ಹಿರಿಯ ಸಂಶೋಧಕ ಎಂ ಎಂ ಕಲಬುರ್ಗಿ ಹತ್ಯೆ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಹೈಕೋರ್ಟ್‌ ನಕಾರ

ಡಾ. ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರ ಕೋರಿಕೆಯಂತೆ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಅಗತ್ಯ ಕ್ರಮಕೈಗೊಳ್ಳಲು ಒಳಾಡಳಿತ ಇಲಾಖೆಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪತ್ರ ಮುಖೇನ ಸೂಚಿಸಿದ್ದರು.
M M Kalburgi and Karnataka HC
M M Kalburgi and Karnataka HC
Published on

ಹಿರಿಯ ಸಂಶೋಧಕ ಎಂ ಎಂ ಕಲಬುರ್ಗಿ ಅವರ ಕೊಲೆ ಪ್ರಕರಣದ ತುರ್ತು ವಿಚಾರಣೆಗೆ ಧಾರವಾಡದಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಕೋರಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ತಿರಸ್ಕರಿಸಿದೆ. ಅಲ್ಲದೇ, ಆದ್ಯತೆ ಮೇರೆಗೆ ವಿಚಾರಣೆ ನಡೆಸಿ, ಪ್ರಕರಣ ಇತ್ಯರ್ಥಪಡಿಸುವಂತೆ ಧಾರವಾಡದ ವಿಚಾರಣಾಧೀನ ನ್ಯಾಯಾಲಯಕ್ಕೆ ಆದೇಶಿಸಿದೆ.

ಕಲಬುರ್ಗಿ ಅವರ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಅಮೋಲ್‌ ಕಾಳೆ, ವಾಸುದೇವ್‌ ಸೂರ್ಯವಂಶಿ ಮತ್ತು ಶರದ್‌ ಬಾಹುಸಾಹೇಬ್‌ ಕಲಾಸ್ಕರ್‌ ಅವರು ನಿರ್ದಿಷ್ಟ ಸಾಕ್ಷಿಗಳ ವಿಚಾರಣೆಗೆ ಆಕ್ಷೇಪಿಸಿದ್ದ ಅರ್ಜಿ ತಿರಸ್ಕರಿಸುವ ವೇಳೆ ಧಾರವಾಡದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪೂರ್ಣಿಮಾ ಎನ್‌. ಪೈ ಅವರು ವಿಶೇಷ ನ್ಯಾಯಾಲಯ ಸ್ಥಾಪನೆಗೆ ಹೈಕೋರ್ಟ್‌ ನಿರಾಕರಿಸಿರುವ ವಿಚಾರವನ್ನು ಉಲ್ಲೇಖಿಸಿದ್ದಾರೆ.

“ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ 132 ಸಾಕ್ಷಿಗಳಿದ್ದಾರೆ. ಪ್ರಾಸಿಕ್ಯೂಷನ್‌ ಪ್ರಸ್ತುತ 26ನೇ ಸಾಕ್ಷಿಯನ್ನು ವಿಚಾರಣೆ ಒಳಪಡಿಸಿದೆ. ಸಾಕ್ಷಿಗಳಲ್ಲಿ ಒಬ್ಬರಾಗಿರುವ ವೈದ್ಯರೊಬ್ಬರ ಪಾಟೀ ಸವಾಲನ್ನು ಒಂದು ವರ್ಷದಿಂದ ಮುಂದೂಡಲಾಗಿದೆ. ಡಾ. ಎಂ ಎಂ ಕಲಬುರ್ಗಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2024ರ ಆಗಸ್ಟ್‌ 3ರಂದು ಕರ್ನಾಟಕ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಂದ ಪತ್ರ ಬಂದಿದ್ದು, ಈ ಪ್ರಕರಣದ ವಿಚಾರಣೆಗೆ ಧಾರವಾಡದಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆಯ ಸಂಬಂಧದ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ. ಆದ್ಯತೆಯ ಮೇರೆಗೆ ಹಾಲಿ ಪ್ರಕರಣದ ವಿಚಾರಣೆ ನಡೆಸಿ, ಇತ್ಯರ್ಥಪಡಿಸುವಂತೆ ನಿರ್ದೇಶನ ನೀಡಲಾಗಿದೆ. ಇನ್ನೂ 100ಕ್ಕೂ ಹೆಚ್ಚು ಸಾಕ್ಷಿಗಳನ್ನು ದಾಖಲಿಸಬೇಕಿದ್ದು, ಅರ್ಜಿದಾರರ ಪರ ವಕೀಲರು ಅನಗತ್ಯ ಅರ್ಜಿಗಳನ್ನು ಸಲ್ಲಿಸುವ ಮೂಲಕ ವಿಚಾರಣೆಯನ್ನು ವಿಳಂಬಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಆದೇಶದಲ್ಲಿ ದಾಖಲಿಸಿದ್ದಾರೆ.

