಿಎಚ್‌ಸಿ ಮಾರ್ಗಸೂಚಿಯ ಅನ್ವಯ ಎಲ್ಲಾ ಪಿಎಚ್‌ಸಿಗಳು 24 X 7 ತುರ್ತು ಸೇವೆಗಳನ್ನು ನೀಡಬೇಕು.

  • ಅಗತ್ಯ ಮಾನವ ಸಂಪನ್ಮೂಲ ಮತ್ತು ಸೌಲಭ್ಯ ಹೊಂದಿರದ ಪಿಎಚ್‌ಸಿಗಳನ್ನು ನಿರ್ಮಿಸುವುದರಿಂದ ಯಾವುದೇ ಉಪಯೋಗವಿಲ್ಲ. ಗುಣಮಟ್ಟ ಪರಿಶೀಲನೆಯ ದೃಷ್ಟಿಯಿಂದ ಎಲ್ಲಾ ಪಿಎಚ್‌ಸಿಗಳಲ್ಲಿ ವಿಸ್ತೃತವಾದ ಸರ್ವೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಡೆಸಬೇಕು.

  • ಗ್ರಾಮೀಣ ಪ್ರದೇಶದ ಪಿಎಚ್‌ಸಿಗಳಲ್ಲಿ ಎಂಬಿಬಿಎಸ್‌ ವಿದ್ಯಾರ್ಥಿಗಳನ್ನು ಇಂಟರ್ನಿಗಳಾಗಿ ನೇಮಿಸಿ ಅವರ ಸೇವೆ ಪಡೆದುಕೊಳ್ಳಬಹುದು.

  • ಜಿಲ್ಲಾ ಆರೋಗ್ಯ ಇನ್‌ಸ್ಪೆಕ್ಟರ್‌ಗಳು ಮೇಲಿಂದ ಮೇಲೆ ಪಿಎಚ್‌ಸಿಗಳಲ್ಲಿ ಪರಿಶೀಲನೆ ನಡೆಸಬೇಕು.

  • ಸಂಗ್ರಹ ಮತ್ತು ದಾಸ್ತಾನು ಇತ್ಯಾದಿಯನ್ನು ಕೈಯಲ್ಲಿ ಬರೆದಿಡುವ ಬದಲಿಗೆ ರೋಗಿಗಳ ಆರೋಗ್ಯ ದಾಖಲೆಗಳ ನಿರ್ವಹಣೆ, ಹಣಕಾಸಿನ ನಿರ್ವಹಣೆಯ ಕುರಿತು ಹಣಕಾಸಿನ ದತ್ತಾಂಶ ಇತ್ಯಾದಿಯನ್ನು ಡಿಜಿಟಲ್‌ ರೂಪದಲ್ಲಿ ನಿರ್ವಹಿಸಬೇಕು.

  • ಪಿಎಚ್‌ಸಿಗಳಲ್ಲಿ ಲಭ್ಯವಿರುವ ಸಾಮಗ್ರಿಗಳ ನಿರ್ವಹಣೆಯ ಕುರಿತು ನಿರಂತರವಾಗಿ ಅಲ್ಲಿನ ಸಿಬ್ಬಂದಿಗೆ ತರಬೇತಿ ಶಿಬಿರಗಳನ್ನು ನಡೆಸಬೇಕು. ಗ್ರಾಮೀಣ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರಿಗೆ ವಿಶೇಷವಾಗಿ ವೃತ್ತಿಪರ ತರಬೇತಿ ಶಿಬಿರ ನಡೆಸಬೇಕು.

  • ಕರ್ನಾಟಕ ಸಾರ್ವಜನಿಕ ಸುರಕ್ಷತೆ ಜಾರಿ (ಕ್ರಮಗಳು) ಕಾಯಿದೆ 2017ರ ಅಡಿ ಎಲ್ಲಾ ಪಿಎಚ್‌ಸಿಗಳಲ್ಲಿ ಸಿಸಿಟಿವಿ ಅಳವಡಿಸುವುದನ್ನು ಕಡ್ಡಾಯಗೊಳಿಸಬೇಕು.

Related Stories

No stories found.
Kannada Bar & Bench
kannada.barandbench.com