ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಕುರಿತು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಮತ್ತೊಮ್ಮೆ ಕಾಲಾವಕಾಶ ಕೋರಿದ ರಾಜ್ಯ ಸರ್ಕಾರದ ಮನವಿಗೆ ಮಂಗಳವಾರ ಅಸಮ್ಮತಿಸಿರುವ ಕರ್ನಾಟಕ ಹೈಕೋರ್ಟ್ ಆಗಸ್ಟ್ 23ರಂದು ಅಂತಿಮ ವಿಚಾರಣೆ ನಡೆಸುವುದಾಗಿ ಹೇಳಿತು.
ಭ್ರಷ್ಟಾಚಾರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಲೋಕಾಯುಕ್ತ/ಉಪ ಲೋಕಾಯುಕ್ತರು ಸಲ್ಲಿಸಿದ್ದ ವರದಿ ಸಂಬಂಧ ಇದುವರೆಗೂ ಕಾನೂನಿನ ಅಡಿ ರಾಜ್ಯ ಸರ್ಕಾರ ಕ್ರಮಕೈಗೊಂಡಿಲ್ಲ ಎಂದು ಅರ್ಜಿದಾರ ಸಾಯಿ ದತ್ತ ಅವರು ವಕೀಲ ಜಿ ಆರ್ ಮೋಹನ್ ಮೂಲಕ ಸಲ್ಲಿಸಿದ್ದ ಪಿಐಎಲ್ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠವು ನಡೆಸಿತು.
“ಪಿಐಎಲ್‌ಗೆ ಪ್ರತಿಕ್ರಿಯೆ ಸಲ್ಲಿಸುವ ಸಂಬಂಧ ರಾಜ್ಯ ಸರ್ಕಾರಕ್ಕೆ ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಅದಾಗ್ಯೂ ಸರ್ಕಾರ ಅಫಿಡವಿಟ್ ಸಲ್ಲಿಸಿಲ್ಲ. ಹೀಗಾಗಿ ಆಗಸ್ಟ್ 23ರಂದು ಪ್ರಕರಣವನ್ನು ಇತ್ಯರ್ಥಪಡಿಸಲಾಗುವುದು” ಎಂದು ಹೇಳಿ ಪೀಠವು ವಿಚಾರಣೆ ಮುಂದೂಡಿತು.
ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಡುವ ಕಂದಾಯ, ನಗರಾಭಿವೃದ್ಧಿ ಮತ್ತು ಲೋಕೋಪಯೋಗಿ ಇಲಾಖೆ ಹಾಗೂ ಇತರೆ ಇಲಾಖೆಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಕ್ಕಾಗಿ ಕ್ರಮಕೈಗೊಳ್ಳುವ ಸಂಬಂಧ ಲೋಕಾಯುಕ್ತ ಅಥವಾ ಉಪಲೋಕಾಯುಕ್ತರು ಕೆಎಲ್‌ಎ ಕಾಯಿದೆಯ ಸೆಕ್ಷನ್ 12(1)ರ ಅಡಿ ಸಲ್ಲಿಸಿರುವ ವರದಿಯ ಕುರಿತು ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಆದೇಶಿಸುವಂತೆ ಮನವಿ ಮಾಡಲಾಗಿದೆ.