ಇದಕ್ಕೂ ಮುನ್ನ, 2023ರ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಸಂಶೋಧಕ ಎಂ ಎಂ ಕಲಬುರ್ಗಿ ಮತ್ತು ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆ ಪ್ರಕರಣದ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯ ರಚನೆಗೆ ಹಾಗೂ ಪೂರ್ಣಾವಧಿ ನ್ಯಾಯಾಧೀಶರ ನೇಮಕ ಮಾಡುವ ಸಂಬಂಧ ಕ್ರಮವಹಿಸುವಂತೆ ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದರು.

2023ರ ಡಿಸೆಂಬರ್‌ 2ರ ಟಿಪ್ಪಣಿಯಲ್ಲಿ ಹಿರಿಯ ಸಾಹಿತಿ ಹಾಗೂ ಸಂಶೋಧನಾ ಕ್ಷೇತ್ರದ ದಿಗ್ಗಜರಾದ ಕಲಬುರ್ಗಿ ಅವರು ಧಾರವಾಡದ ತಮ್ಮ ನಿವಾಸದಲ್ಲಿ 2015ರ ಆಗಸ್ಟ್‌ 31ರಂದು ಹತ್ಯೆಯಾಗಿದ್ದಾರೆ. 2018-19ರಲ್ಲಿ ಪ್ರಕರಣದ ಸಂಬಂಧ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಕುಟುಂಬಸ್ಥರ ವಿಚಾರಣೆ ಮುಗಿದಿದ್ದು, ವಿಚಾರಣಾ ಪ್ರಕ್ರಿಯೆ ಮುಂದುವರಿದಿದೆ. ಹತ್ಯೆಯಾಗಿ ಸಾಕಷ್ಟು ಸಮಯವಾಗಿರುವುದರಿಂದ ವಿಶೇಷ ನ್ಯಾಯಾಲಯ ರಚಿಸುವಂತೆ ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರು ಕೋರಿದ್ದು, ಈ ಬಗ್ಗೆ ಜರೂರು ಅಗತ್ಯ ಕ್ರಮವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು.

ಈಚೆಗೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡುವಾಗಲೂ ಕರ್ನಾಟಕ ಹೈಕೋರ್ಟ್‌ ವಿಶೇಷ ನ್ಯಾಯಾಲಯ ಸ್ಥಾಪನೆ ವಿಚಾರದಲ್ಲಿನ ಸರ್ಕಾರದ ವಿಳಂಬ ಧೋರಣೆಯನ್ನು ಪ್ರಸ್ತಾಪಿಸಿ ರಾಜ್ಯ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Also Read
[ಕಲಬುರ್ಗಿ, ಗೌರಿ ಹತ್ಯೆ ಪ್ರಕರಣ] ವಿಚಾರಣೆಗೆ ವಿಶೇಷ ನ್ಯಾಯಾಲಯ ರಚನೆ, ಪೂರ್ಣಾವಧಿ ನ್ಯಾಯಾಧೀಶರ ನೇಮಕ: ಸಿಎಂ ಸೂಚನೆ

ಪ್ರಕರಣದ ಹಿನ್ನೆಲೆ: 2015ರ ಆಗಸ್ಟ್‌ 30ರ ಬೆಳಗ್ಗೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಕಲಬುರ್ಗಿ ಅವರ ಮನೆಯಲ್ಲಿ ಅವರ ಮೇಲೆ ಗುಂಡು ಹಾರಿಸುವ ಮೂಲಕ ಕೊಲೆ ಮಾಡಿದ್ದರು. ಈ ಸಂಬಂಧ ಧಾರವಾಡದ ವಿದ್ಯಾಗಿರಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಆನಂತರ ವಿಶೇಷ ತನಿಖಾ ದಳವು ತನಿಖೆ ಕೈಗೊಂಡು ಅಮೋಲ್‌ ಕಾಳೆ, ಗಣೇಶ್‌ ಮಿಸ್ಕಿನ್‌, ಪ್ರವೀಣ್‌ ಚತುರ್‌, ವಾಸುದೇವ ಸೂರ್ಯವಂಶಿ, ಶರದ್‌ ಕಲಾಸ್ಕರ್‌ ಮತ್ತು ಅಮಿತ್‌ ಬಡ್ಡಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು. 2021ರ ಸೆಪ್ಟೆಂಬರ್‌ 7ರಂದು ಆರೋಪ ನಿಗದಿ ಮಾಡಲಾಗಿದ್ದು, 2022ರ ಫೆಬ್ರವರಿ 19ರಿಂದ ವಿಚಾರಣೆ ಆರಂಭವಾಗಿದೆ. ಆರೋಪ ಪಟ್ಟಿಯಲ್ಲಿ ಒಟ್ಟಾರೆ 138 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ.

Kannada Bar & Bench
kannada.barandbench.com