

ಪತ್ನಿ ಮತ್ತು ಆಕೆಯ ಕುಟುಂಬದವರು ಎಚ್‌ಐವಿ/ಏಡ್ಸ್‌ನಿಂದ ಬಳಲುತ್ತಿದ್ದೇನೆ ಎಂದು ನಿಂದಿಸಿದ್ದಾರೆ ಎಂಬ ಆಧಾರದಲ್ಲಿ ಪತಿಗೆ ಕೌಟುಂಬಿಕ ನ್ಯಾಯಾಲಯ ಮಂಜೂರು ಮಾಡಿದ್ದ ವಿಚ್ಚೇದನ ಆದೇಶವನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ಬದಿಗೆ ಸರಿಸಿದ್ದು, ದಾಖಲೆಯಿಲ್ಲದೇ ಅಂಥ ಗಂಭೀರ ಆರೋಪವನ್ನು ಒಪ್ಪಲಾಗದು ಎಂದಿದೆ.
ಪತಿ ಪರವಾಗಿರುವ ವಿಚ್ಚೇದನ ಆದೇಶ ಬದಿಗೆ ಸರಿಸುವಂತೆ ಕೋರಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ಡಾ. ಚಿಲ್ಲಕೂರ್ ಸುಮಲತಾ ಅವರ ವಿಭಾಗೀಯ ಪೀಠ ಪುರಸ್ಕರಿಸಿದ್ದು, ಹೊಸದಾಗಿ ಪ್ರಕರಣವನ್ನು ಪರಿಗಣಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಮರಳಿಸಿದೆ.
ಪತ್ನಿ ಮತ್ತು ಆಕೆಯ ಕುಟುಂಬದವರು ವಿನಾ ಕಾರಣ ತಾನು ಎಚ್‌ಐವಿ/ಏಡ್ಸ್‌ನಿಂದ ಬಳಲುತ್ತಿದ್ದೇನೆ ಎಂದು ಕೆಟ್ಟದಾಗಿ ನಿಂದಿಸಿದ್ದಾರೆ. ಹೀಗಾಗಿ, ಹಿಂದೂ ವಿವಾಹ ಕಾಯಿದೆ 1955ರ ಅಡಿ ವಿಚ್ಚೇದನ ನೀಡುವಂತೆ ಪತಿ ಕೋರಿದ್ದರು. ಇದನ್ನು ಬೀದರ್‌ನ ಕೌಟುಂಬಿಕ ನ್ಯಾಯಾಲಯವು ಪುರಸ್ಕರಿಸಿತ್ತು. ಈ ಆದೇಶವನ್ನು ಆತನ ಪತ್ನಿ ಪ್ರಶ್ನಿಸಿದ್ದರು.
“ಎಚ್‌ಐವಿ/ಏಡ್ಸ್ ಆರೋಪವು ಸಾಬೀತಾದಾರೆ ನಿಸ್ಸಂಶಯವಾಗಿ ಅದು ಮಾನಸಿಕ ಕ್ರೌರ್ಯವಾಗುತ್ತದೆ. ಆದರೆ, ಈ ಆರೋಪಕ್ಕೆ ಪೂರಕವಾಗಿ ಯಾವುದೇ ದಾಖಲೆಗಳು ಇಲ್ಲ. ಕೌಟುಂಬಿಕ ನ್ಯಾಯಾಲಯವು, ಪತಿಯ ಹೇಳಿಕೆಗಳನ್ನು ಸ್ವೀಕರಿಸುವ ಮೂಲಕ, ಸಾಕ್ಷ್ಯದ ಮಿತಿಯನ್ನು ಪುರಾವೆಯಿಂದ ಕೇವಲ ಆರೋಪಕ್ಕೆ ಪರಿಣಾಮಕಾರಿಯಾಗಿ ಬದಲಾಯಿಸಿದೆ. ಇದಕ್ಕೆ ಅವಕಾಶವಿಲ್ಲ. ಕ್ರೌರ್ಯ ಸಾಬೀತುಪಡಿಸಲು ಸೂಕ್ತ ಮತ್ತು ಆಸಕ್ತಿದಾಯಕ ದಾಖಲೆಗಳನ್ನು ಪತಿ ಒದಗಿಸಿಲ್ಲ” ಎಂದು ಆದೇಶದಲ್ಲಿ ಹೇಳಿದೆ.
