ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್

ಅಧ್ಯಕ್ಷರ ಆಯ್ಕೆ ಸಂಬಂಧ ಇದೇ ವರ್ಷ ಏಪ್ರಿಲ್‌ನಲ್ಲಿ ನಡೆದಿದ್ದ ಸಭೆ ಮತ್ತು ಆಯ್ಕೆ ಪ್ರಕ್ರಿಯೆಗಳನ್ನು ನ್ಯಾಯಾಲಯವು ರದ್ದುಗೊಳಿಸಿದೆ.
Karnataka High Court
Karnataka High Court

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಅಸಿಂಧುಗೊಳಿಸಿದೆ.

ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ಮೂಕಾಂಬಿಕಾ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಶ್ನಿಸಿ ಉಡುಪಿಯ ಗೋಪಾಲಕೃಷ್ಣ ಸೇರಿ ನಾಲ್ವರು ಸಲ್ಲಿಸಿದ್ದ ಅರ್ಜಿಯನ್ನು ನ.15ರಂದು ಹೈಕೋರ್ಟ್‌ ಮಾನ್ಯ ಮಾಡಿತ್ತು. ವಿಚಾರಣೆಯ ವೇಳೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ, ಅಧ್ಯಕ್ಷರ ಆಯ್ಕೆ ಸಂಬಂಧ 2021ರ ಏ.26 ರಂದು ನಡೆದಿದ್ದ ಸಭೆ ಮತ್ತು ಆಯ್ಕೆ ಪ್ರಕ್ರಿಯೆಗಳನ್ನು ರದ್ದುಪಡಿಸಿದೆ.

ಒಂಬತ್ತು ಜನ ಸದಸ್ಯರನ್ನು ಹೊಂದಿರುವ ವ್ಯವಸ್ಥಾಪನಾ ಸಮಿತಿಯ ಸದಸ್ಯರಲ್ಲಿ ಇಬ್ಬರು ಸರ್ಕಾರದಿಂದ ನೇಮಕಗೊಂಡಿರುವ ಸದಸ್ಯರಿರುತ್ತಾರೆ. ಗಣೇಶ್‌ ಕಿಣಿ ಬೆಳ್ವೆ ಹಾಗೂ ಚಂದ್ರಶೇಖರ ಶೆಟ್ಟಿ ಅವರು ಹೀಗೆ ಸರ್ಕಾರದಿಂದ ನೇಮಿಸಲ್ಪಟ್ಟಿದ್ದ ಸದಸ್ಯರಾಗಿದ್ದರು. ಇವರಿಬ್ಬರೂ ರಾಜಿನಾಮೆಯನ್ನು ನೀಡಿದ ನಂತರವೂ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದಲ್ಲದೆ, ಚಂದ್ರಶೇಖರ ಶೆಟ್ಟಿ ಅವರನ್ನು ಸಭೆಯು ಅಧ್ಯಕ್ಷರೆಂದು ಆಯ್ಕೆಯನ್ನೂ ಮಾಡಿತ್ತು.

ಅರ್ಜಿದಾರ ಪರ ವಾದ ಮಂಡಿಸಿದ್ದ ವಕೀಲ ಪಿ.ಪಿ.ಹೆಗ್ಡೆ, ಗಣೇಶ್ ಕಿಣಿ ಬೆಳ್ವೆ ಹಾಗೂ ಚಂದ್ರಶೇಖರ ಶೆಟ್ಟಿ ಕ್ರಮವಾಗಿ 2021ರ ಮಾ.24 ಹಾಗೂ ಏ.15ರಂದು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಇದರ ಹೊರತಾಗಿಯೂ ಅವರನ್ನು ಹಾಲಿ ಸಮಿತಿ ಸದಸ್ಯರೆಂದು ಪರಿಗಣಿಸಿ ಏ.26 ರಂದು ನಡೆದ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದು ಮಾತ್ರವೇ ಅಲ್ಲದೆ, ಚಂದ್ರಶೇಖರ ಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಇದು ಕೂನೂನುಬಾಹಿರ ಎಂಬುದು ಅರ್ಜಿದಾರರ ವಾದವಾಗಿತ್ತು.

ಅರ್ಜಿದಾರರ ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ಸರ್ಕಾರದಿಂದ ನೇಮಕಗೊಂಡ ವ್ಯವಸ್ಥಾಪನಾ ಸಮಿತಿ ಸದಸ್ಯರು ರಾಜೀನಾಮೆ ನೀಡಿದ ತಕ್ಷಣವೇ ಅದು ಸ್ವೀಕಾರವಾಗುತ್ತದೆ. ಇದರಲ್ಲಿ ಅಂಗೀಕಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಹಾಗೂ ಅದನ್ನು ಸರ್ಕಾರ ಸ್ವೀಕರಿಸುವ ಅಗತ್ಯವೂ ಇಲ್ಲ ಎಂದು ಅಭಿಪ್ರಾಯಪಟ್ಟಿತು. ಮುಂದುವರೆದು, ಸಮಿತಿಯ ಸದಸ್ಯರಲ್ಲದವರು ಸಭೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಹಾಗಿದ್ದರೂ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಿ ಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸಮಿತಿಯ ಸದಸ್ಯರೇ ಅಲ್ಲದವರನ್ನು ಅಧ್ಯಕ್ಷರಾಗಿ ನೇಮಕ ಮಾಡಲು ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟು ಚಂದ್ರಶೇಖರ ಶೆಟ್ಟಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಿತು.

Related Stories

No stories found.
Kannada Bar & Bench
kannada.barandbench.com