ಕೊಡಗಿನ ಅವಳಿ ಕೊಲೆ ಪ್ರಕರಣ: ಆರೋಪಿಗೆ ಮಂಜೂರು ಮಾಡಿದ್ದ ಜಾಮೀನು ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್‌

ಸಿಆರ್‌ಪಿಸಿ ಸೆಕ್ಷನ್‌ 439 (2)ರ ಅಡಿ ಜಾಮೀನು ರದ್ದುಪಡಿಸಲು ಮತ್ತು ವಿಚಾರಣಾಧೀನ ನ್ಯಾಯಾಲಯದ ಆದೇಶ ಬದಿಗೆ ಸರಿಸಲು ಇದು ಸೂಕ್ತ ಪ್ರಕರಣವಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾ. ಎಚ್‌ ಪಿ ಸಂದೇಶ್‌.
Justice H P Sandesh and Karnataka HC
Justice H P Sandesh and Karnataka HC

ಕೊಡಗು ಜಿಲ್ಲೆಯ ಸೋಮವಾರ ಪೇಟೆಯಲ್ಲಿ ಅವಳಿ ಕೊಲೆ ಮಾಡಿದ್ದ ಆರೋಪಿಗೆ ವಿಚಾರಣಾಧೀನ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ರದ್ದುಪಡಿಸಿದೆ.

ಆರೋಪಿ ಡಿ ಪಿ ದಿಲೀಪ್‌ ಕುಮಾರ್‌ಗೆ ಕೊಡಗಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು ಮಂಜೂರು ಮಾಡಿದ್ದ ಜಾಮೀನು ಆದೇಶ ರದ್ದುಪಡಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರಿದ್ದ‌ ಏಕಸದಸ್ಯ ಪೀಠವು ತಕ್ಷಣ ಆರೋಪಿಯನ್ನು ವಶಕ್ಕೆ ಪಡೆಯುವಂತೆ ಆದೇಶ ಮಾಡಿದೆ.

“ಘಟನಾ ಸ್ಥಳದಲ್ಲಿ ಕೊಲೆಗೆ ಬಳಸಲಾಗಿದ್ದ ಅಸ್ತ್ರ, ರಕ್ತಸಿಕ್ತ ಉಡುಪು ದೊರೆತಿರುವಾಗ ಸಿಆರ್‌ಪಿಸಿ ಸೆಕ್ಷನ್‌ 439ರ ಅಡಿ ವಿಚಾರಣಾಧೀನ ನ್ಯಾಯಾಲಯವು ಜಾಮೀನು ಮಂಜೂರು ಮಾಡಬಾರದಿತ್ತು. ವಿಚಾರಣಾಧೀನ ನ್ಯಾಯಾಲಯದ ಆದೇಶವು ತಪ್ಪಿನಿಂದ ಕೂಡಿದ್ದು, ಸಿಆರ್‌ಪಿಸಿ ಸೆಕ್ಷನ್‌ 439 (2)ರ ಅಡಿ ಜಾಮೀನು ರದ್ದುಪಡಿಸಲು ಮತ್ತು ವಿಚಾರಣಾಧೀನ ನ್ಯಾಯಾಲಯದ ಆದೇಶ ಬದಿಗೆ ಸರಿಸಲು ಇದು ಸೂಕ್ತ ಪ್ರಕರಣವಾಗಿದೆ” ಎಂದು ಪೀಠವು ಅಭಿಪ್ರಾಯಪಟ್ಟಿದೆ. ಆರೋಪಿಗೆ 2019ರ ಜೂನ್‌ 24ರಂದು ಜಾಮೀನು ಮಂಜೂರು ಮಾಡಲಾಗಿತ್ತು.

Also Read
ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಪತ್ನಿ, ಮಗ ಹಾಗೂ ಜ್ಯೋತಿಷಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ಉಡುಪಿ ನ್ಯಾಯಾಲಯ

ಆದೇಶದ ಪ್ರತಿಯನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು ಮತ್ತು ವಿಶೇಷ ನ್ಯಾಯಾಧೀಶರಿಗೆ ಕಳುಹಿಸಿಕೊಡಲು ರಿಜಿಸ್ಟ್ರಿಗೆ ನ್ಯಾಯಾಲಯ ಆದೇಶ ಮಾಡಿದೆ. “ಒಂದೊಮ್ಮೆ ಆದೇಶ ಮಾಡಿದ ನ್ಯಾಯಾಧೀಶರು ವರ್ಗಾವಣೆಗೊಂಡಿದ್ದರೆ ಅವರ ಶೈಕ್ಷಣಿಕ ಉದ್ದೇಶಕ್ಕಾಗಿ ಈ ಆದೇಶವನ್ನು ಅವರಿಗೆ ಕಳಿಸಬೇಕು. ಮುಂದೆ ಇಂಥ ಆದೇಶ ಮಾಡದಂತೆ ತಿಳಿಸಬೇಕು” ಎಂದು ಪೀಠವು ಆದೇಶದಲ್ಲಿ ವಿವರಿಸಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಲ್ತೆ ಗ್ರಾಮದಲ್ಲಿ 2019ರ ಏಪ್ರಿಲ್‌ 30ರಂದು ಕೊಲೆ ನಡೆದಿತ್ತು. ಆರೋಪಿ ಡಿ ಪಿ ದಿಲೀಪ್‌ ಕುಮಾರ್‌ ಅವರು ಕಾಲು ಹಾದಿ ಬಳಕೆಗೆ ಸಂಬಂಧಿಸಿದಂತೆ ಉಂಟಾದ ಮನಸ್ತಾಪದಲ್ಲಿ ಕವಿತಾ (45 ವರ್ಷ) ಮತ್ತು ಅವರ ಪುತ್ರಿ ಜಯಶ್ರೀ (17 ವರ್ಷ) ಅವರನ್ನು ಕೊಲೆ ಮಾಡಿದ್ದರು. ಪ್ರಕರಣವನ್ನು ಉಲ್ಲೇಖಿಸಿದ್ದ ಹೈಕೋರ್ಟ್‌ನಲ್ಲಿ ಸರ್ಕಾರಿ ವಕೀಲರಾಗಿರುವ ವಿನಾಯಕ ವಿ ಎಸ್‌ ಅವರು “ಮರಣೋತ್ತರ ವರದಿಯಲ್ಲಿ ಆರೋಪಿಯ ನಡೆಯು ಎಷ್ಟು ಕ್ರೌರ್ಯದಿಂದ ಕೂಡಿತ್ತು ಎಂಬುದು ಸ್ಪಷ್ಟವಾಗಿದೆ. ಮೃತ ದೇಹಗಳಲ್ಲಿ ಹಲವು ಗಾಯಗಳು ಪತ್ತೆಯಾಗಿದ್ದು, ಹತ್ಯೆ ಬಳಸಲಾಗಿದ್ದ ಸಾಧನವನ್ನು ಹೊರತೆಗೆಯಲಾಗಿದೆ” ಎಂದು ಪೀಠದ ಗಮನ ಸೆಳೆದಿದ್ದರು.

Attachment
PDF
Dileep Kumar versus State of Karnataka.pdf
Preview

Related Stories

No stories found.
Kannada Bar & Bench
kannada.barandbench.com