“ಪತಿಯು ಮತ್ತೊಬ್ಬ ಮಹಿಳೆಯ ಜೊತೆ ಜೀವನ ನಡೆಸುತ್ತಿದ್ದಾಗ ಆತನ ಜೊತೆ ತಾನು ಬದುಕುವುದಿಲ್ಲ ಎಂದು ಪತ್ನಿ ನಿರ್ಧರಿಸುವುದು ತೊರೆಯುವಿಕೆ ಆಗುವುದಿಲ್ಲ. ಏಕಕಾಲಕ್ಕೆ ಮತ್ತೊಬ್ಬ ಮಹಿಳೆಯ ಜೊತೆ ಸಂಬಂಧ ಹೊಂದಿರುವ ವ್ಯಕ್ತಿಯ ಜೊತೆ ಬದುಕುವಂತೆ ಕಾನೂನು ಅಥವಾ ನ್ಯಾಯಯುತವಾಗಿ ಹೇಳಲಾಗದು” ಎಂದು ಹೈಕೋರ್ಟ್ ಹೇಳಿದೆ.
ಪತಿ ಪರ ವಕೀಲ ಹಣಮಂತರಾಯ ಸಿಂದೋಲ್ ಅವರು “ಸಾಕ್ಷಿ ಪರಿಗಣಿಸುವಾಗ ಕೌಟುಂಬಿಕ ನ್ಯಾಯಾಲಯವು ವಿರುದ್ಧ ನಿಲುವು ತಳೆದಿದೆ. ಯಾವುದೇ ಸಾಕ್ಷಿ ಇಲ್ಲದೇ ಪತಿಯ ಆರೋಪವನ್ನು ಒಪ್ಪಿಕೊಂಡಿರುವ ಕೌಟುಂಬಿಕ ನ್ಯಾಯಾಲಯವು ದಾಖಲೆ ಇಲ್ಲ ಎಂದು ಪತ್ನಿಯ ವಾದವನ್ನು ತಳ್ಳಿಹಾಕಿದೆ. ಪತಿಯು ಅನೈತಿಕ ಸಂಬಂಧ ಹೊಂದಿದ್ದರಿಂದ ಪತ್ನಿ ಪೋಷಕರ ಮನೆಯಲ್ಲಿ ನೆಲೆಸಿದ್ದಾರೆ” ಎಂದು ವಾದಿಸಿದ್ದರು.
ಪ್ರಕರಣದ ಹಿನ್ನೆಲೆ: ದಂಪತಿಯು 2002ರ ಜೂನ್ 16ರಂದು ವಿವಾಹವಾಗಿದ್ದು, ಆನಂತರ ಇಬ್ಬರು ಮಕ್ಕಳು ದಂಪತಿಗೆ ಜನಿಸಿದ್ದರು. ಪತ್ನಿಯು ಖಾಸಗಿ ಶಾಲೆಯಲ್ಲಿ ಪ್ರಿನ್ಸಿಪಾಲ್ ಆಗಿದ್ದು, ಪತಿ ಸಾಂಖ್ಯಿಕ ಇನ್‌ಸ್ಪೆಕ್ಟರ್ ಆಗಿದ್ದಾರೆ.
ಮದುವೆಯ ಆರಂಭದಲ್ಲಿ ಜೀವನ ಚೆನ್ನಾಗಿ ನಡೆದಿದ್ದು, ಆನಂತರ ಇಬ್ಬರು ಪುತ್ರರೊಂದಿಗೆ ಪತ್ನಿ ತವರು ಮನೆಗೆ ಸೇರಿದ್ದಳು. ಸಾಕಷ್ಟು ಬಾರಿ ಕರೆದರೂ ತನ್ನ ಜೊತೆ ಬಂದಿಲ್ಲ. ತನ್ನನ್ನು ಕೆಟ್ಟದಾಗಿ ನಿಂದಿಸಿದ್ದಾರೆ ಎಂದು ಪತಿ ವಿಚ್ಚೇದನ ಕೋರಿದ್ದರು.
ಇತ್ತ ಪತ್ನಿಯು ಅನೈತಿಕ ಸಂಬಂಧ ಹೊಂದಿರುವ ಪತಿಗೆ ಆ ಸಂಬಂಧಿಂದಲೂ ಎರಡು ಮಕ್ಕಳಾಗಿದ್ದು, ಈ ಕಾರಣಕ್ಕಾಗಿ ಅವರನ್ನು ತೊರೆದಿರುವುದಾಗಿ ವಾದಿಸಿದ್ದರು.