

“ಅಪ್ರಾಪ್ತ ವಯಸ್ಸಿನ ಬಾಲಕಿಯ ಜೊತೆಗೆ ನಡೆಸುವ ಸಮ್ಮತಿಯುಕ್ತ ಲೈಂಗಿಕ ಕ್ರಿಯೆ ಕಾನೂನಿನ ದೃಷ್ಟಿಯಲ್ಲಿ ಅಮಾನ್ಯ” ಎಂದು ಕರ್ನಾಟಕ ಹೈಕೋರ್ಟ್ ಪ್ರಕರಣವೊಂದರಲ್ಲಿ ಈಚೆಗೆ ಸ್ಪಷ್ಟಪಡಿಸಿದೆ.
ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ–2012) ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿದ್ದ ಸತ್ರ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಂತ್ರಸ್ತೆಯ ಪೋಷಕರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಚ್ ಪಿ ಸಂದೇಶ್ ಮತ್ತು ಬಿ ಪ್ರಮೋದ್ ಅವರ ವಿಭಾಗೀಯ ಪೀಠವು ಆರೋಪಿಯನ್ನು ಖುಲಾಸೆಗೊಳಿಸಿದ್ದ ಆದೇಶವನ್ನು ರದ್ದುಪಡಿಸಿದೆ.
“ಬಾಲಕಿ 18 ವರ್ಷಕ್ಕಿಂತ ಕಡಿಮೆಯಿದ್ದಾಗ ಲೈಂಗಿಕ ಕ್ರಿಯೆಗೆ ಆಕೆಯ ಸಮ್ಮತಿ ಇದೆಯೋ ಇಲ್ಲವೋ ಎಂಬುದು ಕಾನೂನಿನಲ್ಲಿ ಮುಖ್ಯವಾಗುವುದಿಲ್ಲ. ಬಾಲಕಿಯ ಸಮ್ಮತಿಯನ್ನು ರಕ್ಷಣೆಯಾಗಿ ಪಡೆಯಲು ಆರೋಪಿಗೆ ಯಾವುದೇ ಹಕ್ಕಿರುವುದಿಲ್ಲ” ಎಂದು ಪೀಠ ವಿವರಿಸಿದೆ.
ಪ್ರಕರಣದಲ್ಲಿ ಬಾಲಕಿ ಗರ್ಭಿಣಿಯಾಗಲು ಕಾರಣವಾದ ಅಪರಾಧಿಗೆ ಪೋಕ್ಸೊ ಕಾಯಿದೆಯ ಸೆಕ್ಷನ್ 6 ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 376ರ ಅಡಿಯಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ, ₹1 ಲಕ್ಷ ದಂಡ ಹಾಗೂ ಬಾಲಕಿಯನ್ನು ಅಪಹರಣ ಮಾಡಿದ ಆರೋಪಕ್ಕೆ ₹5 ಸಾವಿರ ದಂಡ ವಿಧಿಸಿದೆ.
ದಂಡದ ಮೊತ್ತದಲ್ಲಿ ₹90 ಸಾವಿರವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಬೇಕು. ಇನ್ನುಳಿದ ₹15 ಸಾವಿರವನ್ನು ಸರ್ಕಾರಕ್ಕೆ ಜಮಾ ಮಾಡಬೇಕು. ಈ ಆದೇಶದ ಪ್ರತಿ ಲಭ್ಯವಾದ ಒಂದು ವಾರದ ಒಳಗಾಗಿ ಆರೋಪಿಯು ವಿಚಾರಣಾಧೀನ ನ್ಯಾಯಾಲಯದ ಮುಂದೆ ಶರಣಾಗಬೇಕು. ಒಂದು ವೇಳೆ ಶರಣಾಗದೇ ಇದ್ದಲ್ಲಿ ತಕ್ಷಣವೇ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಸತ್ರ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.