ಕೆಎಲ್ ಕಾಯಿದೆಯ ಸೆಕ್ಷನ್ 12(1)ರ ಅಡಿ ಪ್ರಸಕ್ತ ವರ್ಷದ ಜನವರಿ 20ರ ವರೆಗೆ 342 ಪ್ರಕರಣಗಳು, ಕೆಎಲ್ ಕಾಯಿದೆಯ ಸೆಕ್ಷನ್ 12(4)ರ ಅಡಿ 436 ಹಾಗೂ ಕೆಸಿಎಸ್ (ಸಿಸಿಎ) ನಿಯಮಗಳ ಸೆಕ್ಷನ್ 14(2)(ಡಿ) ಅಡಿ 932 ಪ್ರಕರಣಗಳು ಕ್ರಮಕ್ಕೆ ಬಾಕಿ ಇವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಲೋಕಾಯುಕ್ತದ ವರದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ, ಕಂದಾಯ, ನಗಾರಭಿವೃದ್ಧಿ, ಲೋಕೋಪಯೋಗಿ, ವಾಣಿಜ್ಯ ಮತ್ತು ಕೈಗಾರಿಕೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗಣಿ ಮತ್ತು ಭೂ ವಿಜ್ಞಾನ, ಸಣ್ಣ ನೀರಾವರಿ ಮತ್ತು ಜಲ ಸಂಪನ್ಮೂಲ, ಇಂಧನ, ಗೃಹ, ಹಿಂದುಳಿದ ವರ್ಗಗಳು, ಸಹಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೃಷಿ, ತೋಟಗಾರಿಕೆ, ರೇಷ್ಮೆ, ಸಮಾಜ ಕಲ್ಯಾಣ, ಸಿಬ್ಬಂದಿ ಮತ್ತು ಆಡಳಿತ, ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪಸಂಖ್ಯಾತ ಕಲ್ಯಾಣ, ಸಾರಿಗೆ, ವಸತಿ ಮತ್ತು ಕಾರ್ಮಿಕ ಇಲಾಖೆ ಮತ್ತು ಕೆಪಿಟಿಸಿಎಲ್, ಕೆಎಸ್‌ಆರ್‌ಟಿಸಿಗೆ ಸದ್ಯದ ಸ್ಥಿತಿಗತಿ ವರದಿ ಸಲ್ಲಿಸುವಂತೆ ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಲೋಕಾಯುಕ್ತ ವರದಿಯ ಅನ್ವಯ ಕ್ರಮಕೈಗೊಳ್ಳದೇ ಕಾಲಹರಣ ಮಾಡುತ್ತಿರುವ ರಾಜ್ಯ ಸರ್ಕಾರವು ತನ್ನ ಶಾಸನಬದ್ಧ ಕರ್ತವ್ಯದಿಂದ ವಿಮುಖವಾಗಿದ್ದು, ಶಾಸನದ ಉದ್ದೇಶವನ್ನು ಹಾಳು ಮಾಡುತ್ತಿದೆ. ರಾಜ್ಯ ಸರ್ಕಾರವು ಸರಿಯಾಗಿ ಪ್ರತಿಕ್ರಿಯಿಸದಿರುವುದರಿಂದ ಸರ್ಕಾರಿ ಸಿಬ್ಬಂದಿ ಹೊಣೆಗಾರಿಕೆಯಿಂದ ವಿಮುಖವಾಗುತ್ತಿದ್ದು, ಕೆಎಲ್‌ಎ ಕಾಯಿದೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವವರಿಗೆ ಜವಾಬ್ದಾರಿ ನಿಗದಿಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.
ಪಿಐಎಲ್ ಹಿನ್ನೆಲೆಯಲ್ಲಿ ಅರ್ಜಿದಾರರ ವಾದವನ್ನು ಸಮರ್ಥಿಸಿರುವ ಲೋಕಾಯುಕ್ತ ಸಂಸ್ಥೆಯು ವಿಶೇಷ ಸರ್ಕಾರಿ ಅಭಿಯೋಜಕರಾದ ವೆಂಕಟೇಶ್ ಅರಬಟ್ಟಿ ಅವರ ಮೂಲಕ ಹೇಳಿಕೆ ದಾಖಲಿಸಿದೆ. “ಕರ್ನಾಟಕ ಲೋಕಾಯುಕ್ತ ಕಾಯಿದೆಯ ಸೆಕ್ಷನ್ 12(1) ಮತ್ತು 12(3) ಮತ್ತು ಕೆಸಿಎಸ್ (ಸಿಸಿಎ) ನಿಯಮಗಳ ಸೆಕ್ಷನ್ 14ಎ(2)(ಡಿ) ಅಡಿ ಸಲ್ಲಿಸಲಾಗಿರುವ ವರದಿಯ ಅನುಸಾರ ತುರ್ತಾಗಿ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು” ಎಂದು ಲೋಕಾಯುಕ್ತವು ಅಫಿಡವಿಟ್ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿದೆ.